
ನವದೆಹಲಿ, ಜೂನ್ 23: ಓಮನ್ ಸರ್ಕಾರ ಆದಾಯ ತೆರಿಗೆ ಪದ್ಧತಿಯನ್ನು (Income tax system) ಜಾರಿಗೆ ತರಲು ಹೊರಟಿದೆ. ವರದಿಗಳ ಪ್ರಕಾರ 2028ರಿಂದ ಓಮನ್ ದೇಶದಲ್ಲಿ ಇನ್ಕಮ್ ಟ್ಯಾಕ್ಸ್ ವ್ಯವಸ್ಥೆ ಜಾರಿಗೆ ಬರಲಿದೆ. ವರ್ಷಕ್ಕೆ 42,000 ರಿಯಾಲ್ಗಿಂತ (ಸುಮಾರು 94-95 ಲಕ್ಷ ರೂ) ಹೆಚ್ಚು ಆದಾಯ ಇರುವ ವ್ಯಕ್ತಿಗಳಿಗೆ ಮಾತ್ರ ಶೇ. 5ರಷ್ಟು ಆದಾಯ ತೆರಿಗೆ ಹಾಕಲಾಗುತ್ತಿದೆ. ಓಮನ್ನ ಜನಸಂಖ್ಯೆಯಲ್ಲಿ ಇಷ್ಟು ಆದಾಯ ಪಡೆಯುತ್ತಿರುವವರ ಸಂಖ್ಯೆ ಶೇ. 1ರಷ್ಟು ಮಾತ್ರವೇ ಇರುವುದು. ಮೇಲ್ನೋಟಕ್ಕೆ ಇವರಿಗೆ ವಿಧಿಸಲಾಗಿರುವ ಇನ್ಕಮ್ ಟ್ಯಾಕ್ಸ್ ತೀರಾ ಕಡಿಮೆ ಎಂದನಿಸಬಹುದು. ಆದರೆ, ತೈಲ ರಫ್ತು ದೇಶವೊಂದರಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆ ವ್ಯವಸ್ಥೆ ಬರುತ್ತಿದೆ ಎನ್ನುವುದು ಬಹಳ ದೊಡ್ಡ ಮತ್ತು ಸೋಜಿಗದ ಸುದ್ದಿ.
ಗಲ್ಫ್ ಸಹಕಾರ ಮಂಡಳಿ ಅಥವಾ ಗಲ್ಫ್ ಕೋಆಪರೇಶನ್ ಕೌನ್ಸಿಲ್ನಲ್ಲಿ ಓಮನ್, ಸೌದಿ ಅರೇಬಿಯಾ, ಯುಎಇ, ಕುವೇತ್, ಕತಾರ್ ಮತ್ತು ಬಹ್ರೇನ್ ದೇಶಗಳಿವೆ. ಎಲ್ಲೂ ಕೂಡ ಆದಾಯ ತೆರಿಗೆ ವ್ಯವಸ್ಥೆ ಜಾರಿಯಲ್ಲಿಲ್ಲ. ಓಮನ್ನಲ್ಲಿ ಮಾತ್ರವೇ ಇನ್ನೆರಡು ಮೂರು ವರ್ಷದಲ್ಲಿ ಇದು ಜಾರಿಗೆ ಬರುತ್ತಿದೆ. ಇದು ವಿಶೇಷ ಮತ್ತು ಗಮನಾರ್ಹ ಸಂಗತಿ.
ಇದನ್ನೂ ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು: ಎಲ್ಪಿಜಿ ನಿಂತುಹೋದರೆ ಏನು ಗತಿ? ಭಾರತದಲ್ಲಿ LPG ಸಂಗ್ರಹ ಎಷ್ಟು ದಿನಗಳಿಗಿದೆ?
ಕೊಲ್ಲಿ ರಾಷ್ಟ್ರಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ ಇಲ್ಲವಾದರೂ ಸ್ವಲ್ಪ ಮಟ್ಟಿಗೆ ಕಾರ್ಪೊರೇಟ್ ಟ್ಯಾಕ್ಸ್ ಇದೆ. ಇತ್ತೀಚಿನ ವರ್ಷಗಳಲ್ಲಿ ಓಮನ್, ಸೌದಿ, ಬಹ್ರೇನ್ ದೇಶಗಳಲ್ಲಿ ಮೌಲ್ಯ ವರ್ಧಿತ ತೆರಿಗೆಯನ್ನು (VAT- Value Added Tax) ಜಾರಿಗೆ ತರಲಾಗಿತ್ತು. ಆದರೆ, ಬೇರೆ ದೇಶಗಳಿಗೆ ಹೋಲಿಸಿದರೆ ಗಲ್ಫ್ ಪ್ರದೇಶದಲ್ಲಿ ಯಾವುದೇ ರೀತಿಯ ತೆರಿಗೆ ತೀರಾ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ, ಬಹಳಷ್ಟು ಶ್ರೀಮಂತರು, ಉದ್ಯಮಿಗಳು ಗಲ್ಫ್ನಲ್ಲಿ ನೆಲಸಲು ಇಚ್ಛಿಸುವುದುಂಟು.
ಓಮನ್ನಲ್ಲಿ ಆದಾಯ ತೆರಿಗೆ ಜಾರಿಗೆ ತರಲು ಹೊರಟಿರುವುದಕ್ಕೆ ಕೆಲ ಕಾರಣಗಳಿವೆ. ಅಲ್ಲಿಯ ಆರ್ಥಿಕ ಸಚಿವ ಸಯಿದ್ ಬಿನ್ ಮೊಹಮ್ಮದ್ ಅಲ್ ಸಖ್ರಿ ಹೇಳಿರುವ ಪ್ರಕಾರ ತೈಲ ಆದಾಯದ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಹಾಗೂ ಸಾಮಾಜಿಕ ವೆಚ್ಚಕ್ಕೆ ಹಣ ಸೇರಿಸುವುದು ಆದಾಯ ತೆರಿಗೆ ಜಾರಿ ಮಾಡಲು ಇರುವ ಪ್ರಮುಖ ಕಾರಣ.
ಇದನ್ನೂ ಓದಿ: ಪಿಎಂ ಸೋಲಾರ್: ಕಡಿಮೆ ಅಳವಡಿಕೆ ರಾಜ್ಯಗಳಲ್ಲಿ ಕರ್ನಾಟಕ; ಮನೆ ಮೇಲಿನ ಸೌರಯೋಜನೆ ಬಗ್ಗೆ ಮಾಹಿತಿ
ಹಾಗೆಯೇ, ಗಲ್ಫ್ ದೇಶಗಳು ಇತ್ತೀಚಿನ ವರ್ಷಗಳಲ್ಲಿ ಫಿಸ್ಕಲ್ ಡೆಫಿಸಿಟ್ ಸಮಸ್ಯೆಯಿಂದ ಬಳಲುತ್ತಿವೆ. ಅಂದರೆ, ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದೆ. ತೈಲದಿಂದ ಬರುತ್ತಿದ್ದ ಆದಾಯ ಕಡಿಮೆ ಆಗುತ್ತಿರುವುದು ಈ ಫಿಸ್ಕಲ್ ಡೆಫಿಸಿಟ್ಗೆ ಕಾರಣವಾಗಿರಬಹುದು.
ಒಂದೇ ಆದಾಯ ಮೂಲ ನೆಚ್ಚಿಕೊಂಡರೆ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯುಸಿನೆಸ್ ನಿಂತುಹೋಗಬಹುದು. ಹೀಗಾಗಿ, ಸರ್ಕಾರವು ಬೇರೆ ಆದಾಯ ಮೂಲಗಳನ್ನು ಹುಡುಕುತ್ತಿದೆ. ಅದರಲ್ಲಿ ಆದಾಯ ತೆರಿಗೆಯೂ ಒಂದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ