ಹೈದರಾಬಾದ್, ಫೆಬ್ರುವರಿ 28: ನೈಟ್ ಫ್ರಾಂಕ್ ಸಂಸ್ಥೆಯ ‘ದಿ ವೆಲ್ತ್ ರಿಪೋರ್ಟ್ 2024’ ಭಾರತದ ಆರ್ಥಿಕ ಬೆಳವಣಿಗೆಯ ಫಲಶ್ರುತಿಯನ್ನು ಎತ್ತಿತೋರಿಸಿದೆ. ಭಾರತದಲ್ಲಿ ಅತಿ ಶ್ರೀಮಂತ ವ್ಯಕ್ತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೇಗವಾಗಿ ಬೆಳೆಯುತ್ತಿರುವುದನ್ನು ಈ ವರದಿ (Knight Frank’s The Wealth Report 2024) ತೋರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅತಿಶ್ರೀಮಂತರು ಅಥವಾ ಅಲ್ಟ್ರಾ ಹೈ ನೆಟ್ ವರ್ತ್ ಇಂಡಿವಿಜುವಲ್ಸ್ (Ultra-high Net-worth Individuals) ಸಂಖ್ಯೆಯಲ್ಲಿ ಶೇ. 6ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಈಗ ಇವರ ಸಂಖ್ಯೆ 13,263ಕ್ಕೆ ಏರಿದೆ. ವಿಶ್ವಾದ್ಯಂತ ಈ ದೊಡ್ಡ ಶ್ರೀಮಂತರ ಸಂಖ್ಯೆ 6,26,619 ಇದೆ ಎನ್ನಲಾಗಿದೆ.
ಅಲ್ಟ್ರಾ ಹೈ ನೆಟ್ ವರ್ತ್ ವ್ಯಕ್ತಿಗಳು ಅಥವಾ ಅತಿಶ್ರೀಮಂತರು ಕನಿಷ್ಠ 30 ಮಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವವರಾಗಿರುತ್ತಾರೆ. 30 ಮಿಲಿಯನ್ ಡಾಲರ್ ಎಂದರೆ ಸುಮಾರು 250 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವ ಕುಬೇರರು ಇವರು.
ಭಾರತದಲ್ಲಿ 2022ರಲ್ಲಿ 12,495 ವ್ಯಕ್ತಿಗಳು ಅತಿ ಶ್ರೀಮಂತರಿದ್ದರು. 2023ರಲ್ಲಿ ಇವರ ಸಂಖ್ಯೆ 13,263ಕ್ಕೆ ಏರಿದೆ.
ಇದನ್ನೂ ಓದಿ: ಕೆಲಸ ಬಿಟ್ಟುಹೋದ ಉದ್ಯೋಗಿಯ ಪಿಎಫ್ ಹಣ ಹಿಂಪಡೆಯುವ ಅಧಿಕಾರ ಸಂಸ್ಥೆಗೆ ಇದೆಯೇ? ಇಲ್ಲಿದೆ ಉತ್ತರ
ವಿಶ್ವಾದ್ಯಂತ 2022ರಲ್ಲಿ ಅತಿ ಶ್ರೀಮಂತರ ಸಂಖ್ಯೆ 6,01,300 ಇತ್ತು. 2023ರಲ್ಲಿ ಇವರ ಸಂಖ್ಯೆ 6,26,619ಕ್ಕೆ ಏರಿದೆ. ಶೇ. 4.1ರಷ್ಟು ಸಂಖ್ಯೆ ಏರಿದೆ.
2028ರಲ್ಲಿ ಭಾರತದಲ್ಲಿ ಇವರ ಸಂಖ್ಯೆ ಬರೋಬ್ಬರಿ ಶೇ. 50ರಷ್ಟು ಹೆಚ್ಚಳಗೊಂಡು 19,900ರ ಗಡಿ ದಾಟಲಿದೆ ಎಂದು ನೈಟ್ ಫ್ರಾಂಕ್ನ ದಿ ವೆಲ್ತ್ ರಿಪೋರ್ಟ್ ವರದಿಯಲ್ಲಿ ಅಂದಾಜು ಮಾಡಲಾಗಿದೆ.
ಇನ್ನು, ಜಾಗತಿಕವಾಗಿ ಈ ಅತಿಶ್ರೀಮಂತರ ಸಂಖ್ಯೆ 2028ರ ವರ್ಷದಲ್ಲಿ 8,02,891ಕ್ಕೆ ಹೋಗಬಹುದು. ಅಂದರೆ ಶೇ. 28ರಷ್ಟು ಸಂಖ್ಯೆ ಹೆಚ್ಚಾಗಬಹುದು.
ಮತ್ತೊಂದು ಗಮನಾರ್ಹ ಅಂಶವೆಂದರೆ 2024ರಲ್ಲಿ ಶೇ. 90ರಷ್ಟು ಅತಿಶ್ರೀಮಂತರು ತಮ್ಮ ಸಂಪತ್ತು ಇನ್ನಷ್ಟು ಹೆಚ್ಚಾಗಬಹುದು ಎಂಬ ವಿಶ್ವಾಸದಲ್ಲಿ ಇದ್ದಾರೆ. ಅದರಲ್ಲೂ ಶೇ. 63ರಷ್ಟು ಶ್ರೀಮಂತರು ಶೇ. 10ಕ್ಕಿಂತ ಹೆಚ್ಚು ಸಂಪತ್ತು ವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: 90 ದಿನದಲ್ಲಿ ಹಣ ಡಬಲ್; ರಿಲಾಯನ್ಸ್ ಬೆಂಬಲಿತ ಬಾಲಾಜಿ ಟೆಲಿಫಿಲಂಸ್ನ ಷೇರು ಮ್ಯಾಜಿಕ್
ಅತಿ ಶ್ರೀಮಂತರ ಸಂಖ್ಯೆ ಏರಿಕೆ ವೇಗ ಗಮನಿಸಿದರೆ ಟರ್ಕಿ ಅಗ್ರಸ್ಥಾನ ಪಡೆದಿದೆ. ಟರ್ಕಿಯಲ್ಲಿ ಅತಿಶ್ರೀಮಂತರ ಸಂಖ್ಯೆ ಶೇ. 9.7ರಷ್ಟು ಏರಿದೆ. ಅಮೆರಿಕದಲ್ಲಿ ಶೇ. 7.9, ಭಾರತದಲ್ಲಿ ಶೇ. 6.1ರಷ್ಟು ಸಂಖ್ಯೆ ಏರಿದೆ. ಸೌತ್ ಕೊರಿಯಾ ಶೇ. 5.6 ಮತ್ತು ಸ್ವಿಟ್ಜರ್ಲ್ಯಾಂಡ್ ಶೇ. 5.2ರಷ್ಟು ಶ್ರೀಮಂತರ ಹೆಚ್ಚಳ ಕಂಡು ಟಾಪ್-5 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ