ಬೆಂಗಳೂರಿನಲ್ಲಿ ಮೊದಲ ಆ್ಯಪಲ್ ಸ್ಟೋರ್ ಸೆ. 2ರಂದು ಆರಂಭ; ದಿಲ್ಲಿ ಸ್ಟೋರ್ನಷ್ಟು ದೊಡ್ಡದಿದೆ ಇದು
Apple store in Bengaluru: ಬೆಂಗಳೂರಿನ ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದಲ್ಲಿ ಹೊಸ ಆ್ಯಪಲ್ ಸ್ಟೋರ್ ಆರಂಭವಾಗುತ್ತಿದೆ. ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಆ್ಯಪಲ್ ಹೆಬ್ಬಾಳ್ ಸ್ಟೋರ್ ಸೆಪ್ಟೆಂಬರ್ 2ರಂದು ಶುರುವಾಗಲಿದೆ. 2023ರಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ರೀಟೇಲ್ ಸ್ಟೋರ್ ಆರಂಭಿಸಿದ್ದ ಆ್ಯಪಲ್ಗೆ ಭಾರತದಲ್ಲಿ ಇದು ಮೂರನೇ ಸ್ಟೋರ್ ಆಗಿದೆ.

ಬೆಂಗಳೂರು, ಆಗಸ್ಟ್ 21: ಭಾರತದಲ್ಲಿ ಆ್ಯಪಲ್ ಕಂಪನಿಯ (Apple) ಮೂರನೇ ಸ್ಟೋರ್ ಬೆಂಗಳೂರಿನಲ್ಲಿ ಆರಂಭವಾಗುತ್ತಿದೆ. ಮುಂಬೈ ಹಾಗೂ ದೆಹಲಿಯಲ್ಲಿ ರೀಟೇಲ್ ಸ್ಟೋರ್ ತೆರೆದಿರುವ ಆ್ಯಪಲ್ ಇದೀಗ ಬೆಂಗಳೂರಿನಲ್ಲಿ ಸೆಪ್ಟೆಂಬರ್ 2ರಂದು ಹೊಸ ಸ್ಟೋರ್ ತೆರೆಯುತ್ತಿದೆ. ಆ್ಯಪಲ್ ಹೆಬ್ಬಾಳ್ (Apple Hebbal) ಎಂದು ಕರೆಯಲಾಗುವ ಈ ಸ್ಟೋರ್ ಬೆಂಗಳೂರಿನ ಬ್ಯಾಟರಾಯನಪುರ ಬಳಿಯ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ (Phoenix Mall of Asia) ಸ್ಥಾಪನೆಯಾಗಿದೆ. ಸೆಪ್ಟೆಂಬರ್ 2ಕ್ಕೆ ಇದು ಸಾರ್ವಜನಿಕರಿಗೆ ಅನಾವರಣಗೊಳ್ಳಲಿದೆ.
ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದಲ್ಲಿರುವ ಬೃಹತ್ತಾದ ಫೀನಿಕ್ಸ್ ಮಾಲ್ನಲ್ಲಿ 8,000 ಚದರಡಿ ವಿಸ್ತೀರ್ಣದಲ್ಲಿ ಆ್ಯಪಲ್ ಸ್ಟೋರ್ ನಿರ್ಮಾಣವಾಗಿದೆ. ಸ್ಟೋರ್ನ ಬ್ಯಾರಿಕೇಡ್ ಅನ್ನು ಇಂದು ಗುರುವಾರ ಅನಾವರಣಗೊಳಿಸಲಾಗಿದೆ. ಭಾರತದ ರಾಷ್ಟ್ರಪಕ್ಷಿಯಾದ ನವಿಲಿನ ಗರಿ ಥೀಮ್ನಲ್ಲಿ ಆ್ಯಪಲ್ ವಿನ್ಯಾಸವನ್ನು ಈ ಬ್ಯಾರಿಕೇಡ್ನಲ್ಲಿ ಕಾಣಬಹುದು.
ಇದನ್ನೂ ಓದಿ: Apple Office: ಬೆಂಗಳೂರಿನಲ್ಲಿ ಸಾವಿರ ಕೋಟಿ ರೂಗೆ ಕಚೇರಿ ಸ್ಥಳ ಬಾಡಿಗೆಗೆ ಪಡೆದ ಆ್ಯಪಲ್ ಕಂಪನಿ
ಮುಂಬೈನ ಆ್ಯಪಲ್ ಬಿಕೆಸಿಗೆ ಹೋಲಿಸಿದರೆ ಆ್ಯಪಲ್ ಹೆಬ್ಬಾಳ ಚಿಕ್ಕದಾಗುತ್ತದೆ. ಆ್ಯಪಲ್ ಬಿಕೆಸಿ 20,800 ಚದರಡಿ ವಿಸ್ತೀರ್ಣ ಹೊಂದಿದೆ. ಅದು ಭಾರತದ ಮೊದಲ ಆ್ಯಪಲ್ ಸ್ಟೋರ್ ಎನಿಸಿದೆ. ದೆಹಲಿಯಲ್ಲಿರುವ ಆ್ಯಪಲ್ ಸಾಕೇತ್ ಬಹುತೇಕ 10,000 ಚದರಡಿ ಆಸುಪಾಸಿನಷ್ಟು ವಿಸ್ತೀರ್ಣ ಹೊಂದಿದೆ.
ಆ್ಯಪಲ್ ಹೆಬ್ಬಾಳವು ಅದರ ಮೂರನೇ ರೀಟೇಲ್ ಸ್ಟೋರ್ ಆಗಿದೆ. ಬೆಂಗಳೂರಿನಲ್ಲಿ ಇನ್ನೂ ಒಂದು ಸ್ಟೋರ್ ಸದ್ಯದಲ್ಲೇ ಶುರುವಾಗಬಹುದು. ಮುಂಬೈ, ದೆಹಲಿ, ಪುಣೆ ಮತ್ತು ಬೆಂಗಳೂರಿನಲ್ಲಿ ಒಟ್ಟು ನಾಲ್ಕು ಸ್ಟೋರ್ಗಳು ಸದ್ಯದಲ್ಲೇ ಬರಲಿದೆ. ಇದರೊಂದಿಗೆ ಆ್ಯಪಲ್ ಸ್ಟೋರ್ಗಳ ಸಂಖ್ಯೆ 7ಕ್ಕೆ ಏರಬಹುದು.
ಇದನ್ನೂ ಓದಿ: ಬೆಂಗಳೂರಿನ ಫಾಕ್ಸ್ಕಾನ್ ಘಟಕದಲ್ಲಿ ಐಫೋನ್17 ಸ್ಮಾರ್ಟ್ಫೋನ್ಗಳ ತಯಾರಿಕೆ ಆರಂಭ: ವರದಿ
ಬೆಂಗಳೂರಿನಲ್ಲಿ 2.7 ಲಕ್ಷ ಚದರಡಿ ವಿಸ್ತೀರ್ಣದ ಆ್ಯಪಲ್ ಕಚೇರಿ
ಆ್ಯಪಲ್ ಕಂಪನಿ ಬೆಂಗಳೂರಿನಲ್ಲಿ ತನ್ನ ಇರುವಿಕೆಯನ್ನು ಹೆಚ್ಚಿಸುತ್ತಲೇ ಬಂದಿದೆ. ಸ್ಯಾಂಕಿ ರಸ್ತೆಯಲ್ಲಿ ಝೆನಿತ್ ಎಂಬಸಿ ಕಟ್ಟಡದಲ್ಲಿ 9 ಅಂತಸ್ತುಗಳನ್ನು ಆ್ಯಪಲ್ ಕಂಪನಿ 10 ವರ್ಷಕ್ಕೆ ಬಾಡಿಗೆಗೆ ಪಡೆದಿದೆ. ತಿಂಗಳಿಗೆ ಆರು ಕೋಟಿ ರೂಗೂ ಅಧಿಕ ಬಾಡಿಗೆ ನೀಡಲಿದೆ. ಹತ್ತು ವರ್ಷದಲ್ಲಿ ಈ ಕಟ್ಟಡಕ್ಕೆ ಆ್ಯಪಲ್ ಕಟ್ಟುವ ಬಾಡಿಗೆ 1,000 ಕೋಟಿ ರೂಗೂ ಅಧಿಕ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




