ಕಂಪನಿ ಮಾರಿ 400 ನೌಕರರನ್ನು ಶ್ರೀಮಂತರನ್ನಾಗಿಸಿದ ಸಿಇಒ ಜ್ಯೋತಿ ಬನ್ಸಾಲ್

|

Updated on: Oct 06, 2024 | 4:27 PM

AppDynamics employees becoming rich: ಝಡ್​ಸ್ಕೇಲರ್ ಕಂಪನಿಯನ್ನು ಮಾರಿದ ಬಳಿಕ ಅದರ ಉದ್ಯೋಗಿಗಳು ಶ್ರೀಮಂತರಾದ ಕಥೆ ಬಗ್ಗೆ ಕೇಳಿರಬಹುದು. ಆ ಕಂಪನಿಯ ಸಿಇಒ ಆಗಿದ್ದು ಜಯ್ ಚೌಧರಿ. ಭಾರತ ಮೂಲದ ಮತ್ತೊಬ್ಬ ಸಿಇಒ ಜ್ಯೋತಿ ಬನ್ಸಾಲ್ ಕೂ 2017ರಲ್ಲಿ ತಮ್ಮ ಆ್ಯಪ್​ಡೈನಾಮಿಕ್ಸ್ ಕಂಪನಿಯನ್ನು ಮಾರಿದ ಪರಿಣಾಮ 400 ಉದ್ಯೋಗಿಗಳು ಶ್ರೀಮಂತರಾದರು.

ಕಂಪನಿ ಮಾರಿ 400 ನೌಕರರನ್ನು ಶ್ರೀಮಂತರನ್ನಾಗಿಸಿದ ಸಿಇಒ ಜ್ಯೋತಿ ಬನ್ಸಾಲ್
ಜ್ಯೋತಿ ಬನ್ಸಾಲ್
Follow us on

ಕ್ಯಾಲಿಫೋರ್ನಿಯಾ, ಅಕ್ಟೋಬರ್ 6: ಕೆಲ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಉತ್ತೇಜಿಸಲು ಷೇರುಗಳನ್ನು ನೀಡಲಾಗುತ್ತದೆ. ಈ ರೀತಿ ಷೇರುಗಳನ್ನು ಹೊಂದಿದವರ ಅದೃಷ್ಟ ಖುಲಾಯಿಸಿದರೆ ಕೋಟ್ಯಾಧೀಶ್ವರರಾಗುವುದುಂಟು. ಈ ರೀತಿ ಕಂಪನಿ ಷೇರುಗಳ ಮೂಲಕ ಶ್ರೀಮಂತರಾದವರ ಉದಾಹರಣೆ ಹಲವುಂಟು. ಆ್ಯಪ್​ಡೈನಾಮಿಕ್ಸ್ ಎಂಬ ಸಂಸ್ಥೆಯ 400 ಉದ್ಯೋಗಿಗಳು ಕೋಟ್ಯಾಧೀಶ್ವರರಾಗಿದ್ದುಂಟು. ಈ ಕಂಪನಿಯ ಸಂಸ್ಥಾಪಕರಾದ ಜ್ಯೋತಿ ಬನ್ಸಾಲ್ ಭಾರತ ಮೂಲದವರು. 2017ರಲ್ಲಿ ಸಿಸ್ಕೋ ಸಂಸ್ಥೆಗೆ ಆ್ಯಪ್ ಡೈನಾಮಿಕ್ಸ್ ಕಂಪನಿಯನ್ನು ಮಾರಿದ್ದರು. ನೋಡನೋಡುತ್ತಿದ್ದಂತೆಯೇ, ಕಂಪನಿಯ ಷೇರು ಮೌಲ್ಯ ಸಖತ್ತಾಗಿ ಬೆಳೆದು, ಪೂರ್ವದಲ್ಲೇ ಷೇರು ಹೊಂದಿದ ಉದ್ಯೋಗಿಗಳಿಗೆ ಶ್ರೀಮಂತಿಕೆ ತಂದುಕೊಟ್ಟಿತ್ತು.

ದೆಹಲಿಯ ಐಐಟಿಯಲ್ಲಿ ಓದಿದ್ದ 46 ವರ್ಷದ ಜ್ಯೋತಿ ಬನ್ಸಾಲ್ 2017ರಲ್ಲಿ ಆ್ಯಪ್​ಡೈನಾಮಿಕ್ಸ್ ಅನ್ನು ಮಾರುವ ಮುನ್ನ ಎಂಟು ವರ್ಷ ಕಟ್ಟಿ, ಪೋಷಿಸಿ ಬೆಳೆಸಿದ್ದರು. ಅಲ್ಲಿ ಕೆಲಸ ಮಾಡುವ 1,200 ಉದ್ಯೋಗಿಗಳ ಪೈಕಿ 400 ಮಂದಿಗೆ ವಿವಿಧ ಪ್ರಮಾಣದಲ್ಲಿ ಕಂಪನಿಯ ಷೇರುಗಳನ್ನು ನೀಡಲಾಗಿತ್ತು. ಐಪಿಒಗೆ ಕಾಲಿಡಬೇಕೆನ್ನುವ ಸಂದರ್ಭದಲ್ಲಿ ಸಿಸ್ಕೋದಿಂದ 3.7 ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸುವ ಆಫರ್ ಬಂದಿತು.

ಇದನ್ನೂ ಓದಿ: ಹಣವಂತ ಎನಿಸಿಕೊಳ್ಳಬೇಕಾದರೆ ಎಷ್ಟು ಹಣ ಸಂಪಾದನೆ ಇರಬೇಕು? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ

ಎಂಟು ವರ್ಷ ತಾನು ಕಟ್ಟಿದ್ದ ಕಂಪನಿಯನ್ನು ಮಾರುವ ಮನಸ್ಸು ಜ್ಯೋತಿಗೆ ಇರಲಿಲ್ಲ. ಆದರೆ, ಸಿಸ್ಕೋ ಕೊಟ್ಟ ಆಫರ್ ದೊಡ್ಡದಿತ್ತು. ತಾನು ಐಪಿಒಗೆ ಹೋಗಿ ಬಂಡವಾಳ ತಂದರೂ ಸಿಸ್ಕೋ ಆಫರ್​ನಲ್ಲಿ ಬಂದ ಮೌಲ್ಯದ ಮಟ್ಟ ತಲುಪಲು ಕನಿಷ್ಠ ಮೂರು ವರ್ಷವಾದರೂ ಬೇಕಾಗುತ್ತಿತ್ತು. ಈ ಕಾರಣಕ್ಕೆ ಜ್ಯೋತಿ ಬನ್ಸಾಲ್ ಅವರು ಆ್ಯಪ್​ಡೈನಾಮಿಕ್ಸ್ ಅನ್ನು 2017ರಲ್ಲಿ ಸಿಸ್ಕೋಗೆ ಮಾರಲು ಒಪ್ಪಿದರು.

ಸಿಸ್ಕೋಗೆ ಮಾರಾಟವಾದ ಬಳಿಕ ಆ್ಯಪ್ ಡೈನಾಮಿಕ್ಸ್ ಸಂಸ್ಥೆಯ ಷೇರುಗಳು ಭರ್ಜರಿ ಮೌಲ್ಯ ಪಡೆದುಕೊಂಡವು. 350ಕ್ಕೂ ಹೆಚ್ಚು ಉದ್ಯೋಗಿಗಳು ಕನಿಷ್ಠ ಒಂದು ಮಿಲಿಯನ್ ಡಾಲರ್​ನಷ್ಟಾದರೂ ಸಂಪತ್ತು ಗಿಟ್ಟಿಸಿಕೊಂಡರು. ಹತ್ತಕ್ಕೂ ಹೆಚ್ಚು ಮಂದಿಯ ಷೇರುಗಳ ಮೌಲ್ಯ ಐದು ಮಿಲಿಯನ್ ಡಾಲರ್​ಗೂ ಹೆಚ್ಚಾಗಿ ಹೋಗಿತ್ತು. ಈ 400 ಮಂದಿ ಉದ್ಯೋಗಿಗಳು ಶ್ರೀಮಂತರಾಗಿ ಹೋಗಿದ್ದರು.

ಇದನ್ನೂ ಓದಿ: ಜೊಮಾಟೊ ಉದ್ಯೋಗಿಗಳಿಗೆ 330 ಕೋಟಿ ರೂ ಮೊತ್ತದ ಭರ್ಜರಿ ಉಡುಗೊರೆ; ಇಸಾಪ್ ಬಿಡುಗಡೆ

ಜಯ್ ಚೌಧರಿ ಮತ್ತು ಝಡ್​ಸ್ಕೇಲರ್

ಭಾರತ ಮೂಲದವರೇ ಆದ ಇನ್ನೊಬ್ಬ ಸಿಇಒ ಜಯ್ ಚೌಧರಿ ಕೂಡ ಹೀಗೆಯೇ ತಮ್ಮ ಕಂಪನಿಯನ್ನು ಮಾರಿ ಉದ್ಯೋಗಿಗಳನ್ನು ಶ್ರೀಮಂತರನ್ನಾಗಿಸಿದ್ದುಂಟು. ಇವರು ಸಂಸ್ಥಾಪಿಸಿದ ಝಡ್​ಸ್ಕೇಲರ್ ಅನ್ನು ವೆರಿಸೈನ್ ಎನ್ನುವ ಕಂಪನಿಗೆ ಮಾರಿದ್ದರು. ಅದಾಗಿ ಎರಡು ವರ್ಷಕ್ಕೆ ವೆರಿಸೈನ್ ಷೇರುಬೆಲೆ ಸಖತ್ತಾಗಿ ಏರಿತ್ತು. ಝಡ್​ಸ್ಕೇಲರ್​ನಲ್ಲಿದ್ದ 80 ಉದ್ಯೋಗಿಗಳ ಪೈಕಿ 70 ಮಂದಿಗೆ ಷೇರುಗಳನ್ನು ಹಂಚಲಾಗಿತ್ತು. ಅವರೆಲ್ಲರೂ ಶ್ರೀಮಂತರಾಗಿ ಹೋಗಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ