ಹಬ್ಬದ ಸೀಸನ್​ನಲ್ಲಿ ಸಖತ್ ವಾಹನ ಸಂಚಾರ; ನಿರೀಕ್ಷೆಮೀರಿಸಿದ ಅಕ್ಟೋಬರ್ ಟೋಲ್ ಕಲೆಕ್ಷನ್

|

Updated on: Nov 15, 2024 | 10:51 AM

e-toll collection in 2024 October: ಅಕ್ಟೋಬರ್ ತಿಂಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ 6,114.92 ಕೋಟಿ ರೂ ಇದೆ. ಕಳೆದ ಮೂರು ವರ್ಷದಲ್ಲಿ ಯಾವುದೇ ತಿಂಗಳಲ್ಲಿ ಸಂಗ್ರಹವಾದ ಗರಿಷ್ಠ ಟೋಲ್ ಮೊತ್ತ ಇದಾಗಿದೆ. ಹಬ್ಬದ ಸೀಸನ್ ಇದ್ದರಿಂದ ಅಕ್ಟೋಬರ್​ನಲ್ಲಿ ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟವಿದ್ದುದು ಟೋಲ್ ಕಲೆಕ್ಷನ್ ಹೆಚ್ಚಲು ಕಾರಣವಿರಬಹುದು.

ಹಬ್ಬದ ಸೀಸನ್​ನಲ್ಲಿ ಸಖತ್ ವಾಹನ ಸಂಚಾರ; ನಿರೀಕ್ಷೆಮೀರಿಸಿದ ಅಕ್ಟೋಬರ್ ಟೋಲ್ ಕಲೆಕ್ಷನ್
ಟೋಲ್
Follow us on

ನವದೆಹಲಿ, ನವೆಂಬರ್ 15: ಹಬ್ಬದ ಸೀಸನ್ ಇದ್ದ ಅಕ್ಟೋಬರ್ ತಿಂಗಳಲ್ಲಿ ಭಾರತದ ಹೆದ್ದಾರಿಗಳಲ್ಲಿ ವಾಹನಗಳಿಂದ ಟೋಲ್ ಸಂಗ್ರಹ ನಿರೀಕ್ಷೆ ಮೀರಿಸುವಷ್ಟು ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ದತ್ತಾಂಶದ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ಟೋಲ್ ಸಂಗ್ರಹ 6,114.92 ಕೋಟಿ ರೂ ಆಗಿದೆ. ಟೋಲ್ ಸಂಗ್ರಹದ ಮಾಹಿತಿ ಪಡೆಯಲು ಆರಂಭಿಸಿದಾಗಿನಿಂದ (2021ರಿಂದ) ಯಾವುದೇ ತಿಂಗಳಲ್ಲೂ ಇಷ್ಟು ಟೋಲ್ ಕಲೆಕ್ಷನ್ ಆಗಿರಲಿಲ್ಲ. ಇದೇ ಗರಿಷ್ಠ ಎನ್ನವ ದಾಖಲೆ ಮಾಡಿದೆ.

ಹಿಂದಿನ ಆರು ತಿಂಗಳ ಸರಾಸರಿ ತೆಗೆದುಕೊಂಡರೆ, ಅಂದರೆ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ತಿಂಗಳಿಗೆ ಸರಾಸರಿಯಾಗಿ 5,681.46 ಕೋಟಿ ರೂನಷ್ಟು ಇ-ಟೋಲ್ ಸಂಗ್ರಹ ಆಗಿರುವುದು ಕಂಡು ಬಂದಿದೆ. ಅಕ್ಟೋಬರ್ ತಿಂಗಳಲ್ಲಿ ಟೋಲ್ ಕಲೆಕ್ಷನ್ ಹೆಚ್ಚಾಗಿರುವುದು ತೀರಾ ಅನಿರೀಕ್ಷಿತವಲ್ಲ. ಆ ತಿಂಗಳು ಹಬ್ಬದ ಸೀಸನ್ ಇದ್ದರಿಂದ ಜನರು ತಮ್ಮ ಊರಿಗೆ ಹೋಗಿ ಬರುವುದು ಸೇರಿದಂತೆ ವಾಹನ ಸಂಚಾರ ಸಹಜವಾಗಿ ಹೆಚ್ಚಾಗಿರಬಹುದು.

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಸರ್ಕಾರಿ ಸಂಸ್ಥೆಗಳ ಮಹತ್ವದ ಪಾತ್ರ ಎತ್ತಿತೋರಿಸಿದ ಸಚಿವ ಹರ್ದೀಪ್ ಸಿಂಗ್ ಪುರಿ

ಕ್ರಿಸಿಲ್ ಮಾರ್ಕೆಟಿಂಗ್ ಇಂಟೆಲಿಜೆನ್ಸ್ ಅಂಡ್ ಅನಾಲಟಿಕ್ಸ್ ಸಂಸ್ಥೆಯ ಕನ್ಸಲ್ಟಿಂಗ್ ಮುಖ್ಯಸ್ಥರಾದ ಜಗನ್ನಾರಾಯಣ್ ಪದ್ಮನಾಭನ್ ಪ್ರಕಾರ ಅಕ್ಟೋಬರ್​ನಲ್ಲಿ ಟೋಲ್ ಸಂಗ್ರಹ ಹೆಚ್ಚಾಗಲು ಸರಕು ಸಾಗಣೆಯಲ್ಲಿ ಆದ ಹೆಚ್ಚಳ, ಹಾಗೂ ಇಕಾಮರ್ಸ್ ವ್ಯವಹಾರದಲ್ಲಿ ಆದ ಹೆಚ್ಚಳವು ಕಾರಣಗಳಂತೆ.

‘ತಿಂಗಳ ಆರಂಭದಲ್ಲಿ ರೀಟೇಲ್ ಮಳಿಗೆಗಳಿಗೆ ಸರಕುಗಳ ಸಾಗಣೆಯಲ್ಲಿ ಬಹಳ ಹೆಚ್ಚಳವಾಗಿದೆ. ಇಡೀ ತಿಂಗಳು ಇಕಾಮರ್ಸ್ ಡೆಲಿವರಿಗಳ ಪ್ರಮಾಣ ಉಚ್ಚ ಮಟ್ಟದಲ್ಲಿತ್ತು. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರಂತರವಾಗಿ ಇತ್ತು. ಇದು ಟೋಲ್ ಸಂಗ್ರಹ ಹೆಚ್ಚಲು ಒಂದು ಕಾರಣ’ ಎಂದು ಪದ್ಮನಾಭನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಡಿಮೆ ಆಗಿದೆ ಮಧ್ಯಮ ವರ್ಗದವರ ತೆರಿಗೆ ಪಾವತಿ; ಹೆಚ್ಚು ಆದಾಯದ ಗುಂಪಿನವರಿಂದ ಹೆಚ್ಚು ತೆರಿಗೆ

2024ರ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ 34,088.77 ಕೋಟಿ ರೂ ಇ-ಟೋಲ್ ಅನ್ನು ಪಡೆಯಲಾಗಿದೆ. 2023ರಲ್ಲಿ ಇದೇ ಅವಧಿಯಲ್ಲಿ ಸಂಗ್ರಹವಾದ ಟೋಲ್ ಮೊತ್ತ 31,026.64 ಕೋಟಿ ರೂ. ಈ ವರ್ಷ ಟೋಲ್ ಸಂಗ್ರಹದಲ್ಲಿ ಶೇ. 9.8ರಷ್ಟು ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ