
ನವದೆಹಲಿ, ಜೂನ್ 3: ಆನ್‌ಲೈನ್ ಗೇಮಿಂಗ್ ಮತ್ತು ಜೂಜಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ನಿಂದ ಭಾರಿ ಜಯ ಸಿಕ್ಕಿದೆ. ಹಣ ಅಥವಾ ಪಣವನ್ನು ಒಡ್ಡಿ ಆಡುವ (with stakes) ಆನ್‌ಲೈನ್ ಕೌಶಲ್ಯದ ಆಟಗಳ (Games of Skill) ಮೇಲಿನ ಬೆಟ್ಟಿಂಗ್‌ಗೆ ಯಾವುದೇ ಸಾಂವಿಧಾನಿಕ ರಕ್ಷಣೆ ಇಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಇದರೊಂದಿಗೆ, ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಅನ್ನು ನಿಷೇಧಿಸುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳ ಕಾನೂನುಗಳ ಸಿಂಧುತ್ವವನ್ನು ದೇಶದ ಅತ್ಯುನ್ನತ ನ್ಯಾಯಾಲಯವು ಎತ್ತಿಹಿಡಿದಿದೆ.
ಹೈಕೋರ್ಟ್‌ಗಳ ಈ ಹಿಂದಿನ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ:
ಇದನ್ನೂ ಓದಿ: ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ
ಯಾವ ಆಟಗಳಲ್ಲಿ ಗೆಲುವು ಅಥವಾ ಸೋಲು ಕೇವಲ ಅದೃಷ್ಟದ ಮೇಲೆ ನಿರ್ಧಾರವಾಗದೆ, ಆಟಗಾರನ ವೈಯಕ್ತಿಕ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆಯೋ ಅದನ್ನು ‘ಗೇಮ್ ಆಫ್ ಸ್ಕಿಲ್’ (ಕೌಶಲ್ಯದ ಆಟ) ಎನ್ನಲಾಗುತ್ತದೆ.
ಇದರಲ್ಲಿ ಆಟಗಾರನ ಬೌದ್ಧಿಕ ಶಕ್ತಿ, ತರಬೇತಿ, ಅನುಭವ, ಆಟದ ತಂತ್ರ, ಗಮನ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಅತ್ಯಂತ ಮುಖ್ಯವಾಗಿರುತ್ತದೆ. ಉದಾಹರಣೆಗೆ, ರಮ್ಮಿ, ಪೋಕರ್, ಚೆಸ್ ಅಥವಾ ಕೆಲವು ಮಾದರಿಯ ಫ್ಯಾಂಟಸಿ ಸ್ಪೋರ್ಟ್ಸ್ ಆಟಗಳು.
ಲಾಟರಿ ಅಥವಾ ಕಾಯಿನ್ ಟಾಸ್‌ನಂತಹ ಆಟಗಳು ಕೇವಲ ಅದೃಷ್ಟವನ್ನು ನಂಬಿರುತ್ತವೆ (Game of Chance). ಆದರೆ ಕೌಶಲ್ಯದ ಆಟಗಳಲ್ಲಿ ಅದೃಷ್ಟಕ್ಕಿಂತ ಆಟಗಾರನ ಬುದ್ಧಿವಂತಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ.
ಆನ್‌ಲೈನ್ ಜೂಜಾಟದ ದಾಸರಾಗಿ ರಾಜ್ಯದ ಯುವ ಪೀಳಿಗೆ ಹಾದಿ ತಪ್ಪುತ್ತಿರುವುದನ್ನು ಮನಗಂಡಿದ್ದ ಕರ್ನಾಟಕ ಸರ್ಕಾರ, 2021ರ ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಮಂಡಲದಲ್ಲಿ ‘ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ, 2021’ ಅನ್ನು ಅಂಗೀಕರಿಸಿತ್ತು.
ಈ ಕಾನೂನಿನ ಪ್ರಕಾರ, ಕರ್ನಾಟಕದಲ್ಲಿ ಹಣ ಅಥವಾ ಯಾವುದೇ ಮೌಲ್ಯಯುತ ವಸ್ತುವನ್ನು ಪಣಕ್ಕಿಟ್ಟು ಆಡುವ ಎಲ್ಲಾ ರೀತಿಯ ಆನ್‌ಲೈನ್ ಗೇಮ್‌ಗಳು, ಜೂಜಾಟಗಳು ಮತ್ತು ಬೆಟ್ಟಿಂಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ತಪ್ಪು ಮಾಡಿದವರಿಗೆ ದಂಡ ಮತ್ತು ಜೈಲು ಶಿಕ್ಷೆಯ ಪ್ರಾವಿಧಾನವನ್ನೂ ಮಾಡಲಾಗಿತ್ತು.
ಇದನ್ನೂ ಓದಿ: ಫಾರೆಕ್ಸ್ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ
ಹೈಕೋರ್ಟ್ ನೀಡಿದ್ದ ಆಘಾತ: ಆದರೆ, ಈ ಕಾನೂನನ್ನು ಪ್ರಶ್ನಿಸಿ ‘ಆನ್‌ಲೈನ್ ಗೇಮಿಂಗ್ ಫೆಡರೇಶನ್’ ಮತ್ತು ವಿವಿಧ ಗೇಮಿಂಗ್ ಕಂಪನಿಗಳು ಕೋರ್ಟ್ ಮೆಟ್ಟಿಲೇರಿದ್ದವು. ಅರ್ಜಿ ವಿಚಾರಣೆ ನಡೆಸಿದ್ದ ಧಾರವಾಡ ಮತ್ತು ಬೆಂಗಳೂರು ಪೀಠಗಳನ್ನೊಳಗೊಂಡ ಕರ್ನಾಟಕ ಹೈಕೋರ್ಟ್, 2022ರ ಫೆಬ್ರವರಿಯಲ್ಲಿ ಸರ್ಕಾರದ ಈ ತಿದ್ದುಪಡಿ ಕಾಯ್ದೆಯ ಪ್ರಮುಖ ನಿಯಮಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. “ಕೌಶಲ್ಯದ ಆಟಗಳನ್ನು ಜೂಜಿನ ವ್ಯಾಪ್ತಿಗೆ ತಂದು ಸಂಪೂರ್ಣ ನಿಷೇಧಿಸುವುದು ಸಂವಿಧಾನ ಬಾಹಿರ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಈಗ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬದಿಗೆ ಸರಿಸಿ, ರಾಜ್ಯಗಳ ಕಟ್ಟುನಿಟ್ಟಿನ ನಿಷೇಧದ ಕಾನೂನುಗಳನ್ನು ಎತ್ತಿಹಿಡಿದಿರುವುದರಿಂದ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಭಾರಿ ಆಘಾತ ಎದುರಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳಲ್ಲಿ ಹಣ ಕಳೆದುಕೊಂಡು ಯುವಕರು ಮತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ದೇಶಾದ್ಯಂತ ತೀವ್ರವಾಗಿ ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ಇದು ರಾಜ್ಯ ಸರ್ಕಾರಗಳಿಗೆ ತಮ್ಮ ರಾಜ್ಯದ ಗಡಿಯೊಳಗೆ ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಆ್ಯಪ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮತ್ತು ಯುವ ಪೀಳಿಗೆಯನ್ನು ಆನ್‌ಲೈನ್ ಜೂಜಿನ ದಾಸರಾಗದಂತೆ ತಡೆಯಲು ಕಾನೂನಾತ್ಮಕವಾಗಿ ದೊಡ್ಡ ಶಕ್ತಿಯನ್ನು ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ