ಆರ್​ಬಿಐ ರೆಪೋ ದರ ಇಳಿಸದಿದ್ದರೂ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ

|

Updated on: Jun 03, 2024 | 6:57 PM

Banks May Hike both Depostit and Loan Rates: ಕಮರ್ಷಿಯಲ್ ಬ್ಯಾಂಕುಗಳು ಠೇವಣಿ ದರ ಮತ್ತು ಸಾಲದ ದರಗಳನ್ನು ಹೆಚ್ಚಿಸಬಹುದು ಎನ್ನುವಂತಹ ಸುದ್ದಿ ಕೇಳಿಬರುತ್ತಿದೆ. ಸಾಲಕ್ಕೆ ಬೇಡಿಕೆ ಹೆಚ್ಚುತ್ತಿರುವುದು ಮತ್ತು ಸಾಲದ ಅವಶ್ಯಕತೆಯೂ ಹೆಚ್ಚುತ್ತಿರುವುದು ಇದಕ್ಕೆ ಕಾರಣ. ಸಾಲ ವಿತರಣೆಗೆ ಬ್ಯಾಂಕುಗಳಿಗೆ ಬಂಡವಾಳ ಬೇಕಾಗಿದೆ. ಹೀಗಾಗಿ, ಆಕರ್ಷಕ ಠೇವಣಿ ದರಗಳನ್ನು ಆಫರ್ ಮಾಡಿ ಜನಸಾಮಾನ್ಯರಿಂದ ಬಂಡವಾಳ ಆಕರ್ಷಿಸಲು ಬ್ಯಾಂಕುಗಳು ಮುಂದಾಗಬಹುದು ಎನ್ನಲಾಗಿದೆ.

ಆರ್​ಬಿಐ ರೆಪೋ ದರ ಇಳಿಸದಿದ್ದರೂ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ
ಸಾಲ
Follow us on

ನವದೆಹಲಿ, ಜೂನ್ 3: ಇದೇ ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ದರಗಳನ್ನು ಪ್ರಕಟಿಸಲಿದೆ. ವರದಿಗಳ ಪ್ರಕಾರ, ಆರ್​ಬಿಐ ಈ ಬಾರಿಯೂ ರೆಪೋ ದರವನ್ನು (Repo rate) ಕಡಿಮೆಗೊಳಿಸುವ ಸಾಧ್ಯತೆ ಇಲ್ಲ. ಡಿಸೆಂಬರ್​ವರೆಗೂ ಈಗಿರುವ ಶೇ. 6.5ರ ರೆಪೋ ದರವೇ ಮುಂದುವರಿಯಬಹುದು ಎನ್ನಲಾಗುತ್ತಿದೆ. ಇನ್ನೊಂದೆಡೆ ಬ್ಯಾಂಕಿಂಗ್ ವಲಯ ಬಡ್ಡಿದರ (bank rates) ಹೆಚ್ಚಳಕ್ಕೆ ಸಜ್ಜಾಗುತ್ತಿರುವ ಸುದ್ದಿ ಕೇಳಿಬರುತ್ತಿದೆ. ಸಾಲಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ಸಾಲದ ದರ (loan rates) ಮತ್ತು ಠೇವಣಿ ದರಗಳನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ.

ಏನಿದು ರೆಪೋ ದರ?

ರೆಪೋ ದರ ಎನ್ನುವುದು ಆರ್​ಬಿಐನಿಂದ ಕಮರ್ಷಿಯಲ್ ಬ್ಯಾಂಕುಗಳು ಪಡೆಯುವ ಸಾಲಕ್ಕೆ ಕಟ್ಟಬೇಕಾದ ಬಡ್ಡಿದರ. ಇನ್ನು ರಿವರ್ಸ್ ರೆಪೋ ಎಂದರೆ ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐನಲ್ಲಿ ಇರಿಸುವ ಠೇವಣಿಗೆ ಸಿಗುವ ಬಡ್ಡಿಯಾಗಿದೆ. ಪ್ರತೀ ಎಂಪಿಸಿ ಸಭೆಯಲ್ಲೂ ಆರ್​​ಬಿಐ ಈ ದರಗಳನ್ನು ಪರಿಷ್ಕರಿಸಬೇಕೋ ಬೇಡವೋ ಎಂದು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತದೆ. ಜೂನ್ 5ರಿಂದ ಎಂಪಿಸಿ ಸಭೆ ನಡೆಯುತ್ತದೆ. ಜೂನ್ 7ಕ್ಕೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ಸಭೆಯ ತೀರ್ಮಾನ ಮತ್ತು ಚರ್ಚಿತ ವಿಷಯಗಳನ್ನು ಬಹಿರಂಗಪಡಿಸುತ್ತಾರೆ.

ಇದನ್ನೂ ಓದಿ: ಜೂನ್ 5ರಿಂದ ಆರ್​ಬಿಐ ಎಂಪಿಸಿ ಸಭೆ; ಡಿಸೆಂಬರ್​ವರೆಗೂ ಬಡ್ಡಿದರ ಇಳಿಕೆ ಇಲ್ಲವಾ?

ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುವುದು ಯಾಕೆ?

ಆರ್ಥಿಕತೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ವಲಯಗಳಿಗೆ ಬಂಡವಾಳದ ಅಗತ್ಯ ಬಹಳ ಇದೆ. ಹೀಗಾಗಿ ಬ್ಯಾಂಕ್ ಸಾಲಗಳಿಗೆ ಬಹಳ ಬೇಡಿಕೆ ಇದೆ. ಜನಸಾಮಾನ್ಯರಿಂದ ಬಂಡವಾಳ ಸಂಗ್ರಹಿಸಲು ಬ್ಯಾಂಕುಗಳು ಆಕರ್ಷಕ ಠೇವಣಿ ದರಗಳನ್ನು ಆಫರ್ ಮಾಡಬಹುದು.

ಸಾಲಕ್ಕೆ ಬೇಡಿಕೆ ಇರುವುದರಿಂದ ಬ್ಯಾಂಕುಗಳು ಹೆಚ್ಚಿನ ಬಡ್ಡಿದರ ವಿಧಿಸಲು ಅವಕಾಶ ವಿಫುಲವಾಗಿರುತ್ತದೆ.

ಹೀಗಾಗಿ, ಹೆಚ್ಚುವರಿ ಉಳಿತಾಯ ಹಣ ಹೊಂದಿರುವವರಿಗೆ ಬ್ಯಾಂಕುಗಳಲ್ಲಿ ಹೆಚ್ಚಿನ ಮಟ್ಟದ ಬಡ್ಡಿ ಆದಾಯ ಸಿಗಲಿದೆ. ಪ್ರಸಕ್ತ, ಎಸ್​ಬಿಐ, ಎಚ್​ಡಿಎಫ್​ಸಿ, ಎಕ್ಸಿಸ್ ಮೊದಲಾದ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿಗಳಿಗೆ ಶೇ. 7.5ರವರೆಗೆ ಬಡ್ಡಿ ಕೊಡಲಾಗುತ್ತಿದೆ. ಇದು ಇನ್ನಷ್ಟು ಹೆಚ್ಚಬಹುದು ಎಂದು ಮಾರುಕಟ್ಟೆ ತಜ್ಞರು ನಿರೀಕ್ಷಿಸುತ್ತಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ