ಹೆಲ್ತ್ ಇನ್ಷೂರೆನ್ಸ್ ಅಥವಾ ಆರೋಗ್ಯ ವಿಮೆ (Health Insurance) ಈಗ ಬಹಳ ಅಗತ್ಯವಾಗಿರುವ ಹಣಕಾಸು ಯೋಜನೆ ಎನ್ನುವುದರಲ್ಲಿ ಅನುಮಾನವೇ ಬೇಡ. ಆಸ್ಪತ್ರೆಗೆ ಹೋಗೋದೇ ಇಲ್ಲ ಎನ್ನುವ ಜಗಜಟ್ಟಿಗಳೇ ಹಾಸಿಗೆ ಹಿಡಿದು ಮಲಗಿದ ಉದಾಹರಣೆಗಳು ಬಹಳ ಇವೆ. ಆಸ್ಪತ್ರೆಗೆ ನಾವು ಮಾಡುವ ವೆಚ್ಚ ಕೆಲವೊಮ್ಮೆ ನಮ್ಮನ್ನು ಆರ್ಥಿಕವಾಗಿ ಕಂಗೆಡಿಸಿಬಿಡುತ್ತವೆ. ನಮ್ಮ ಜೀವನ ಭದ್ರತೆಗೆಂದು ತೆಗೆದಿಸಿದ್ದ ಉಳಿತಾಯ ಹಣವೆಲ್ಲಾ ನೀರಲ್ಲಿ ಹೋಮ ಮಾಡಿದಂತೆ ಕರಗಿಹೋಗಬಹುದು. ಈ ಕಾರಣಕ್ಕೆ ಆರೋಗ್ಯ ವಿಮೆ ಇಂದಿನ ಅತ್ಯಗತ್ಯಗಳಲ್ಲಿ ಒಂದು. ಅದರಲ್ಲೂ ಕ್ಯಾನ್ಸರ್ನಂಥ ಮಾರಕ ರೋಗಕ್ಕೆ ಆರೋಗ್ಯ ವಿಮೆ ಬಹಳ ಮುಖ್ಯ. ಕ್ಯಾನ್ಸರ್ಗೆ ಆಗುವ ವೆಚ್ಚ ನೆನಸಿಕೊಂಡರೇ ಸಿಂಹಸ್ವಪ್ನದಂತೆ ಭಾಸವಾಗುತ್ತದೆ. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಯ ಪ್ರತೀ ಹಂತದಲ್ಲೂ ನೀರಿನಂತೆ ಹಣ ಚೆಲ್ಲಬೇಕು. ಚಿಕಿತ್ಸೆ ಫಲಿಸಿ ಬದುಕಿದೆಯಾ ಬಡಜೀವ ಎಂದರೂ, ಅದಕ್ಕೆ ಆಗುವ ಖರ್ಚುವೆಚ್ಚಗಳು ಕ್ಯಾನ್ಸರ್ಗಿಂತಲೂ ಭೀಕರವಾಗಿರಬಹುದು.
ಕ್ಯಾನ್ಸರ್ನಂಥ ಮಾರಕ ರೋಗಗಳಿಗೆಂದು ನಿರ್ದಿಷ್ಟವಾದ ಇನ್ಷೂರೆನ್ಸ್ ಸ್ಕೀಮ್ಗಳುಂಟು. ಈ ವಿಮಾ ಯೋಜನೆಗಳನ್ನು ಪಡೆಯುವಾಗ ಕೆಲವೊಂದಿಷ್ಟು ಅಂಶಗಳ ಬಗ್ಗೆ ಗಮನ ವಹಿಸಬೇಕು. ಕಡಿಮೆ ಪ್ರೀಮಿಯಂ ಮಾತ್ರವೇ ನಿಮ್ಮ ಮಾನದಂಡವಾಗಕೂಡದು. ಬೇರೆ ಕೆಲ ಪ್ರಮುಖ ಅಂಶಗಳು ನಿಮ್ಮ ನಿಷ್ಕರ್ಷೆಯಲ್ಲಿರಲಿ.
ನಿಮಗೆ ಈಗಾಗಲೇ ಕ್ಯಾನ್ಸರ್ ರೋಗ ಇದ್ದರೆ ಬಹುತೇಕ ವಿಮಾ ಸಂಸ್ಥೆಗಳು ನಿಮಗೆ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಒದಗಿಸದೇ ಹೋಗಬಹುದು. ನೀವು ಆರೋಗ್ಯದಿಂದಿದ್ದು ಅನಿರೀಕ್ಷಿತವಾಗಿ ನಡೆಯುವ ಅವಘಡಗಳಿಗಷ್ಟೇ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಖಚಿತವಾಗಿ ಆರೋಗ್ಯಕೆಡುತ್ತದೆ ಎಂದು ಗೊತ್ತಿದ್ದೂ ಯಾವ ಕಂಪನಿ ಇನ್ಷೂರೆನ್ಸ್ ಪಾಲಿಸಿ ಹೇಗೆ ಕೊಡಲು ಸಾಧ್ಯ?
ಕ್ಯಾನ್ಸರ್ ರೋಗಕ್ಕೆ ಚಿಕಿತ್ಸಾ ವೆಚ್ಚ ಬಹಳ ಅಧಿಕ. ತಪಾಸಣೆ, ರೇಡಿಯೇಶನ್, ಕೆಮೋಥೆರಪಿ ಚಿಕಿತ್ಸೆ, ಸರ್ಜರಿ ಇತ್ಯಾದಿಗೆಲ್ಲಾ ಬಹಳ ಖರ್ಚಾಗುತ್ತದೆ. ಹೀಗಾಗಿ, ವರ್ಷಕ್ಕೆ ಇನ್ಷೂರೆನ್ಸ್ ಕವರೇಜ್ ಹೆಚ್ಚಿನ ಮೊತ್ತಕ್ಕೆ ಇರುವಂತಹ ಪ್ಲಾನ್ ಆಯ್ದುಕೊಳ್ಳಿ. ಪ್ರೀಮಿಯಮ್ ಹೆಚ್ಚಾದರೂ ಪರವಾಗಿಲ್ಲ.
ಇದನ್ನೂ ಓದಿ: Home Loan: ಸಾಲಕ್ಕೆ ಇಎಂಐ ಹುಷಾರ್..! 50 ಲಕ್ಷ ಸಾಲ ಪಡೆದು 40 ವರ್ಷ ಇಎಂಐ ಆದರೆ ಕಟ್ಟುವ ಬಡ್ಡಿಯೇ 1.27 ಕೋಟಿ ರೂ
ಬಹುತೇಕ ಇನ್ಷೂರೆನ್ಸ್ ಸ್ಕೀಮ್ಗಳಲ್ಲಿ ಕೆಲ ನಿರ್ದಿಷ್ಟ ರೋಗಗಳ ಚಿಕಿತ್ಸಾ ವೆಚ್ಚ ಭರಿಸಲು ಕಾಯುವಿಕೆ ಅವಧಿ ನಿಗದಿಪಡಿಸಲಾಗುತ್ತದೆ. ಅಂದರೆ ನೀವು ಸ್ಕೀಮ್ ಪಡೆದ ತತ್ಕ್ಷಣದಿಂದಲೇ ಕೆಲ ಕಾಯಿಲೆಗಳಿಗೆ ಕವರೇಜ್ ಇರುವುದಿಲ್ಲ. ಕ್ಯಾನ್ಸರ್ನಂಥ ರೋಗಕ್ಕೆ ಕನಿಷ್ಠ 1 ವರ್ಷವಾದರೂ ವೇಟಿಂಗ್ ಪೀರಿಯಡ್ ಇರುತ್ತದೆ. ನೀವು ಪಾಲಿಸಿ ಮಾಡಿಸಿ ವರ್ಷದೊಳಗೆ ಕ್ಯಾನ್ಸರ್ ಕಾಯಿಲೆ ಇದೆ ಎಂದು ಗೊತ್ತಾದಾಗ ಅದಕ್ಕೆ ಕವರೇಜ್ ಇರುವುದಿಲ್ಲ. ಹೀಗೆ, ವೇಟಿಂಗ್ ಪೀರಿಯಡ್ ಬೇರೆ ಬೇರೆ ಕಂಪನಿಗಳಲ್ಲಿ ಬೇರೆ ಬೇರೆ ಅವಧಿ ಇರುತ್ತದೆ. ಕಡಿಮೆ ವೇಟಿಂಗ್ ಪೀರಿಯಡ್ ಇರುವ ಪಾಲಿಸಿ ನಿಮ್ಮ ಗಮನದಲ್ಲಿರಲಿ.
ಕೆಲ ಆರೋಗ್ಯ ವಿಮಾ ಕಂಪನಿಗಳು ಕ್ಯಾನ್ಸರ್ ಚಿಕಿತ್ಸಾ ವೆಚ್ಚವನ್ನು ತಾವೇ ಪೂರ್ಣವಾಗಿ ಭರಿಸದೇ, ಪಾಲಿಸಿದಾರರಿಗೂ ಕೆಲ ಭಾಗದಷ್ಟು ವೆಚ್ಚವನ್ನು ವರ್ಗಾಯಿಸುತ್ತದೆ. ನೀವು ಪಾಲಿಸಿ ಪಡೆಯುವ ಮುನ್ನ ಈ ಅಂಶದ ಬಗ್ಗೆ ಗಮನಿಸಿ. ಇದನ್ನು ನೋಡದೇ ನೀವು ಪಾಲಿಸಿ ಆಯ್ದುಕೊಂಡರೆ ನಿಮ್ಮ ಜೇಬಿಂದ ಒಂದಷ್ಟು ಖರ್ಚು ಮಾಡಬೇಕಾಗಬಹುದು.
ನೀವು ಪಡೆಯುವ ಆರೋಗ್ಯ ವಿಮೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಮಿತಿ ಹಾಕಲಾಗಿದೆಯಾ ಎಂಬ ಸಂಗತಿಯನ್ನು ಗಮನಿಸಿ. ಉದಾಹರಣೆಗೆ, ನೀವು ಗಂಭೀರ ಕಾಯಿಲೆಗಳಿಗೆ ಪಡೆದ ಇನ್ಷೂರೆನ್ಸ್ ಪ್ಲಾನ್ ಒಟ್ಟಾರೆ 50 ಲಕ್ಷ ರೂ ಕವರೇಜ್ ಹೊಂದಿರಬಹುದು. ಆದರೆ, ಅದರಲ್ಲಿ ಕ್ಯಾನ್ಸರ್ ರೋಗಕ್ಕೆ ಸಿಗುವ ಕವರೇಜ್ 5 ಲಕ್ಷ ರೂಗೆ ಮಿತಿಗೊಳಿಸಿರಬಹುದು.
ಇದನ್ನೂ ಓದಿ: Insurance: ಸಿಂಗಲ್ ಪ್ರೀಮಿಯಮ್ ಇನ್ಷೂರೆನ್ಸ್ ಪಾಲಿಸಿ ಜನಪ್ರಿಯವಾಗುತ್ತಿರುವುದು ಯಾಕೆ? ಅದರ ಅನುಕೂಲತೆಗಳೇನು?
ಕ್ಯಾನ್ಸರ್ ರೋಗ ಬಂದರೆ ಬಹಳಷ್ಟು ಸಂದರ್ಭಗಳಲ್ಲಿ ರೋಗಿಗಳು ಹೆಚ್ಚು ಕಾಲ ಬದುಕುವ ಉದಾಹರಣೆ ಕಡಿಮೆ. ಹೀಗಾಗಿ, ಹೆಚ್ಚಿನ ಇನ್ಷೂರೆನ್ಸ್ ಕಂಪನಿಗಳು ಸರ್ವೈವಲ್ ಪೀರಿಯಡ್ ನಿಗದಿ ಮಾಡುತ್ತವೆ. ಅಂದರೆ, ಕ್ಯಾನ್ಸರ್ ಇರುವುದು ಪತ್ತೆಯಾದಂದಿನಿಂದ ಪಾಲಿಸಿದಾರ ನಿರ್ದಿಷ್ಟ ಅವಧಿಯವರೆಗೆ ಬದುಕುಳಿದರೆ ಆಗ ಇನ್ನೂರೆನ್ಸ್ ಲಾಭ ಕೊಡಲಾಗುತ್ತದೆ.
ನಿಮಗೆ ಒಮ್ಮೆ ಕ್ಯಾನ್ಸರ್ ರೋಗ ಬಂದಿತೆಂದರೆ ಆ ವರ್ಷ ಮಾತ್ರವೇ ಇನ್ಷೂರೆನ್ಸ್ ಪಡೆಯಲು ಸಾಧ್ಯ. ಅದನ್ನು ಮರು ವರ್ಷಕ್ಕೆ ರಿನಿವ್ ಮಾಡಲು ಆಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Sun, 2 July 23