AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೊಮಾಟೊ ಉದ್ಯೋಗಿಗಳಿಗೆ 330 ಕೋಟಿ ರೂ ಮೊತ್ತದ ಭರ್ಜರಿ ಉಡುಗೊರೆ; ಇಸಾಪ್ ಬಿಡುಗಡೆ

Zomato ESOPs to employees: ಜೊಮಾಟೊ ಸಂಸ್ಥೆ ತನ್ನ ಉದ್ಯೋಗಿಗಳಿಗೆ 1,19,97,652 ಸ್ಟಾಕ್ ಆಪ್ಷನ್ಸ್ ಕೊಡುಗೆ ನೀಡಿದೆ. ಇದರ ಒಟ್ಟು ಮೌಲ್ಯ 330 ಕೋಟಿ ರೂ ಇದೆ. ಒಂದು ರೂ ಫೇಸ್​ವ್ಯಾಲ್ಯೂ ಇರುವ ಈ ಷೇರುಗಳನ್ನು ಉದ್ಯೋಗಿಗಳು 10 ವರ್ಷದೊಳಗೆ ಪೂರ್ವನಿಗದಿತ ಬೆಲೆಯೊಳಗೆ ಖರೀದಿಸಲು ಅವಕಾಶ ಕೊಡಲಾಗಿದೆ.

ಜೊಮಾಟೊ ಉದ್ಯೋಗಿಗಳಿಗೆ 330 ಕೋಟಿ ರೂ ಮೊತ್ತದ ಭರ್ಜರಿ ಉಡುಗೊರೆ; ಇಸಾಪ್ ಬಿಡುಗಡೆ
ಜೊಮಾಟೊ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 06, 2024 | 1:28 PM

Share

ನವದೆಹಲಿ, ಅಕ್ಟೋಬರ್ 6: ದೇಶದ ಎರಡು ಅತಿದೊಡ್ಡ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್​ಗಳಲ್ಲೊಂದಾದ ಜೊಮಾಟೊ ತನ್ನ ಉದ್ಯೋಗಿಗಳನ್ನು ಉತ್ತೇಜಿಸಲು ಸ್ಟಾಕ್ ಆಪ್ಷನ್ಸ್ (ESOP) ಬಿಡುಗಡೆ ಮಾಡಿದೆ. ಎಂಪ್ಲಾಯೀ ಸ್ಟಾಕ್ ಓನರ್​ಶಿಪ್ ಪ್ಲಾನ್ (ಇಸಾಪ್) ಅಡಿಯಲ್ಲಿ ಸುಮಾರು 1.2 ಕೋಟಿ ಷೇರುಗಳನ್ನು ಉದ್ಯೋಗಿಗಳಿಗೆ ನೀಡಿದೆ. ಇವುಗಳ ಈಗಿನ ಒಟ್ಟು ಮೌಲ್ಯ 330.17 ಕೋಟಿ ರೂ ಆಗಿದೆ. ಇಸಾಪ್ 2021 ಸ್ಕೀಮ್ ಅಡಿಯಲ್ಲಿ 1,19,97,652 ಸ್ಟಾಕ್ ಆಪ್ಷನ್ಸ್ ನೀಡಲಾಗಿದೆ. 2014ರ ಇಸಾಪ್ ಸ್ಕೀಮ್ಅಡಿಯಲ್ಲಿ 116 ಸ್ಟಾಕ್ ಆಪ್ಷನ್ಸ್ ಬಿಡುಗಡೆ ಮಾಡಲಾಗಿದೆ.

ಈ ಪ್ರತಿಯೊಂದು ಇಸಾಪ್​ ಷೇರಿನ ಫೇಸ್ ವ್ಯಾಲ್ಯೂ 1 ರೂ ಇದೆ. ಇಸಾಪ್ ಪಡೆದು 10 ವರ್ಷದೊಳಗೆ ಅದನ್ನು ಷೇರುಗಳಾಗಿ ಪರಿವರ್ತಿಸಿಕೊಳ್ಳಬೇಕು. ಅಥವಾ ಸಂಸ್ಥೆಯ ಷೇರುಗಳು ಲಿಸ್ಟ್ ಆದ ದಿನದಿಂದ 12 ವರ್ಷದೊಳಗೆ ಈ ಇಸಾಪ್​ಗಳನ್ನು ಷೇರುಗಳಾಗಿ ಪರಿವರ್ತಿಸಿಕೊಳ್ಳಬೇಕು ಎಂಬ ನಿಯಮ ಇದೆ.

ಏನಿದು ಇಸಾಪ್ ಎಂದರೆ?

ಇಸಾಪ್ ಎಂಬುದು ಉದ್ಯೋಗಿಗಳಿಗೆ ಷೇರು ಖರೀದಿಸಲು ನೀಡಲಾಗುವ ಆಯ್ಕೆ. ಪೂರ್ವ ನಿಗದಿಯಾದ ಬೆಲೆಗೆ ನಿರ್ದಿಷ್ಟ ಅವಧಿಯೊಳಗೆ ಈ ಇಸಾಪ್​ಗಳನ್ನು ಬಳಸಿ ಷೇರು ಖರೀದಿಸಬಹುದು. ಹಾಲಿ ಮಾರುಕಟ್ಟೆ ಮೌಲ್ಯದ ಪ್ರಕಾರ ಇಸಾಪ್​ನ ಪೂರ್ವನಿಗದಿತ ಷೇರುಬೆಲೆಯಾಗಿರುತ್ತದೆ.

ಇದನ್ನೂ ಓದಿ: ವಿಶ್ವದಾಖಲೆಯ ಪಿಎಂ ಕಿಸಾನ್ ಸ್ಕೀಮ್​ಗೆ ಯಾರು ಅರ್ಹರು, ಯಾರು ಅರ್ಹರಲ್ಲ, ಇಲ್ಲಿದೆ ಡೀಟೇಲ್ಸ್

ಹೆಚ್ಚಿನ ಕಂಪನಿಗಳಲ್ಲಿ ಇಸಾಪ್ ಸ್ಕೀಮ್​ನಲ್ಲಿ ವಿತರಿಸಲಾಗುವ ಷೇರುಗಳನ್ನು ಗಳಿಸಲು ಲಾಕಿನ್ ಪೀರಿಯಡ್ ಎಂದಿರುತ್ತದೆ. ಅಂದರೆ, ಇಸಾಪ್ ವಿತರಣೆ ಆಗಿ ನಿಗದಿತ ಅವಧಿಯವರೆಗೆ ಷೇರುಗಳಾಗಿ ಪರಿವರ್ತಿಸಲು ಆಗುವುದಿಲ್ಲ. ಈ ಲಾಕಿನ್ ಅವಧಿ 1 ವರ್ಷದಿಂದ ಹಿಡಿದು 5 ವರ್ಷದವರೆಗೂ ಇರಬಹುದು. ಜೊಮಾಟೊ ಸಂಸ್ಥೆಯ ಇಸಾಪ್ ಪ್ಲಾನ್​ನಲ್ಲಿ ಈ ರೀತಿ ಲಾಕಿನ್ ಅವಧಿ ಇಲ್ಲ. ಅಂದರೆ, ಇಸಾಪ್ ಪಡೆದ ಉದ್ಯೋಗಿಗಳು 10 ವರ್ಷದಲ್ಲಿ ಯಾವಾಗ ಬೇಕಾದರೂ ಷೇರುಗಳನ್ನು ಪಡೆಯಬಹುದು. ಇದನ್ನೇ ಸ್ಟಾಕ್ ಆಪ್ಷನ್ಸ್ ಎನ್ನುವುದು.

ಒಂದು ವೇಳೆ ಜೊಮಾಟೊ ಉದ್ಯೋಗಿಗಳು ಐದು ವರ್ಷ ಬಿಟ್ಟು ಇಸಾಪ್ ಪ್ಲಾನ್​ನಲ್ಲಿ ಷೇರುಗಳನ್ನು ಪಡೆಯಲು ಬಯಸಿದರೆ, ಈಗ ಪೂರ್ವನಿಗದಿಯಾದ ಬೆಲೆಗೆ ಅದನ್ನು ಖರೀದಿಸಲು ಅವಕಾಶ ಇರುತ್ತದೆ. ಉದಾಹರಣೆಗೆ, ಈಗಿನ ಷೇರುಬೆಲೆ 275 ರೂ ಇದೆ. ಇದೇ ಪೂರ್ವನಿಗದಿತ ಬೆಲೆ ಎಂದಾಗಿದೆ ಎಂದಿಟ್ಟುಕೊಳ್ಳಿ. ಐದು ವರ್ಷ ಬಳಿಕ ಅದರ ಷೇರುಬೆಲೆ 800 ರೂ ಆಗಿದ್ದಲ್ಲಿ, ಉದ್ಯೋಗಿಗಳು 275 ರೂ ಬೆಲೆಗೆ ಷೇರು ಖರೀದಿಸಲು ಅವಕಾಶ ಇರುತ್ತದೆ. ಆದರೆ, ಜೊಮಾಟೊದ ಡೆಲಿವರಿ ಹುಡುಗರಿಗೆ ಈ ಇಸಾಪ್ ಪ್ಲಾನ್ ಇಲ್ಲ. ಕಚೇರಿಗಳಲ್ಲಿ ಕೆಲಸ ಮಾಡುವ ಆಯ್ದ ಉದ್ಯೋಗಿಗಳಿಗೆ ಸ್ಟಾಕ್ ಆಪ್ಷನ್ಸ್ ನೀಡಲಾಗಿದೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ ಹೊಸ ದಾಖಲೆ; 700 ಬಿಲಿಯನ್ ಡಾಲರ್ ಮುಟ್ಟಿದ ನಾಲ್ಕನೇ ರಾಷ್ಟ್ರ

ಇನ್ನೂ ಚೆನ್ನಾಗಿ ಕೆಲಸ ಮಾಡಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರೆ ಷೇರುಬೆಲೆ ಹೆಚ್ಚುತ್ತದೆಯಾದ್ದರಿಂದ ಇಸಾಪ್​ಗಳು ಉದ್ಯೋಗಿಗಳಿಗೆ ಉತ್ತೇಜನಕಾರಿ ಎನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ