ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಪಳಗಿದ ಹೂಡಿಕೆದಾರರು ಸರ್ಕಾರಿ ಸಂಸ್ಥೆಗಳ ಷೇರೆಂದರೆ (PSU sector stocks) ಮೂಗು ಮುರಿಯುವುದುಂಟು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಕಾರ್ಯನಿರ್ವಹಣೆ ಬಗ್ಗೆ ಇರುವ ಅಸಮಾಧಾನವು ಇದಕ್ಕೆ ಕಾರಣ. ಐದಾರು ವರ್ಷದ ಹಿಂದೆ ಷೇರುಪೇಟೆಗೆ ಅಡಿ ಇಟ್ಟ ಎಚ್ಎಎಲ್ ಸಂಸ್ಥೆ (HAL- Hindustan Aeronautics Ltd) ಬಗ್ಗೆಯೂ ಹಲವರು ಅನುಮಾನದ ದೃಷ್ಟಿ ನೆಟ್ಟಿದ್ದು ಹೌದು. ಆದರೆ, ಈಗ ಎಲ್ಲರ ನಿರೀಕ್ಷೆಮೀರಿ ಎಚ್ಎಎಲ್ ಗರಿಗೆದರಿದೆ. 2018ರ ಮಾರ್ಚ್ನಲ್ಲಿ ಪದಾರ್ಪಣೆಯಾದಂದಿನಿಂದ ಇಲ್ಲಿಯವರೆಗೆ ಐದೂವರೆ ವರ್ಷದಲ್ಲಿ ಎಚ್ಎಎಲ್ ಷೇರು ಶೇ. 262ರಷ್ಟು ಬೆಳೆದಿದೆ.
ನವೆಂಬರ್ 10ರಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆಯ ಷೇರುಬೆಲೆ 2,110.95 ರೂಗೆ ಮಟ್ಟಕ್ಕೆ ಹೋಗಿತ್ತು. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ಅದರ ನಿವ್ವಳ ಲಾಭ 1,236 ಕೋಟಿ ರೂಗೆ ಏರಿತ್ತು. ಹಾಗೆಯೇ, ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಏರ್ಬಸ್ನ ಎ-320 ವಿಮಾನದ ಎಂಆರ್ಒ ಘಟಕ ಸ್ಥಾಪನೆಗೆ ಎಚ್ಎಎಲ್ ಒಪ್ಪಂದ ಮಾಡಿಕೊಂಡಿತು. ಈ ಬೆಳವಣಿಗೆಗಳು ಎಚ್ಎಲ್ ಷೇರಿಗೆ ಇದ್ದ ಡಿಮ್ಯಾಂಡ್ ಅನ್ನು ಇನ್ನಷ್ಟು ಹೆಚ್ಚಿಸಿವೆ.
ಇದನ್ನೂ ಓದಿ: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?
ರಕ್ಷಣಾ ಕ್ಷೇತ್ರದಲ್ಲಿ ಎಚ್ಎಎಲ್ ಹಳೆಯ ಹುಲಿ. ಎಚ್ಎಎಲ್ ಅನ್ನು ಮೂಲೆಗುಂಪು ಮಾಡಿ ಖಾಸಗಿ ವಲಯಕ್ಕೆ ಸರ್ಕಾರ ಪ್ರಾಮುಖ್ಯತೆ ಕೊಡುತ್ತಿದೆ ಎಂದು ಕೆಲ ವರ್ಷಗಳ ಹಿಂದೆ ಆರೋಪ ಇತ್ತು. ಆದರೆ, ಇದೀಗ ಎಚ್ಎಎಲ್ ಸಾಕಷ್ಟು ಒಪ್ಪಂದಗಳನ್ನು ಗಿಟ್ಟಿಸಿದೆ.
ಸರ್ಕಾರ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು, ಅದರ ಫಲ ಎಚ್ಎಎಲ್ಗೆ ಹೆಚ್ಚು ಸಿಗುತ್ತಿದೆ. ಎಚ್ಎಎಲ್ ನಿರ್ಮಿತ ಯುದ್ಧವಿಮಾನಗಳನ್ನು ವಿದೇಶಗಳಿಗೂ ರಫ್ತು ಮಾಡಲು ಮುಂದಲಾಗಿದೆ. ಈ ಎಲ್ಲಾ ಕಾರಣದಿಂದ ಎಚ್ಎಎಲ್ ಸಂಸ್ಥೆ ಮುಂದಿನ ಹಲವು ವರ್ಷಗಳ ಕಾಲ ಸಾಕಷ್ಟು ಯೋಜನೆಗಳನ್ನು ನಿರ್ವಹಿಸಲಿರುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ: HAL Share: ಎಚ್ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್ಎಎಲ್ ಷೇರು
ಎಚ್ಎಎಲ್ ಸಂಸ್ಥೆ ಕಳೆದ ಒಂದು ವರ್ಷದಲ್ಲಿ ಶೇ. 66ರಷ್ಟು ಬೆಳೆದಿದೆ. ಐದೂವರೆ ವರ್ಷದಲ್ಲಿ ಶೇ. 262ರಷ್ಟು ಹೆಚ್ಚಿದೆ. ಈ ಓಟ ಇಲ್ಲಿಗೇ ನಿಲ್ಲುವಂಥದ್ದಲ್ಲ. ಹೂಡಿಕೆ ತಜ್ಞ ಕುಶ್ ಬೋಹ್ರ ಅವರ ಪ್ರಕಾರ ಎಚ್ಎಎಲ್ ಷೇರಿನ ವೇಗದ ಓಟ ಇನ್ನೂ ಬಹಳ ಕಾಲ ಇರಲಿದೆ. ಸರ್ಕಾರ ಕೂಡ ಡಿಫೆನ್ಸ್ ಸೆಕ್ಟರ್ಗೆ ಒತ್ತು ಕೊಡುತ್ತಿರುವುದರಿಂದ ಎಚ್ಎಎಲ್ ದೀರ್ಘಾವಧಿಯಲ್ಲಿ ಬಹಳ ಬೆಳೆಯಲಿರುವ ಸಂಸ್ಥೆಯಾಗಿದೆ. ಸದ್ಯ ಎಚ್ಎಎಲ್ ಷೇರಿನ ಬೆಲೆ 2,056 ರೂ ಇದೆ. 2020ರ ಡಿಸೆಂಬರ್ ತಿಂಗಳಲ್ಲಿ ಇದರ ಬೆಲೆ ಕೇವಲ 343 ರೂ ಇತ್ತು. ಮೂರು ವರ್ಷದಲ್ಲಿ ಅಗಾಧವಾಗಿ ಬೆಳೆದಿರುವ ಎಚ್ಎಎಲ್ ಷೇರುಬೆಲೆ ಮುಂದಿನ ದೀಪಾವಳಿಗೆ 2,500 ರೂ ದಾಟುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ