ನವದೆಹಲಿ, ನವೆಂಬರ್ 2: ಈರುಳ್ಳಿ ಬೆಲೆ (onion rates) ದೇಶಾದ್ಯಂತ ಏರುತ್ತಿದೆ. ಕಳೆದ ಒಂದು ವಾರದಲ್ಲಿ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಕೆಲವೆಡೆ ಈರುಳ್ಳಿ ಬೆಲೆ ನೂರು ರೂ ಸಮೀಪಕ್ಕೆ ಹೋಗಿದೆ. ಕಳೆದ ವಾರ ಕಿಲೋಗೆ 30 ರೂ ಇದ್ದ ಈರುಳ್ಳಿ ಬೆಲೆ ಇದೀಗ 90 ರೂವರೆಗೂ ಹೋಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನಲ್ಲಿರುವ ದಾಸ್ತಾನು ಬಳಸಿಕೊಂಡು ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರತೊಡಗಿದೆ. ವರದಿ ಪ್ರಕಾರ ಸರ್ಕಾರ ದೇಶಾದ್ಯಂತ 170 ನಗರಗಳಲ್ಲಿ ಈರುಳ್ಳಿ ಅಂಗಡಿಗಳನ್ನು ತೆರೆದಿದೆ. ಇಲ್ಲಿ ಕಿಲೋಗೆ 25 ರೂನಂತೆ ಈರುಳ್ಳಿಯನ್ನು ಮಾರಲಾಗುತ್ತಿದೆ. ಬೆಂಗಳೂರಿನಲ್ಲೂ ಹಲವೆಡೆ ಸರ್ಕಾರ ಈರುಳ್ಳಿ ಅಂಗಡಿಗಳನ್ನು ತೆರೆದು ರಿಯಾಯಿತಿ ದರದಲ್ಲಿ ಮಾರುತ್ತಿದೆ.
ಎರಡು ತಿಂಗಳ ಹಿಂದೆ ಟೊಮೆಟೋ ಬೆಲೆ ಹೆಚ್ಚಾದಾಗ ಸರ್ಕಾರ ತನ್ನಲ್ಲಿರುವ ಟೊಮೆಟೋ ದಾಸ್ತಾನು ಬಳಸಿ ಮೊಬೈಲ್ ವ್ಯಾನುಗಳ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿತ್ತು. ಈಗ ಈರುಳ್ಳಿಯನ್ನೂ ಮೊಬೈಲ್ ವ್ಯಾನ್ಗಳ ಮೂಲಕ ಮಾರಾಟ ಮಾಡುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಈ ಮೊಬೈಲ್ ವ್ಯಾನ್ಗಳು ಈರುಳ್ಳಿ ಹೊತ್ತು ಸಾಗಲಿವೆ. ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ಅತಿಹೆಚ್ಚು, ಅಂದರೆ 71 ಈರುಳ್ಳಿ ವ್ಯಾನ್ಗಳು ಓಡಾಡಲಿವೆ. ಬೆಂಗಳೂರು, ಹೈದರಾಬಾದ್, ಜೈಪುರ, ಲುಧಿಯಾನ, ವಾರಾಣಸಿ, ರೋಹ್ತಕ್, ಶ್ರೀನಗರ್, ಭೋಪಾಲ್, ಇಂದೋರ್, ಭುಬನೇಶ್ವರ್ ಮೊದಲಾದ ನಗರಗಳಲ್ಲಿ ಈ ಮೊಬೈಲ್ ವ್ಯಾನ್ಗಳಲ್ಲಿ ಸರ್ಕಾರ ಈರುಳ್ಳಿ ಮಾರುತ್ತಿದೆ.
ಇದನ್ನೂ ಓದಿ: US Interest Rates: ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ; ಭಾರತೀಯ ಮಾರುಕಟ್ಟೆ ಮೇಲೇನು ಪರಿಣಾಮ?
ಬಹಳ ಸಾಮಾನ್ಯವಾಗಿ ಬಳಕೆ ಮಾಡುವ ತರಕಾರಿಗಳಲ್ಲಿ ಈರುಳ್ಳಿಯೂ ಒಂದು. ಇದರ ಬೆಲೆ ಏರಿಕೆಯಾದರೆ ಹಣದುಬ್ಬರವೂ ಏರುತ್ತದೆ. ಹೀಗಾಗಿ, ಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈರುಳ್ಳಿಯ ಕನಿಷ್ಠ ರಫ್ತು ಬೆಲೆ ನಿಗದಿ ಮಾಡಿರುವುದೂ ಒಂದು ಕ್ರಮ. ಹಾಗೆಯೇ, ಸರ್ಕಾರ ಈರುಳ್ಳಿ ದಾಸ್ತಾನು ಹೆಚ್ಚು ಮಾಡಿದೆ. 2 ಲಕ್ಷ ಟನ್ಗಳಷ್ಟು ಹೆಚ್ಚುವರಿಯಾಗಿ ಈರುಳ್ಳಿಯನ್ನು ಸರ್ಕಾರ ಖರೀದಿಸಿದೆ. ಇದರೊಂದಿಗೆ ಸರ್ಕಾರದ ಬಳಿ ಇರುವ ಈರುಳ್ಳಿ ಸಂಗ್ರಹ 7 ಲಕ್ಷ ಟನ್ ಆಗಿದೆ. ಈ ಸಂಗ್ರಹದಿಂದ ಎಲ್ಲೆಡೆ ರಿಯಾಯಿತಿ ದರದಲ್ಲಿ ಈರುಳ್ಳಿಯನ್ನು ಮಾರುತ್ತಿದೆ.
ಇದರ ಜೊತೆಗೆ, ಈರುಳ್ಳಿಗೆ ಕನಿಷ್ಠ ರಫ್ತು ಬೆಲೆ ನಿಗದಿ ಮಾಡಿರುವುದರಿಂದ ಈರುಳ್ಳಿ ರಫ್ತನ್ನು ನಿರ್ಬಂಧಿಸಿದಂತಾಗಿ, ದೇಶೀಯವಾಗಿ ಅದರ ಲಭ್ಯತೆ ಹೆಚ್ಚುತ್ತದೆ. ಈ ಮೂಲಕ ಬೆಲೆ ನಿಯಂತ್ರಣ ಸಾಧ್ಯವಾಗುತ್ತದೆ.
ಇದನ್ನೂ ಓದಿ: ಇದಕ್ಕಿಂತ ಕಡಿಮೆಗೆ ಸಿಕ್ಕರೆ ಎರಡು ಪಟ್ಟು ಹಣ ರೀಫಂಡ್; ಪೇಟಿಎಂನಲ್ಲಿ ಪ್ರೈಸ್ ಗ್ಯಾರಂಟಿ ಆಫರ್
ಈ ಬಾರಿಯ ಸೀಸನ್ನಲ್ಲಿ ಈರುಳ್ಳಿ ಇಳುವರಿ ಕುಂಠಿತಗೊಂಡು ಕೊರತೆ ಸೃಷ್ಟಿಯಾಗಬಹುದು ಎಂಬ ಭೀತಿಯಲ್ಲಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕೈಮೀರಿ ಏರುತ್ತಿದೆ ಎಂದು ಸರ್ಕಾರೀ ಮೂಲಗಳು ಹೇಳುತ್ತಿವೆ. ದೇಶದಲ್ಲಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಶೇ. 30ರಷ್ಟು ಈರುಳ್ಳಿ ಮಹಾರಾಷ್ಟ್ರದಿಂದಲೇ ಸಿಗುತ್ತದೆ. ದೇಶದ ಒಟ್ಟಾರೆ ಈರುಳ್ಳಿ ಉತ್ಪಾದನೆಯಲ್ಲಿ ಶೇ. 60ಕ್ಕಿಂತ ಹೆಚ್ಚಿನ ಭಾಗವು ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ಈ ಮೂರು ರಾಜ್ಯಗಳಿಂದಲೇ ಇದೆ. ಮೂಲಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಈ ಬಾರಿಯ ಹಿಂಗಾರು ಸೀಸನ್ನ ಈರುಳ್ಳಿ ಇಳುವರಿಯಲ್ಲಿ ಹೆಚ್ಚೇನೂ ವ್ಯತ್ಯಯವಾಗಿಲ್ಲ. ಹಾಗಿದ್ದೂ ಬೆಲೆ ಏರಿಕೆ ಆಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ