Tax Matter: ವಿಚ್ಛೇದನವಾದರೆ ಪರಿಹಾರ ಹಣ ಹೇಗೆ ನಿರ್ಧರಿಸಲಾಗುತ್ತದೆ? ಹಣಕ್ಕೆ ತೆರಿಗೆ ಎಷ್ಟು ಅನ್ವಯ ಆಗುತ್ತದೆ?

|

Updated on: Dec 21, 2023 | 6:14 PM

Divorce Settlement and Tax: ಡಿವೋರ್ಸ್ ಬಳಿಕ ಸಿಗುವ ಪರಿಹಾರಕ್ಕೆ ತೆರಿಗೆ ಅನ್ವಯ ಆಗುತ್ತದೆ. ಒಟ್ಟಿಗೆ ಸಿಗುವ ಪರಿಹಾರಕ್ಕೆ ತೆರಿಗೆ ಇರುವುದಿಲ್ಲ. ಜೀವನಾಂಶವಾಗಿ ಬರುವ ಹಣ ಟ್ಯಾಕ್ಸಬಲ್ ಇರುತ್ತದೆ. ಒಟ್ಟಿಗೆ ಕೊಡಲಾಗುವ ಪರಿಹಾರ ಹಣವನ್ನು ಕ್ಯಾಪಿಟಲ್ ರಿಸಿಪ್ಟ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅದಕ್ಕೆ ತೆರಿಗೆ ಅನ್ವಯ ಆಗುವುದಿಲ್ಲ. ಡಿವೋರ್ಸ್ ಬಳಿಕ ಜೀವನಾಂಶ ಪಡೆಯುತ್ತಿರುವ ಮಹಿಳೆ ಮರು ಮದುವೆ ಆದ ಬಳಿಕ ಆ ಜೀವನಾಂಶದ ಆದಾಯವನ್ನು ಕಳೆದುಕೊಳ್ಳಬಹುದು.

Tax Matter: ವಿಚ್ಛೇದನವಾದರೆ ಪರಿಹಾರ ಹಣ ಹೇಗೆ ನಿರ್ಧರಿಸಲಾಗುತ್ತದೆ? ಹಣಕ್ಕೆ ತೆರಿಗೆ ಎಷ್ಟು ಅನ್ವಯ ಆಗುತ್ತದೆ?
ವಿವಾಹ
Follow us on

ವಿವಾಹ ಎನ್ನುವುದು ಯಾರದೇ ಜೀವನದಲ್ಲಿ ನಡೆಯುವ ಅತಿಮುಖ್ಯ ಘಟನೆ. ನೀವು ಕೊನೆ ಉಸಿರಿನವರೆಗೂ ಜೊತೆಯಲ್ಲಿ ಇರುತ್ತೇನೆಂದು ಸಂಕಲ್ಪಿಸಿ ಸಂಗಾತಿಯೊಂದಿಗೆ ಸಂಸಾರದ ನೊಗ ಹೊರುವ ಸಂದರ್ಭ ಅದು. ಕಾರಣಾಂತರಗಳಿಂದ ಕೆಲವು ಮದುವೆಗಳು ಹೆಚ್ಚು ದೂರ ಸಾಗುವುದಿಲ್ಲ. ವಿಚ್ಛೇದನದಲ್ಲಿ (divorce) ಅಂತ್ಯಗೊಳ್ಳುತ್ತವೆ. ಮದುವೆ ಎಷ್ಟು ಸುಮಧುರವೋ, ವಿಚ್ಛೇದನ ಅಷ್ಟೇ ಕಷ್ಟಕರ ಎನಿಸಬಹುದು. ಅದೇನೇ ಇರಲಿ, ವಿಚ್ಛೇದನವಾದಾಗ ನ್ಯಾಯಾಲಯವು ಡಿವೋರ್ಸ್ ಸೆಟಲ್ಮೆಂಟ್ (divorce settlement) ಆದೇಶಿಸಬಹುದು. ಇಬ್ಬರಲ್ಲಿ ದುರ್ಬಲರು ಎನಿಸಿದವರಿಗೆ ಪರಿಹಾರ ಕೊಡಿಸಬಹುದು. ಇಲ್ಲಿ ಡಿವೋರ್ಸ್ ಪಡೆದ ಮಹಿಳೆಗೆ ಮಾತ್ರವೇ ಜೀವನಾಂಶ ಸಿಗುತ್ತದೆ, ಗಂಡಿಗೆ ಸಿಗುವುದಿಲ್ಲ ಎಂದಿಲ್ಲ. ಕೆಲ ಡಿವೋರ್ಸ್ ಪ್ರಕರಣಗಳಲ್ಲಿ ಗಂಡಿಗೆ ಪರಿಹಾರ ಸಿಕ್ಕಿರುವುದು ಇದೆ.

ಡಿವೋರ್ಸ್ ಪರಿಹಾರ ಹೇಗೆ?

ಡಿವೋರ್ಸ್ ಪರಿಹಾರಕ್ಕೆ ತೆರಿಗೆ ಅನ್ವಯ ಆಗುತ್ತದೆ. ಅದಕ್ಕೆ ಮುನ್ನ, ಪರಸ್ಪರ ಒಪ್ಪಿತ ಡಿವೋರ್ಸ್ ಸೆಟಲ್ಮೆಂಟ್​ನಲ್ಲಿ ಎರಡು ವಿಧ ಇರುತ್ತದೆ. ಮೊದಲನೆಯದು, ಒಟ್ಟಿಗೆ ಪರಿಹಾರ ಮೊತ್ತ ಕೊಡುವುದು. ಎರಡನೆಯದು, ನಿಯಮಿತವಾಗಿ ಪರಿಹಾರ ಹಣ ಕೊಡುವುದು. ಕೆಲವೊಮ್ಮೆ ಕೋರ್ಟ್ ಈ ಎರಡನ್ನೂ ಕೊಡುವಂತೆ ಆದೇಶಿಸಬಹುದು. ಅಂದರೆ ಒಟ್ಟಿಗೆ ನಿರ್ದಿಷ್ಟ ಪ್ರಮಾಣದ ಹಣವನ್ನು ನೀಡುವುದರ ಜೊತೆಗೆ ತಿಂಗಳಿಗೆ ಇಂತಿಷ್ಟು ಜೀವನಾಂಶ ಕೊಡಬೇಕೆಂದು ಆದೇಶಿಸಬಹುದು.

ಇದನ್ನೂ ಓದಿ: ಆಧಾರ್ ಅಪ್​ಡೇಟ್​ನಿಂದ ಹಿಡಿದು ನಿಷ್ಕ್ರಿಯ ಯುಪಿಐ ಐಡಿವರೆಗೂ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಇರುವ ಕಾರ್ಯಗಳಿವು

ಡಿವೋರ್ಸ್ ಪರಿಹಾರ ಹಣಕ್ಕೆ ತೆರಿಗೆ ಇದೆಯಾ?

ಡಿವೋರ್ಸ್​ನಿಂದ ಒಟ್ಟಿಗೆ ಪರಿಹಾರ ಹಣ ಬಂದಲ್ಲಿ ಅದನ್ನು ಕ್ಯಾಪಿಟಲ್ ರಿಸಿಪ್ಟ್ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಯಾವ ತೆರಿಗೆ ಅನ್ವಯ ಆಗುವುದಿಲ್ಲ. ಆದರೆ, ತಿಂಗಳು ತಿಂಗಳು ಅಥವಾ ನಿಯಮಿತವಾಗಿ ಬರುವ ಜೀವನಾಂಶ ಹಣವನ್ನು ಆದಾಯವಾಗಿ ಪರಿಗಣಿಸಲಾಗುತ್ತದೆ. ಆ ಹಣ ಸ್ವೀಕರಿಸಿದವರ ಆದಾಯದ ಪಟ್ಟಿಗೆ ಅದು ಸೇರುತ್ತದೆ. ಅವರ ಒಟ್ಟು ಆದಾಯವು ಯಾವ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್​ಗೆ ಸೇರುತ್ತದೆ, ಅಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಇನ್ಕಮ್ ಟ್ಯಾಕ್ಸ್ ಗುಂಪಿಗೆ ಸೇರಿದೇ ಹೋದರೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.

ಇನ್ನು, ಜೀವನಾಂಶದ ಹಣ ನೀಡುವ ವ್ಯಕ್ತಿಯು ಆ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಲು ಆಗುವುದಿಲ್ಲ. ಸದ್ಯ ಅಂಥ ಕಾನೂನು ರೂಪಿಸಲಾಗಿಲ್ಲ.

ಗಂಡಿಗೆ ಡಿವೋರ್ಸ್ ಪರಿಹಾರ ಸಿಕ್ಕೋದಿಲ್ಲವಾ?

ಗಂಡ ಹೆಂಡತಿ ವಿಚ್ಛೇದನ ಆಗುವಾಗ ನ್ಯಾಯಾಲಯವು ಅವರಿಬ್ಬರ ಆರ್ಥಿಕ ಪರಿಸ್ಥಿತಿ, ಆರೋಗ್ಯ ಇತ್ಯಾದಿ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಗಂಡ ಮತ್ತು ಹೆಂಡತಿ ಇಬ್ಬರೂ ಸಮವಾಗಿ ಸ್ಥಿತಿವಂತರಾಗಿದ್ದರೆ ಯಾರಿಗೂ ಪರಿಹಾರ ಸಿಗದೇ ಹೋಗಬಹುದು. ಗಂಡ ಅಂಗ ವಿಕಲರಾಗಿದ್ದು ಹೆಂಡತಿ ಉತ್ತಮವಾಗಿ ದುಡಿಯುತ್ತಿದ್ದರೆ ಆಗ ಗಂಡಿಗೆ ಪರಿಹಾರ ಕೊಡಿಸಬಹುದು.

ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್​​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?

ಗಂಡಿನ ಆಸ್ತಿ ಎಷ್ಟಿದೆ, ಆತನ ಆದಾಯ ಎಷ್ಟು, ವರ್ಷದ ಸಂಪಾದನೆ ಎಷ್ಟು, ಮುಂದೆ ಎಷ್ಟು ವರ್ಷ ಆತ ದುಡಿಯಬಲ್ಲ ಎಂಬುದನ್ನು ಕೋರ್ಟ್ ತಿಳಿಯುತ್ತದೆ. ಹೆಣ್ಣಿನ ವಿಚಾರದಲ್ಲೂ ಈ ಅಂಶಗಳನ್ನು ಗಮನಿಸಿ, ಇಬ್ಬರದ್ದನ್ನೂ ತುಲನೆ ಮಾಡಿ ಅಂತಿಮವಾಗಿ ಯಾರಿಗೆ ಎಷ್ಟು ಪರಿಹಾರ ಸಿಗಬೇಕೆಂದು ನಿರ್ಧರಿಸಲಾಗುತ್ತದೆ.

ಹೆಂಡತಿ ಮರುಮದುವೆಯಾದರೆ ಹೇಗೆ?

ವಿಚ್ಛೇದಿತ ಗಂಡನಿಂದ ಜೀವನಾಂಶ ಪಡೆಯುತ್ತಿರುವ ಒಂದು ಹೆಣ್ಣು ಮುಂದೊಂದು ದಿನ ಮರು ಮದುವೆ ಆದರೆ, ಆಗ ಹಿಂದಿನ ಗಂಡನಿಂದ ಜೀವನಾಂಶ ಸಿಗುವುದಿಲ್ಲ. ಹೀಗಾಗಿ, ಬಹಳಷ್ಟು ಡಿವೋರ್ಸ್ ಪ್ರಕರಣಗಳಲ್ಲಿ ನ್ಯಾಯಾಲಯವು ಏಕಕಾಲದ ಪರಿಹಾರ ನಿರ್ಧರಿಸುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ