Health Insurance: ಆರೋಗ್ಯ ವಿಮೆ ಮಾಡಿಸುತ್ತಿದ್ದೀರಾ? ಅಸ್ತಿತ್ವದಲ್ಲಿರುವ ಕಾಯಿಲೆಗಳ ವಿವರ ನೀಡಲು ಮರೆಯಬೇಡಿ
ಆರೋಗ್ಯ ವಿಮೆ ಮಾಡಿಸುವಾಗ ಅಸ್ತಿತ್ವದಲ್ಲಿರುವ ಕಾಯಿಲೆಗಳ ಬಗ್ಗೆಯಂತೂ ಮಾಹಿತಿ ನೀಡಲೇಬೇಕು. ಇಲ್ಲವಾದಲ್ಲಿ ವಿಮೆ ನಿರಾಕರಣೆ ಸಾಧ್ಯತೆಯೂ ಇದೆ.
ಪ್ರಸಕ್ತ ಕಾಲಘಟ್ಟದಲ್ಲಿ ಆರೋಗ್ಯ ವಿಮೆ (Health Insurance) ಮಾಡಿಸಿಕೊಳ್ಳಬೇಕಾದದ್ದು ಪ್ರಮುಖ ಆವಶ್ಯಕತೆಗಳಲ್ಲಿ ಒಂದಾಗಿದೆ. ಕೋವಿಡ್-19 (COVID-19) ಸಾಂಕ್ರಾಮಿಕದ ಬಳಿಕವಂತೂ ವೈದ್ಯಕೀಯ ವೆಚ್ಚ ಜನರನ್ನು ಹೈರಾಣಾಗಿಸಿದೆ. ವೈದ್ಯಕೀಯ ವೆಚ್ಚಗಳು (Medical Expenses) ಅತಿಯಾಗಿರುವ ಈ ಸಂದರ್ಭದಲ್ಲಿ ಆರೋಗ್ಯ ವಿಮೆ ನಮ್ಮ ಸಹಾಯಕ್ಕೆ ಬರಬಹುದು. ಆರೋಗ್ಯ ವಿಮೆ ಮಾಡಿಸಿಕೊಳ್ಳುವಾಗ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ವಿಮೆ ಮಾಡಿಸುವ ಸಂದರ್ಭದಲ್ಲಿ ನೀಡಬೇಕಾದ ಎಲ್ಲ ವಿವರಗಳನ್ನು ನೀಡದೇ ಹೋದರೆ, ಅಥವಾ ತಪ್ಪಾದ ವಿವರಗಳನ್ನು ನೀಡಿದರೆ ತೊಂದರೆ ಎದುರಿಸಬೇಕಾಗಬಹದು. ಪರಿಣಾಮವಾಗಿ, ವಿಮೆ ಮಾಡಿಸಿಕೊಂಡರೂ ಸಹ ನಾವು ಅದರ ಪ್ರಯೋಜನಗಳನ್ನು ಸರಿಯಾಗಿ ಪಡೆಯುವುದು ಸಾಧ್ಯವಾಗದೇ ಹೋಗಬಹುದು.
ವಿಮೆ ಮಾಡಿಸುವಾಗ ಯೋಗ್ಯವಾದ ಕವರೇಜ್ ಇರುವಂತೆ ನೋಡಿಕೊಳ್ಳುವುದು ಉತ್ತಮ. ನಮ್ಮ ಆದಾಯದ ಕನಿಷ್ಠ ಶೇಕಡಾ 50ರಷ್ಟಾದರೂ ಕವರೇಜ್ ಇರುವ ವಿಮೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದಿದ್ದಾರೆ ತಜ್ಞರು. ಹಾಗೆಯೇ ಎಲ್ಲ ವೈಯಕ್ತಿಕ ವಿವರಗಳನ್ನೂ ವಿಮಾ ಪೂರೈಕದಾರರಿಗೆ ನೀಡಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳ (pre-existing conditions or diseases) ಬಗ್ಗೆ ಮಾಹಿತಿ ನೀಡಲೇಬೇಕು.
ಇದನ್ನೂ ಓದಿ: ಆರೋಗ್ಯ ವಿಮೆ ಪಾಲಿಸಿ ಅಡಿ ತೆರಿಗೆ ವಿನಾಯಿತಿ, ಎಷ್ಟು ಮೊತ್ತದ ತೆರಿಗೆ ವಿನಾಯಿತಿ ಪಡೆಯಬಹುದು? ಇಲ್ಲಿದೆ ಫುಲ್ ಡೀಟೇಲ್ಸ್
ಸಾಮಾನ್ಯವಾಗಿ ಪಾಲಿಸಿ ತಿರಸ್ಕೃತಗೊಳ್ಳಬಹುದು ಅಥವಾ ಹೆಚ್ಚು ಮೊತ್ತದ ಪ್ರೀಮಿಯಂ ಪಾವತಿಸಬೇಕಾಗಬಹುದು ಎಂಬ ಆತಂಕದಿಂದ ಜನರು ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಾರೆ.
ಆರೋಗ್ಯ ವಿಮೆ ಮಾಡಿಸುವಾಗ ಎಲ್ಲ ವಿವರಗಳನ್ನು ನೀಡುವುದು ಅತೀ ಅಗತ್ಯ. ಅಸ್ತಿತ್ವದಲ್ಲಿರುವ ಕಾಯಿಲೆಗಳ ಬಗ್ಗೆಯಂತೂ ಮಾಹಿತಿ ನೀಡಲೇಬೇಕು. ಇಲ್ಲವಾದಲ್ಲಿ ವಿಮೆ ನಿರಾಕರಣೆ ಸಾಧ್ಯತೆಯೂ ಇದೆ ಎಂದು ‘ಅಶ್ಯೂರ್ಕಿಟ್’ ಸ್ಟ್ರಾಟಜಿ ಹಾಗೂ ಚೀಫ್ ಇನ್ನೋವೇಷನ್ ಆಫೀಸರ್ ಆಗಿರುವ ಸುನಿಲ್ ಪಡಸಲ ತಿಳಿಸಿರುವುದಾಗಿ ‘ಝೀ ಬ್ಯುಸಿನೆಸ್’ ತಾಣ ಉಲ್ಲೇಖಿಸಿದೆ.
ಅಸ್ತಿತ್ವದಲ್ಲಿರುವ ಕಾಯಿಲೆಗಳ ಮಾಹಿತಿ ಮುಚ್ಚಿಡುವುದರಿಂದ ಕಡಿಮೆ ಪ್ರೀಮಿಯಂನ ವಿಮೆ ಮಾಡಿಸಿಕೊಳ್ಳಬಹುದು. ಆದರೆ, ಕ್ಲೇಮ್ ಮಾಡಬೇಕಾದ ಸಂದರ್ಭದ ಬಂದರೆ ಬಹಳ ಕಷ್ಟವಾಗಬಹುದು. ಕೆಲವೊಂದು ಸಂದರ್ಭದಲ್ಲಿ ವಿಮೆ ಸಿಗದೇ ಹೋಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆ (pre-existing diseases) ಎಂದರೆ…
ವಿಮೆ ಮಾಡಿಸುವ ದಿನಾಂಕದ ಮೊದಲು ನಮ್ಮಲ್ಲಿ ಯಾವುದೇ ಕಾಯಿಲೆ ಪತ್ತೆಯಾಗಿದ್ದರೆ ಅದನ್ನು ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಆರೋಗ್ಯ ವಿಮೆ ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ನಾವು ಹೊಂದಿರುವ ಯಾವುದೇ ಕಾಯಿಲೆ, ಅನಾರೋಗ್ಯ ಅಥವಾ ಆರೋಗ್ಯ ಸ್ಥಿತಿಯನ್ನು ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ.
ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗೆ ವಿಮೆ ದೊರೆಯುತ್ತದೆಯೇ?
ಮೊದಲೇ ಅಸ್ತಿತ್ವದಲ್ಲಿರುವ ಎಲ್ಲ ಕಾಯಿಲೆಗಳೂ ವಿಮೆ ವ್ಯಾಪ್ತಿಯಲ್ಲಿ ಬರುತ್ತವೆ. ಆದರೆ, ಕಾಯುವಿಕೆ ಅವಧಿ (waiting period) ಕೊನೆಗೊಂಡ ಬಳಿಕವಷ್ಟೇ ವಿಮೆ ಪಡೆಯಲು ಅರ್ಹರಾಗಿರುತ್ತೇವೆ. ಈ ಅವಧಿ ಒಂದರಿಂದ ನಾಲ್ಕು ವರ್ಷಗಳವರೆಗೂ ಇರಬಹುದಾಗಿದೆ. ಇದನ್ನು ಕಾಯಿಲೆಗಳ ಆಧಾರದಲ್ಲಿ ನಿರ್ಧರಿಸುತ್ತಾರೆ.
ಅಸ್ತಿತ್ವದಲ್ಲಿರುವ ಕಾಯಿಲೆಗೆ ತಕ್ಷಣದಿಂದಲೇ ವಿಮೆ ಪಡೆಯಲು ಅವಕಾಶ ಇದೆಯೇ?
ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ ವಿಮೆ ಮಾಡಿಸಿಕೊಂಡ ತಕ್ಷಣದಿಂದಲೇ ವಿಮೆ ಪಡೆಯಲು ಕೆಲವೊಂದು ಕಂಪನಿಗಳು ಅವಕಾಶ ಮಾಡಿಕೊಡುತ್ತವೆ. ಕಾಯುವಿಕೆ ಅವಧಿ ಇಲ್ಲದೇ ವಿಮೆ ನೀಡುತ್ತವೆ. ಆದರೆ, ಇದಕ್ಕೆ ದುಬಾರಿ ಹಾಗೂ ಹೆಚ್ಚುವರಿ ಪ್ರೀಮಿಯಂ ತೆರಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ