ಪಿಎಂ ಇಂಟರ್ನ್ಶಿಪ್ ಸ್ಕೀಮ್; ಶೇ. 80ಕ್ಕೂ ಹೆಚ್ಚು ಭಾರತೀಯ ಕಂಪನಿಗಳಿಂದ ಬೆಂಬಲ
PM Internship scheme: ಟೀಮ್ಲೀಸ್ ಎಜ್ಟೆಕ್ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆಗೆ ಶೇ. 81ರಷ್ಟು ಕಾರ್ಪೊರೇಟ್ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸವೆ. ಇಂಟರ್ನ್ಶಿಪ್ ಮಾಡಿದ ಶೇ. 10ಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳನ್ನು ಪೂರ್ಣ ಉದ್ಯೋಗಕ್ಕೆ ಸೇರಿಸಿಕೊಳ್ಳಲು ಶೇ. 73ರಷ್ಟು ಕಂಪನಿಗಳು ಇಚ್ಛಿಸಿವೆ. ಪಿಎಂ ಇಂಟರ್ನ್ಶಿಪ್ ಯೋಜನೆಯಲ್ಲಿ ಯುವಕ ಮತ್ತು ಯುವತಿಯರಿಗೆ ದೊಡ್ಡ ಕಂಪನಿಗಳಲ್ಲಿ ಒಂದು ವರ್ಷದ ನೈಜ ಕೆಲಸದ ತರಬೇತಿ ಸಿಗುತ್ತದೆ.
ನವದೆಹಲಿ, ಜನವರಿ 17: ಕಳೆದ ವರ್ಷ ಆರಂಭವಾದ ಪಿಎಂ ಇಂಟರ್ನ್ಶಿಪ್ ಸ್ಕೀಮ್ಗೆ ಭಾರತೀಯ ಕಾರ್ಪೊರೇಟ್ ವಲಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಹೆಚ್ಚಿನ ಕಂಪನಿಗಳು ಈ ಮಹತ್ವದ ಯೋಜನೆಗೆ ಬೆಂಬಲ ನೀಡಿವೆ. ಟೀಮ್ಲೀಸ್ ಎಜ್ಟೆಕ್ ಎನ್ನುವ ಕಂಪನಿಯ ವರದಿಯೊಂದರ ಪ್ರಕಾರ ಶೇ. 81ರಷ್ಟು ಭಾರತೀಯ ಕಂಪನಿಗಳು ಇಂಟರ್ನ್ಶಿಪ್ ಯೋಜನೆಗೆ ಬೆಂಬಲ ನೀಡಿವೆ. 932 ಕಂಪನಿಗಳನ್ನು ಸಮೀಕ್ಷೆಗೆ ಒಳಪಡಿಸಿದ ಬಳಿಕ ಕೆಲ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕಂಪನಿಗಳಲ್ಲಿ ಶೇ. 73ರಷ್ಟು ಕಂಪನಿಗಳು ಇಂಟರ್ನ್ಶಿಪ್ ಬಳಿಕ ಶೇ. 10ರಷ್ಟು ಅಭ್ಯರ್ಥಿಗಳನ್ನು ಪೂರ್ಣಪ್ರಮಾಣದ ಉದ್ಯೋಗಕ್ಕೆ ಸೇರಿಸಿಕೊಳ್ಳಲು ಇಚ್ಛಿಸಿವೆ. ಶೇ. 76ರಷ್ಟು ಕಂಪನಿಗಳು ಇಂಟರ್ನ್ಶಿಪ್ ಅಭ್ಯರ್ಥಿಗಳನ್ನು ತಂತ್ರಜ್ಞಾನ ಕೆಲಸಗಳಲ್ಲಿ ನಿಯೋಜಿಸಲು ಆಸಕ್ತಿ ತೋರಿವೆ.
ಇದನ್ನೂ ಓದಿ: ಹತ್ತಿ ಬೆಳೆಗಾರರಿಗೆ ಡ್ರಿಪ್ ಇರಿಗೇಶನ್ ಸಿಸ್ಟಂ; ಬಜೆಟ್ನಲ್ಲಿ 500 ಕೋಟಿ ರೂ ನೀಡಲು ಒತ್ತಾಯ
ಶೇ. 81ರಷ್ಟು ಕಂಪನಿಗಳು ಈ ಪಿಎಂ ಇಂಟರ್ನ್ಶಿಪ್ ಸ್ಕೀಮ್ ಅನ್ನು ಪೂರ್ಣವಾಗಿ ಬೆಂಬಲಿಸಿದ್ದು, ಇದು ಎಲ್ಲಾ ಕಾರ್ಪೊರೇಟ್ ಕಂಪನಿಗಳಿಗೂ ವಿಸ್ತರಣೆ ಆಗಬೇಕು ಎಂದು ಅಭಿಪ್ರಾಯಪಟ್ಟಿವೆ. ಹಾಗೆಯೇ, ಒಂದು ವರ್ಷದ ಜೊತೆಗೆ ಕಡಿಮೆ ಅವಧಿಯ ಇಂಟರ್ನ್ಶಿಪ್ಗಳಿಗೂ ಈ ಸ್ಕೀಮ್ ಅಡಿಯಲ್ಲಿ ಅವಕಾಶ ನೀಡಬೇಕು ಎಂದು ಹಲವು ಕಂಪನಿಗಳು ವಾದಿಸಿವೆ ಎಂದು ಟೀಮ್ಲೀಸ್ ಎಜ್ಟೆಕ್ ವರದಿಯಲ್ಲಿ ತಿಳಿಸಲಾಗಿದೆ.
ಏನಿದು ಪಿಎಂ ಇಂಟರ್ನ್ಶಿಪ್ ಯೋಜನೆ?
ಓದು ಮುಗಿಸಿರುವ ಯುವಕ ಮತ್ತು ಯುವತಿಯರಿಗೆ ದೊಡ್ಡ ಕಂಪನಿಗಳಲ್ಲಿ ಒಂದು ವರ್ಷದ ತರಬೇತಿ (ಇಂಟರ್ನ್ಶಿಪ್) ನೀಡುವ ಕಾರ್ಯವೇ ಇಂಟರ್ನ್ಶಿಪ್ ಸ್ಕೀಮ್. ಈ ಒಂದು ವರ್ಷದಲ್ಲಿ ಸರ್ಕಾರದಿಂದ ಇಂಟರ್ನೀಗಳಿಗೆ ಸ್ಟೈಪೆಂಡ್ ರೀತಿಯಲ್ಲಿ ಪ್ರತೀ ತಿಂಗಳು 5,000 ರೂ ನೀಡಲಾಗುತ್ತದೆ.
ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಥವಾ ಸಿಎಸ್ಆರ್ ಫಂಡ್ ಅತಿ ಹೆಚ್ಚು ಹೊಂದಿರುವ ಟಾಪ್ 500 ಕಂಪನಿಗಳನ್ನು ಸದ್ಯ ಇಂಟರ್ನ್ಶಿಪ್ ಸ್ಕೀಮ್ಗೆ ಆಯ್ಕೆ ಮಾಡಲಾಗಿದೆ. ಇಂಟರ್ನ್ ಆಗಬಯಸುವ ಅಭ್ಯರ್ಥಿಗಳು ಹಾಗೂ ಕಂಪನಿಗಳಿಗೆ ಒಂದು ಪ್ರತ್ಯೇಕ ಪ್ಲಾಟ್ಫಾರ್ಮ್ ರೂಪಿಸಲಾಗಿದ್ದು, ಅಲ್ಲಿ ಅಭ್ಯರ್ಥಿಗಳ ವಿದ್ಯಾಭ್ಯಾಸ ಮತ್ತು ಆಸಕ್ತಿ ಕ್ಷೇತ್ರಗಳ ಅನುಸಾರ ಪಟ್ಟಿ ಮಾಡಲಾಗುತ್ತದೆ. ಕಂಪನಿಗಳು ತಮಗೆ ಸೂಕ್ತವೆನಿಸುವ ಅಭ್ಯರ್ಥಿಗಳನ್ನು ಇಂಟರ್ನ್ಶಿಪ್ಗೆ ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಸ್ಟಾರ್ಟಪ್ಗಳ ಸಂಖ್ಯೆ 10 ವರ್ಷದಲ್ಲಿ 400 ಪಟ್ಟು ಹೆಚ್ಚಳ; ವಿಶ್ವದ ಸ್ಟಾರ್ಟಪ್ ಅಡ್ಡೆಯಾಗುತ್ತಿದೆ ಭಾರತ
ಕಂಪನಿಗಳು ತಮ್ಮ ಸಿಎಸ್ಆರ್ ಫಂಡ್ನಿಂದ ಹಣವನ್ನು ಈ ಇಂಟರ್ನೀಗಳ ತರಬೇತಿ ವೆಚ್ಚಕ್ಕೆ ಬಳಸಬಹುದು.
ಪಿಎಂ ಇಂಟರ್ನ್ಶಿಪ್ ಯೋಜನೆಗೆ ಯುವಜನರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ಮೊದಲ ವರ್ಷದ ಇಂಟರ್ನ್ಶಿಪ್ಗೆ ಆರು ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 1.27 ಲಕ್ಷ ಇಂಟರ್ನ್ ಅವಕಾಶಗಳಿವೆ. ಒಟ್ಟು ಒಂದು ಕೋಟಿಗೂ ಅಧಿಕ ಯುವಕ ಮತ್ತು ಯುವತಿಯರಿಗೆ ಈ ಯೋಜನೆಯಡಿ ತರಬೇತಿ ನೀಡುವ ಗುರಿ ಸರ್ಕಾರದ್ದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ