ಸ್ಟಾರ್ಟಪ್ಗಳ ಸಂಖ್ಯೆ 10 ವರ್ಷದಲ್ಲಿ 400 ಪಟ್ಟು ಹೆಚ್ಚಳ; ವಿಶ್ವದ ಸ್ಟಾರ್ಟಪ್ ಅಡ್ಡೆಯಾಗುತ್ತಿದೆ ಭಾರತ
National startup day: 2016ರ ಜನವರಿ 16ರಂದು ಸ್ಟಾರ್ಟಪ್ ಇಂಡಿಯಾ ಯೋಜನೆ ಆರಂಭಿಸಲಾಯಿತು. ಇದೇ ಜನವರಿ 16 ಅನ್ನು ನ್ಯಾಷನಲ್ ಸ್ಟಾರ್ಟಪ್ ಡೇ ಎಂದು ಆಚರಿಸಲಾಗುತ್ತಿದೆ. ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಸ್ಟಾರ್ಟಪ್ಗಳ ಸಂಖ್ಯೆ 400 ಇತ್ತು. ಇವತ್ತು ಅದು 1.59 ಲಕ್ಷ ಆಗಿದೆ. ವಿಶ್ವದಲ್ಲಿ ಅತಿಹೆಚ್ಚು ಸ್ಟಾರ್ಟಪ್ಗಳಿರುವ ದೇಶಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನ ಇದೆ.
ಇವತ್ತು ಜನವರಿ 16, ರಾಷ್ಟ್ರೀಯ ನವೋದ್ಯಮ ದಿನ (National Startup day). ಭಾರತ ಈಗ ವಿಶ್ವದಲ್ಲೇ ಮೂರನೇ ಅತಿದೊಡ್ಡ ಸ್ಟಾರ್ಟಪ್ ಇಕೋಸಿಸ್ಟಂ ಹೊಂದಿದೆ. ಅತಿಹೆಚ್ಚು ಸ್ಟಾರ್ಟಪ್ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಬಿಟ್ಟರೆ ಭಾರತದಲ್ಲೇ ಅತಿಹೆಚ್ಚು ಸ್ಟಾರ್ಟಪ್ಗಳಿರುವುದು. ಒಂದು ದೇಶದ ಅರ್ಥವ್ಯವಸ್ಥೆಯ ಜೀವಂತಿಕೆಗೆ ಸಾಕ್ಷಿಯಾಗಿ ನಿಲ್ಲುವುದು ಅದರಲ್ಲಿರುವ ಸ್ಟಾರ್ಟಪ್ಗಳು. 2015ರಲ್ಲಿ ಭಾರತದಲ್ಲಿ ಇದ್ದ ಮಾನ್ಯ ಸ್ಟಾರ್ಟಪ್ಗಳ ಸಂಖ್ಯೆ 400 ಮಾತ್ರ. ಈಗ ಅದು 1.60 ಲಕ್ಷ ಸಮೀಪದಷ್ಟು ಸಂಖ್ಯೆಯ ಸ್ಟಾರ್ಟಪ್ಗಳಿವೆ. ಎಂಟ್ಹತ್ತು ವರ್ಷದಲ್ಲಿ ಸ್ಟಾರ್ಟಪ್ಗಳ ಸಂಖ್ಯೆ 400 ಪಟ್ಟು ಹೆಚ್ಚಾಗಿರುವುದು ಸಾಮಾನ್ಯ ಸಂಗತಿ ಅಲ್ಲ.
ಸರ್ಕಾರಿ ಸ್ವಾಮ್ಯದ ಡಿಪಿಐಐಟಿಯಿಂದ ಮಾನ್ಯತೆ ಪಡೆದ ಸ್ಟಾರ್ಟಪ್ಗಳ ಸಂಖ್ಯೆ ಜನವರಿ 15ರವರೆಗೆ 1.59 ಲಕ್ಷ ಎನ್ನಲಾಗಿದೆ. ಈ ಅಧಿಕೃತ ಸ್ಟಾರ್ಟಪ್ಗಳಿಂದ ಸೃಷ್ಟಿಯಾದ ನೇರ ಉದ್ಯೋಗ 16.6 ಲಕ್ಷ. ಐಟಿ ಸರ್ವಿಸ್ ಕ್ಷೇತ್ರದ ಸ್ಟಾರ್ಟಪ್ಗಳು 2.04 ಲಕ್ಷ ಉದ್ಯೋಗಗಳನ್ನು ಒದಗಿಸಿವೆ. ಹೆಲ್ತ್ಕೇರ್ ಮತ್ತು ಲೈಫ್ಸೈನ್ಸಸ್ ಕ್ಷೇತ್ರಗಳ ಸ್ಟಾರ್ಟಪ್ಗಳು ಕ್ರಮವಾಗಿ 1.47 ಲಕ್ಷ ಹಾಗೂ 94,000 ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ನಿನ್ನೆ (ಜ. 15) ಮಾಹಿತಿ ನೀಡಿದೆ.
ಇದನ್ನೂ ಓದಿ: ಭಾರತದ ಆರ್ಥಿಕತೆ ಮುಂದಿನ ವರ್ಷದೊಳಗೆ 4ನೇ ಸ್ಥಾನಕ್ಕೇರಲಿದೆ: ಪಿಎಚ್ಡಿಸಿಸಿಐ ನಿರೀಕ್ಷೆ
ಸ್ಟಾರ್ಟಪ್ ಇಂಡಿಯಾ ಎನ್ನುವ ಮಹೋನ್ನತ ಕನಸು
ಭಾರತದಲ್ಲಿ ಸ್ಟಾರ್ಟಪ್ ಇಕೋಸಿಸ್ಟಂ ಸ್ಥಾಪಿಸುವ ಕನಸು 2016ರಲ್ಲಿ ಸಾಕಾರಗೊಂಡಿತು. ಆ ವರ್ಷ ಜನವರಿ 16ರಂದು ಸರ್ಕಾರವು ಸ್ಟಾರ್ಟಪ್ ಇಂಡಿಯಾ ಯೋಜನೆ ಚಾಲನೆಗೊಳಿಸಿತು. ಅದೇ ದಿನವನ್ನು 2022ರಿಂದ ರಾಷ್ಟ್ರೀಯ ಸ್ಟಾರ್ಟಪ್ ದಿನವಾಗಿ ಆಚರಿಸಲಾಗುತ್ತಿದೆ.
ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ ನಗರಗಳು ಸ್ಟಾರ್ಟಪ್ಗಳಿಗೆ ಹೆಸರುವಾಸಿಯಾಗಿವೆ. ಅದರಲ್ಲೂ ಸಿಲಿಕಾನ್ ಸಿಟಿ ಎನಿಸಿದ ಬೆಂಗಳೂರು ಭಾರತದ ಸ್ಟಾರ್ಟಪ್ ರಾಜಧಾನಿಯೂ ಎನಿಸಿದೆ. ಹೆಚ್ಚಿನ ಸ್ಟಾರ್ಟಪ್ಗಳು ಬೆಂಗಳೂರಿನಲ್ಲಿವೆ.
ಸ್ಟಾರ್ಟಪ್ ಇಂಡಿಯಾ ಅಭಿಯಾನ ಆರಂಭವಾದಾಗ 120 ಜಿಲ್ಲೆಗಳಲ್ಲಿ ಸ್ಟಾರ್ಟಪ್ಗಳ ಸ್ಥಾಪನೆಯಾಗಿತ್ತು. ಈಗ 750 ಜಿಲ್ಲೆಗಳಲ್ಲಿ ಸ್ಟಾರ್ಟಪ್ಗಳಿವೆ. ಭಾರತದಲ್ಲಿ ಒಟ್ಟು 788 ಜಿಲ್ಲೆಗಳಿದ್ದು, ಉಳಿದ 38 ಜಿಲ್ಲೆಗಳಲ್ಲೂ ನವೋದ್ಯಮಗಳು ಸ್ಥಾಪನೆಯಾಗುವ ಕಾಲ ದೂರವಿಲ್ಲ.
ಇದನ್ನೂ ಓದಿ: ಎಂಟನೇ ವೇತನ ಆಯೋಗ ಸ್ಥಾಪನೆಗೆ ಕೇಂದ್ರ ಸಂಪುಟ ಅಸ್ತು; ಸರ್ಕಾರಿ ನೌಕರರಿಗೆ ಸಖತ್ ಖುಷಿ ಸುದ್ದಿ
ಸ್ಟಾರ್ಟಪ್ಗಳು ಯಾಕೆ ಮುಖ್ಯ?
ನವೋದ್ಯಮಗಳು ಮಾಮೂಲಿಯ ಬಿಸಿನೆಸ್ಗಳಿಗಿಂತ ಭಿನ್ನವಾಗಿವೆ. ಭಿನ್ನ ಆಲೋಚನೆ, ನಾವೀನ್ಯತೆ, ಸಾಹಸ ಪ್ರವೃತ್ತಿ, ಹೊಸತನ ಇವೇ ಮುಂತಾದ ವಿಶೇಷತೆಗಳು ಸ್ಟಾರ್ಟಪ್ಗಳಿಗಿವೆ. ವಿಭಿನ್ನ ಆಲೋಚನೆಗಳೊಂದಿಗೆ ಇವು ಆರಂಭವಾಗುತ್ತವೆ. ವೈಫಲ್ಯದ ಸಾಧ್ಯತೆ ಇದ್ದರೂ ಈ ಸ್ಟಾರ್ಟಪ್ಗಳ ಕನಸು ಬತ್ತುವುದಿಲ್ಲ. ಅಂತೆಯೇ, ಒಂದು ದೇಶದ ಆರ್ಥಿಕತೆಯ ಜೀವಂತಿಕೆಗೆ ಈ ಸ್ಟಾರ್ಟಪ್ಗಳು ಸಾಕ್ಷೀಭೂತವಾಗಿರುತ್ತವೆ. ಹೆಚ್ಚು ಉದ್ಯೋಗ ಸೃಷ್ಟಿಗೂ ಈ ನವೋದ್ಯಮಗಳು ಕಾರಣವಾಗುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ