ವಿಶ್ವದಾಖಲೆಯ ಪಿಎಂ ಕಿಸಾನ್ ಸ್ಕೀಮ್​ಗೆ ಯಾರು ಅರ್ಹರು, ಯಾರು ಅರ್ಹರಲ್ಲ, ಇಲ್ಲಿದೆ ಡೀಟೇಲ್ಸ್

PM Kisan scheme eligibilities: ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ವರ್ಷಕ್ಕೆ 6,000 ರೂ ನೀಡುತ್ತದೆ. ನಿನ್ನೆ (ಅ. 5) ಪ್ರಧಾನಿ ನರೇಂದರ ಮೋದಿ 18ನೇ ಕಂತಿನ ಹಣ ಬಿಡುಗಡೆ ಮಾಡಿದರು. ಈ ಯೋಜನೆಯಲ್ಲಿ ಕೃಷಿ ಜಮೀನು ಹೊಂದಿರುವ ರೈತರು ಫಲಾನುಭವಿಗಳಾಗಬಹುದು. ರೈತರಾದರೂ ಯೋಜನೆಗೆ ಅರ್ಹರಾಗಲು ಇನ್ನೂ ಕೆಲ ಮಾನದಂಡಗಳಿವೆ. ಅವುಗಳ ವಿವರ ಇಲ್ಲಿದೆ...

ವಿಶ್ವದಾಖಲೆಯ ಪಿಎಂ ಕಿಸಾನ್ ಸ್ಕೀಮ್​ಗೆ ಯಾರು ಅರ್ಹರು, ಯಾರು ಅರ್ಹರಲ್ಲ, ಇಲ್ಲಿದೆ ಡೀಟೇಲ್ಸ್
ರೈತ
Follow us
|

Updated on: Oct 06, 2024 | 12:02 PM

ನವದೆಹಲಿ, ಅಕ್ಟೋಬರ್ 6: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ ಪಿಎಂ ಕಿಸಾನ್ ಸ್ಕೀಮ್ (PM Kisan Scheme) ​ನಲ್ಲಿ ನಿನ್ನೆ ಶನಿವಾರ 18ನೇ ಕಂತಿನ ಹಣ ಬಿಡುಗಡೆ ಆಗಿದೆ. 9,40,00,0000ಕ್ಕೂ ಹೆಚ್ಚು ರೈತರ ಖಾತೆಗಳಿಗೆ ಒಟ್ಟು 20,000 ಕೋಟಿ ರೂ ಹಣ ಬಿಡುಗಡೆ ಆಗಿದೆ. ಪ್ರತೀ ರೈತರ ಖಾತೆಗಳಿಗೆ 2,000 ರೂ ಹಣ ಸಿಗುತ್ತಿದೆ. 2019ರ ಫೆಬ್ರುವರಿಯಲ್ಲಿ ಅರಂಭಗೊಂಡ ಈ ಯೋಜನೆಯಲ್ಲಿ ಇಲ್ಲಿಯವರೆಗೆ ಬಿಡುಗಡೆಯಾದ 18 ಕಂತುಗಳಲ್ಲಿ ಸರ್ಕಾರಕ್ಕೆ ಆದ ವೆಚ್ಚ ಬರೋಬ್ಬರಿ 3.45 ಲಕ್ಷ ಕೋಟಿ ರೂ. ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ (ಡಿಬಿಟಿ) ಆಗುತ್ತದೆ. ಈ ರೀತಿ ಅತಿಹೆಚ್ಚು ಮಂದಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಆಗುವ ಸ್ಕೀಮ್ ಎನ್ನುವ ವಿಶ್ವದಾಖಲೆ ಈ ಸ್ಕೀಮ್​ನದ್ದು.

ಏನಿದು ಪಿಎಂ ಕಿಸಾನ್ ಯೋಜನೆ?

ರೈತರ ಬೇಸಾಯಕ್ಕೆ ನೆರವಾಗಲೆಂದು ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿದೆ. ವರ್ಷಕ್ಕೆ ಮೂರು ಬಾರಿ, ಅಂದರೆ ಪ್ರತೀ ನಾಲ್ಕು ತಿಂಗಳಿಗೆ ಸರ್ಕಾರವು ರೈತರಿಗೆ ಸಹಾಯಧನ ಒದಗಿಸುತ್ತದೆ. ಜಮೀನು ಮಾಲಕತ್ವದ ಹೊಂದಿರುವ ರೈತರು ಈ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ ಹೊಸ ದಾಖಲೆ; 700 ಬಿಲಿಯನ್ ಡಾಲರ್ ಮುಟ್ಟಿದ ನಾಲ್ಕನೇ ರಾಷ್ಟ್ರ

ಪಿಎಂ ಕಿಸಾನ್ ಸ್ಕೀಮ್​ನಲ್ಲಿ ರೈತರ ಅರ್ಹತಾ ಮಾನದಂಡಗಳಿವು

ಈ ಯೋಜನೆ ಪಡೆಯಬೇಕಾದರೆ ಕೃಷಿ ಭೂಮಿಯ ಮಾಲಕತ್ವ ಹೊಂದಿರಬೇಕು. ಇದು ಮೂಲಭೂತ ಅಂಶ. ಯಾರು ಅರ್ಹರಲ್ಲ ಎನ್ನುವುದಕ್ಕೆ ಹಲವು ನಿಬಂಧನೆಗಳಿವೆ. ಅವುಗಳ ಪಟ್ಟಿ ಕೆಳಗಿದೆ:

  • ಸಾಂಸ್ಥಿಕ ಭೂಮಾಲೀಕರು (Institutional land holders) ಆಗಿರುವಂತಿಲ್ಲ
  • ಕುಟುಂಬದಲ್ಲಿ ಹಾಲಿ ಅಥವಾ ಮಾಜಿ ಸಚಿವರು, ಲೋಕಸಭಾ ಸಂಸದರು, ರಾಜ್ಯಸಭಾ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಹಾಪೌರರು (ಹಾಲಿ ಮೇಯರ್), ಜಿಲ್ಲಾ ಪಂಚಾಯತ್​ಗಳ ಮಾಜಿ ಮತ್ತು ಹಾಲಿ ಅಧ್ಯಕ್ಷರು ಇರುವಂತಿಲ್ಲ.
  • ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳು, ಸಂಸ್ಥೆಗಳ ಹಾಲಿ ಮತ್ತು ನಿವೃತ್ತ ಉದ್ಯೋಗಿಗಳು ಕುಟುಂಬದಲ್ಲಿ ಇರಬಾರದು.
  • ಸ್ಥಳೀಯ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಉದ್ಯೋಗಿಗಳೂ ಕುಟುಂಬದಲ್ಲಿ ಇರುವಂತಿಲ್ಲ. ಆದರೆ, ನಾಲ್ಕನೇ ದರ್ಜೆ ಅಥವಾ ಡಿ ಗ್ರೂಪ್ ಉದ್ಯೋಗಿಗಳಿದ್ದರೆ ಸಮಸ್ಯೆ ಇಲ್ಲ.
  • ತಿಂಗಳಿಗೆ 10,000 ರೂಗೂ ಹೆಚ್ಚು ಮೊತ್ತದ ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರು ಕುಟುಂಬದಲ್ಲಿ ಇರುವಂತಿಲ್ಲ.
  • ಹಿಂದಿನ ಅಸೆಸ್ಮೆಂಟ್ ವರ್ಷದಲ್ಲಿ (ಮೌಲ್ಯಮಾಪನ ವರ್ಷ) ಆದಾಯ ತೆರಿಗೆ ಪಾವತಿಸಿದ ವ್ಯಕ್ತಿ ಕುಟುಂಬ ಸದಸ್ಯರಾಗಿರುವಂತಿಲ್ಲ.
  • ವೈದ್ಯ, ಎಂಜಿನಿಯರ್, ವಕೀಲ, ಸಿಎ, ಆರ್ಕಿಟೆಕ್ಟ್ ಇತ್ಯಾದಿ ವೃತ್ತಿಪರರು ಕುಟುಂಬದಲ್ಲಿ ಇರುವಂತಿಲ್ಲ.

ಇದನ್ನೂ ಓದಿ: ಹೊತ್ತಿ ಉರಿಯುವ ಭೀತಿಯಲ್ಲಿ ಮಧ್ಯಪ್ರಾಚ್ಯ; ಭಾರತದ ಆರ್ಥಿಕತೆಯ ಮೇಲೇನು ಪರಿಣಾಮಗಳು?

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ