ನವದೆಹಲಿ, ಫೆಬ್ರುವರಿ 23: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಬಂದರು ನಗರಿ ಗ್ವಾದರ್ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದನ್ನು ನಿರ್ಮಿಸಲಾಗಿದೆ. ಕಳೆದ ವರ್ಷ (2024) ಅಕ್ಟೋಬರ್ನಲ್ಲಿ ಈ ಏರ್ಪೋರ್ಟ್ ನಿರ್ಮಾಣಕ್ಕೆ ಬರೋಬ್ಬರಿ 240 ಮಿಲಿಯನ್ ಡಾಲರ್ ಹಣ ಖರ್ಚಾಗಿದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ 2,000 ಕೋಟಿ ಆಗುತ್ತದೆ. ಪಾಕಿಸ್ತಾನ ರುಪಾಯಿಯಲ್ಲಿ ಇದು 6,700 ಕೋಟಿ ರೂ ಆಗುತ್ತದೆ. ಏರ್ಪೋರ್ಟ್ ನಿರ್ಮಾಣ ಆಗಿ ಮೂರ್ನಾಲ್ಕು ತಿಂಗಳಾದರೂ ಒಂದೇ ಒಂದು ವಿಮಾನವೂ ಇಲ್ಲಿ ಓಡಾಡಿಲ್ಲ. ಪ್ರಯಾಣಿಕರ ಸುಳಿವಿಲ್ಲ.
ಈ ಏರ್ಪೋರ್ಟ್ನ ಕೆಪಾಸಿಟಿ 4 ಲಕ್ಷ ಪ್ರಯಾಣಿಕರಷ್ಟಿದೆ. ಅಂದರೆ, ಒಂದು ವರ್ಷದಲ್ಲಿ ನಾಲ್ಕು ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುವಷ್ಟು ದೊಡ್ಡದು ಈ ವಿಮಾನ ನಿಲ್ದಾಣ. ವಿಚಿತ್ರ ಎಂದರೆ, ಗ್ವಾದರ್ ನಗರದಲ್ಲಿ ಒಂದು ಲಕ್ಷ ಜನಸಂಖ್ಯೆಯೂ ಇಲ್ಲ. ಇಷ್ಟು ವಿರಳ ಜನಸಂಖ್ಯೆಗೆ ಒಂದು ಏರ್ಪೋರ್ಟ್ ಅಗತ್ಯವಾ ಎಂಬುದು ಒಂದು ಪ್ರಶ್ನೆಯಾದರೆ, ಸಾಲದ ಹೊರೆಯಲ್ಲೇ ಒದ್ದಾಡುತ್ತಿರುವ ಪಾಕಿಸ್ತಾನಕ್ಕೆ ಈ ಏರ್ಪೋರ್ಟ್ ಬೇಕಾ ಎನ್ನುವುದು ಇನ್ನೊಂದು ಪ್ರಶ್ನೆ.
ಇದನ್ನೂ ಓದಿ: ಒಂದು ಮೊಟ್ಟೆಯ ಕಥೆ… ಅಮೆರಿಕದಲ್ಲಿ ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಿರುವ ಜನರು… ಕಾರಣ ಏನು ಗೊತ್ತಾ?
ಗ್ವಾದರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಹಣಕಾಸು ವ್ಯವಸ್ಥೆ ಮಾಡಿದ್ದು ಚೀನಾ ದೇಶವೇ. ಪಾಕಿಸ್ತಾನಕ್ಕೆ ಸಾಲ ಕೊಟ್ಟು ಈ ಏರ್ಪೋರ್ಟ್ ಕಟ್ಟಿಸಿದೆ ಚೀನಾ. ಈ ಏರ್ಪೋರ್ಟ್ನಿಂದ ಪಾಕಿಸ್ತಾನಕ್ಕೆ ಒಂದಿನಿತೂ ಉಪಯೋಗವಿಲ್ಲ. ಆದರೆ, ಚೀನಾಗೆ ನಾನಾ ಪ್ರಯೋಜನಗಳುಂಟು. ಗ್ವಾದರ್ ಮೊದಲಾಗಿ ಬಂದರು ನಗರಿ. ಚೀನಾದ ಸರಕುಗಳ ಸಾಗಣೆಗೆ ಗ್ವಾದರ್ ಪ್ರಮುಖ ಕೊಂಡಿಯಾಗಬಲ್ಲುದು.
ಗ್ವಾದರ್ ಸೇರಿದಂತೆ ಬಲೂಚಿಸ್ತಾನದ ವಿವಿಧೆಡೆ ಚೀನಾ ಹಲವು ಕಾಮಗಾರಿಗಳನ್ನು ನಡೆಸುತ್ತಿದೆ. ಸಾಕಷ್ಟು ಚೀನೀ ಜನರು ಇಲ್ಲಿ ಇದ್ದಾರೆ. ಇವರಿಗಾಗೇ ಏರ್ಪೋರ್ಟ್ ನಿರ್ಮಿಸಿದಂತೆ ಕಾಣುತ್ತಿದೆ ಎಂದು ಪಾಕಿಸ್ತಾನದ ಕೆಲವರು ಆರೋಪಿಸುತ್ತಿದ್ದಾರೆ.
ಗ್ವಾದರ್ ಈ ಹಿಂದೆ ಓಮನ್ ದೇಶದ ಆಳ್ವಿಕೆಯಲ್ಲಿತ್ತು. ಗ್ವಾದರ್ ಪುಟ್ಟ ಪಟ್ಟಣವಾದರೂ ಆಯಕಟ್ಟಿನಲ್ಲಿರುವ ಪ್ರದೇಶ. ಓಮನ್ನಿಂದ ಇದನ್ನು ಭಾರತ ಪಡೆಯುವ ಅವಕಾಶ ಇತ್ತಾದರೂ, ಆ ಸಂದರ್ಭದಲ್ಲಿ ಆಸಕ್ತಿ ತೋರಲಿಲ್ಲ. ಕೊನೆಗೆ ಓಮನ್ ಇದನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು. ಓಮನ್ ಆಳ್ವಿಕೆ ಇದ್ದಾಗ ಇಲ್ಲಿ ತಕ್ಕಮಟ್ಟಿಗೆ ಉದ್ಯೋಗ, ನೀರು ಇತ್ಯಾದಿ ಮೂಲಭೂತ ಅಂಶಗಳು ಇದ್ದವು. ಪಾಕಿಸ್ತಾನಕ್ಕೆ ಸೇರಿದ ಬಳಿಕ ಎಲ್ಲವೂ ಹಾಳಾಯಿತು ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ: ‘ಚಿನ್ನ ಇದ್ಯೋ ಇಲ್ವೋ… ನಾನು ನೋಡ್ಬೇಕು’- ಅಮೆರಿಕದ ಫೋರ್ಟ್ ನಾಕ್ಸ್ಗೆ ಭೇಟಿ ನೀಡಲು ಟ್ರಂಪ್ ಸಜ್ಜು
ಗ್ವಾದರ್ ಮಾತ್ರವಲ್ಲ, ಇಡೀ ಬಲೂಚಿಸ್ತಾನ್ ಪ್ರಾಂತ್ಯದ ಕಥೆಯೇ ಹೀಗಿದೆ. ಇಲ್ಲಿನ ಜನರು ಈಗಲೂ ಕೂಡ ಪಾಕಿಸ್ತಾನದಿಂದ ಬೇರ್ಪಡಲು ಹಪಹಪಿಸುತ್ತಿದ್ಧಾರೆ, ಹೋರಾಡುತ್ತಿದ್ದಾರೆ. ಚೀನೀಯರನ್ನು ಓಡಿಸಲು ಭಯೋತ್ಪಾದಕ ದಾಳಿಗಳನ್ನೂ ನಡೆಸುತ್ತಿದ್ದಾರೆ. ಈಗ ಚೀನೀಯರ ರಕ್ಷಣೆಗೆ ಪಾಕಿಸ್ತಾನ ಪ್ರಬಲ ಮಿಲಿಟರಿ ಪಹರೆಯನ್ನು ಗ್ವಾದರ್ ಹಾಗೂ ಬಲೂಚಿಸ್ತಾನದ ವಿವಿಧೆಡೆ ನಿಯೋಜಿಸಿದೆ. ಈಗ ಏರ್ಪೋರ್ಟ್ ಕೂಡ ನಿರ್ಮಾಣ ಆಗಿದೆ. ಆದರೆ, ಅಂತಿಮವಾಗಿ ಪಾಕಿಸ್ತಾನದ ಸಾಲದ ಹೊರೆ ಇನ್ನಷ್ಟು ಹೆಚ್ಚಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Sun, 23 February 25