ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ

| Updated By: Ganapathi Sharma

Updated on: Nov 08, 2022 | 3:56 PM

ಆರೋಗ್ಯ ವಿಮೆಯನ್ನು ಪೋರ್ಟ್ ಮಾಡಿಕೊಳ್ಳಬಹುದು. ಆದರೆ, ಪೋರ್ಟ್ ಮಾಡುವ ಮುನ್ನ ತಿಳಿದಿರಲೇಬೇಕಾದ ಕೆಲವು ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ನೆಟ್​ವರ್ಕ್ ಸಮಸ್ಯೆ ಇದ್ದರೆ ಅಥವಾ ಉತ್ತಮ ಆಫರ್ ಇಲ್ಲದಿದ್ದರೆ ಮೊಬೈಲ್ ಸಿಮ್ ಅನ್ನು ಪೋರ್ಟ್ ಮಾಡುವ ಬಗ್ಗೆ ನೀವು ಕೇಳಿರುತ್ತೀರಿ. ಅದೇ ರೀತಿ ಆರೋಗ್ಯ ವಿಮೆ (Health Insurance) ಪಾಲಿಸಿಯನ್ನೂ ಬೇರೆ ಕಂಪನಿಗೆ ಪೋರ್ಟ್ (Porting) ಮಾಡಬಹುದೇ? ಹೌದು, ನಿಯಮಗಳಲ್ಲಿ ಅದಕ್ಕೆ ಅವಕಾಶವಿದೆ. ಪ್ರಸ್ತುತ ನಿಮ್ಮ ಬಳಿ ಇರುವ ಆರೋಗ್ಯ ವಿಮೆಯಿಂದ ದೊರೆಯುವ ಪ್ರಯೋಜನಗಳ ಬಗ್ಗೆ ನಮಗೆ ಸಮಾಧಾನವಿಲ್ಲದಿದ್ದರೆ, ವಿಮಾದಾರನ ಸೇವೆ ಚೆನ್ನಾಗಿಲ್ಲದಿದ್ದರೆ ಅಥವಾ ಬೇರೆ ಕಂಪನಿಗಳು ಅದಕ್ಕಿಂತ ಉತ್ತಮ ಕೊಡುಗೆಗಳನ್ನು ನೀಡುತ್ತಿದ್ದರೆ ಆರೋಗ್ಯ ವಿಮೆಯನ್ನು ಪೋರ್ಟ್ ಮಾಡಿಕೊಳ್ಳಬಹುದು. ಆದರೆ, ಆರೋಗ್ಯ ವಿಮೆ ಪೋರ್ಟ್ ಮಾಡುವ ಮುನ್ನ ತಿಳಿದಿರಲೇಬೇಕಾದ ಕೆಲವು ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

ಇನ್​ಡೆಮ್​ನಿಟಿ ಅಥವಾ ಸಮಗ್ರ ಸುರಕ್ಷೆ ಪಾಲಿಸಿ​ಗಳನ್ನು ಮಾತ್ರ ಪೋರ್ಟ್ ಮಾಡಲು ಸಾಧ್ಯ

ಒಂದು ವೇಳೆ ನಿಮ್ಮ ಆರೋಗ್ಯ ವಿಮೆ ಪಾಲಿಸಿಯನ್ನು ಒಂದು ಕಂಪನಿಯಿಂದ ಮತ್ತೊಂದಕ್ಕೆ ಪೋರ್ಟ್ ಮಾಡಲು ಇಚ್ಛಿಸಿದರೆ, ನಿಮ್ಮ ಪಾಲಿಸಿಗೆ ಇನ್​ಡೆಮ್​ನಿಟಿ ಅಥವಾ ಸಮಗ್ರ ಸುರಕ್ಷೆ ಕವರೇಜ್ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಇನ್​ಡೆಮ್​ನಿಟಿ ಕವರೇಜ್ ಇರುವ ಪಾಲಿಸಿಗಳಲ್ಲಿ ಆಯ್ಕೆಗಳು ಹೆಚ್ಚಾಗಿರುತ್ತವೆ. ತಮ್ಮಿಷ್ಟದ ಆಸ್ಪತ್ರೆ ಅಥವಾ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಈ ಪಾಲಿಸಿಗಳು ಅವಕಾಶ ಕೊಡುತ್ತವೆ. ರಿನ್ಯೂವಲ್ ಸಮಯದಲ್ಲಿ ಇಂಥ ಪಾಲಿಸಿಗಳನ್ನು ಮಾತ್ರವೇ ಅವುಗಳ ಇತರೆಲ್ಲಾ ಬೆನಿಫಿಟ್​ಗಳೊಂದಿಗೆ ಪೋರ್ಟ್​ ಮಾಡಲು ಸಾಧ್ಯವಿದೆ ಎಂದು ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್​​ನ ಡೈರೆಕ್ಟ್ ಸೇಲ್ಸ್ ವಿಭಾಗದ ಮುಖ್ಯಸ್ಥ ವಿವೇಕ್ ಚತುರ್ವೇದಿ ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ಉಲ್ಲೇಖಿಸಿದೆ.

ಇದನ್ನೂ ಓದಿ
ನಿಮ್ಮ ಪಿಎಫ್​ ಖಾತೆಗೂ ಬಂತೇ ಇಪಿಎಫ್​ ಬಡ್ಡಿ ಹಣ, ಪರಿಶೀಲಿಸುವುದು ಹೇಗೆ? ಇಲ್ಲಿದೆ ನೋಡಿ
Stock Market: ಷೇರುಪೇಟೆ ವಹಿವಾಟಿಗೆ ಇಂದು ಬಿಡುವು; ಕಾರಣವೇನು?
Petrol Price on November 8: ಬಳ್ಳಾರಿಯಲ್ಲಿ ಪೆಟ್ರೋಲ್ ಬೆಲೆ 1 ರೂ. ಕುಸಿತ; ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ ಡೀಸೆಲ್ ದರ ಹೀಗಿದೆ
2 ಲಕ್ಷ ರೂ. ಕವರೇಜ್​; ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

ಇದನ್ನೂ ಓದಿ: Mental Health Insurance: ಮಾನಸಿಕ ಆರೋಗ್ಯ ವಿಮೆ ಮಾಡಿಸುತ್ತೀರಾ? ಈ ವಿಷಯಗಳು ನಿಮಗೆ ತಿಳಿದಿರಲಿ

ನಾಲ್ಕು ವರ್ಷಗಳ ನಂತರ ನೀವು ಪಾಲಿಸಿಯನ್ನು ಪೋರ್ಟ್ ಮಾಡುತ್ತೀರಿ ಎಂದಿಟ್ಟುಕೊಳ್ಳಿ; ಆಗ ಹೊಸ ಪಾಲಿಸಿಯಲ್ಲಿ ಕಾಯುವಿಕೆ ಅವಧಿ ಇದ್ದರೆ ಅದು ನಿಮಗೆ ಅನ್ವಯವಾಗುವುದಿಲ್ಲ. ಯಾಕೆಂದರೆ ನೀವು ಈಗಾಗಲೇ ಈಗಿನ ಪಾಲಿಸಿಯಲ್ಲಿ ಕಾಯುವಿಕೆ ಅವಧಿ ಮುಕ್ತಾಯಗೊಳಿಸಿರುತ್ತೀರಿ.

ಪ್ರಯೋಜನಗಳನ್ನೂ ವರ್ಗಾಯಿಸಬಹುದು, ಆದರೆ…

ಅಸ್ತಿತ್ವದಲ್ಲಿರುವ ಆರೋಗ್ಯ ವಿಮಾ ಯೋಜನೆಯಲ್ಲಿ ಆಯ್ಕೆ ಮಾಡಿದ ವಿಮಾ ಮೊತ್ತದವರೆಗೆ ಮಾತ್ರ ಪ್ರಯೋಜನಗಳನ್ನು ವರ್ಗಾಯಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಅಂದರೆ, ನೀವು ಈಗಾಗಲೇ ಹೊಂದಿರುವ ಪಾಲಿಸಿ 5 ಲಕ್ಷ ರೂ. ಮೊತ್ತದ್ದಾಗಿದೆ ಎಂದಿಟ್ಟುಕೊಳ್ಳೋಣ. ಪೋರ್ಟ್ ಮಾಡುವಾಗ ನೀವು 10 ಲಕ್ಷ ರೂ. ಮೊತ್ತದ ಪಾಲಿಸಿ ಆಯ್ಕೆ ಮಾಡಿಕೊಂಡರೆ ವರ್ಗಾವಣೆ ಪ್ರಯೋಜನಗಳು ನಿಮಗೆ 5 ಲಕ್ಷ ರೂ. ಮೊತ್ತದ ಪಾಲಿಸಿಯದ್ದಷ್ಟೇ ಸಿಗಬಹುದು ಎಂದಿದ್ದಾರೆ ವಿವೇಕ್ ಚತುರ್ವೇದಿ.

ಆರೋಗ್ಯ ವಿಮೆ ಪೋರ್ಟ್ ಮಾಡಲು ಯಾವಾಗ, ಹೇಗೆ ಅರ್ಜಿ ಸಲ್ಲಿಸಬೇಕು?

ನೀವು ಈಗ ಹೊಂದಿರುವ ವಿಮೆಯ ವಾಯಿದೆ ಮುಕ್ತಾಯವಾಗುವುದಕ್ಕೂ 45 ದಿನಗಳ ಮೊದಲೇ ಪೋರ್ಟ್​ಗೆ ಅರ್ಜಿ ಸಲ್ಲಿಸಬೇಕು. ಪೋರ್ಟೆಬಿಲಿಟಿ ಅರ್ಜಿಯನ್ನು 15 ದಿನಗಳ ಒಳಗಾಗಿ ತುಂಬಬೇಕು ಮತ್ತು ಸಲ್ಲಿಸಬೇಕು. ನಿಮ್ಮ ಮನವಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಆಯ್ಕೆ ವಿಮಾದಾರನಿಗಿರುತ್ತದೆ. ಒಂದು ವೇಳೆ ಅರ್ಜಿ ತಿರಸ್ಕೃತಗೊಂಡರೆ ಹಳೆಯ ಪಾಲಿಸಿಯನ್ನೇ ರಿನೀವಲ್ ಮಾಡಲು ನಿಮಗೆ ಅವಕಾಶ ಸಿಗುತ್ತದೆ.

ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡರೆ ಸಾಕು, ಆರೋಗ್ಯ ವಿಮೆ ಪಾಲಿಸಿ ಪೋರ್ಟ್ ಮಾಡುವುದು ಬಹಳ ಸುಲಭ ಎನ್ನುತ್ತಾರೆ ತಜ್ಞರು.

ವಿಮೆ ಪೋರ್ಟ್​ನಿಂದ ಪ್ರಯೋಜನವೇನು?

  • ಉತ್ತಮ ಸೇವೆ ಮತ್ತು ಸೌಲಭ್ಯ ಇರುವ ಪಾಲಿಸಿ ಆಯ್ಕೆ ಮಾಡುವ ಅವಕಾಶ ಪಾಲಿಸಿದಾರರಿಗೆ ಇರುತ್ತದೆ.
  • ನೋ-ಕ್ಲೇಮ್ ಬೋನಸ್ (ವಿಮೆ ಕ್ಲೇಮ್ ಮಾಡದೇ ಇದ್ದಾಗ ಸಿಗುವ ಸವಲತ್ತು) ಹಾಗೂ ವಿಮೆ ಮೊತ್ತವನ್ನು ಸಂಯೋಜಿಸುವ ಮತ್ತು ಹೆಚ್ಚು ಮೊತ್ತದ ವಿಮೆ ಪಡೆಯುವ ಅವಕಾಶ ಪಾಲಿಸಿದಾರರದ್ದಾಗಲಿದೆ.
  • ಸ್ಪರ್ಧಾತ್ಮಕ ಪ್ರೀಮಿಯಂ ದರದಲ್ಲಿ ಉತ್ತಮ ಪಾಲಿಸಿ ಪಡೆಯಬಹುದು.

ವಿಮೆ ಪೋರ್ಟ್​ನ ಅನಾನುಕೂಲಗಳು

  • ಅಸ್ತಿತ್ವದಲ್ಲಿರುವ ವಿಮೆಯನ್ನು ರಿನೀವಲ್ ಮಾಡುವ ಸಂದರ್ಭದಲ್ಲಿ ಮಾತ್ರ ಪೋರ್ಟ್ ಮಾಡಲು ಅರ್ಜಿ ಸಲ್ಲಿಸಬಹುದು.
  • ಪ್ರೀಮಿಯಂ ಹೆಚ್ಚಳಕ್ಕೆ ಕಾರಣವಾಗಬಹುದು.

ಗ್ರೂಪ್ ಪ್ಲ್ಯಾನ್​ಗಳಿಂದ ವೈಯಕ್ತಿಕ ಪ್ಲ್ಯಾನ್​ಗಳಿಗೆ ಬದಲಾಯಿಸಿಕೊಳ್ಳುವುದಾದರೆ ಕೆಲವೊಂದು ಪ್ರಯೋಜನಗಳನ್ನು ತ್ಯಜಿಸಬೇಕಾಗಬಹುದು.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ