ನೀವು ಕೆಲಸ ಮಾಡೋದು ನಿಲ್ಲಿಸಿ ಆರಾಮವಾಗಿ ಬದುಕಬೇಕಾದರೆ ಎಷ್ಟು ಸೇವಿಂಗ್ಸ್ ಹೊಂದಿರಬೇಕು? ತಪ್ಪದೇ ನೋಡಿ ಲೆಕ್ಕಾಚಾರ

|

Updated on: Sep 16, 2024 | 5:38 PM

Money needed for retirement life: ಹೆಚ್ಚಿನ ಜನರು ವೃದ್ಧಾಪ್ಯ ಜೀವನದ ಬಗ್ಗೆ ಆಲೋಚಿಸುವುದಿಲ್ಲ. ಮಕ್ಕಳ ಮೇಲೆ ಅವಲಂಬಿತರಾಗದೇ ಸ್ವತಂತ್ರರಾಗಿ ಬದುಕಬಯಸುವ ವ್ಯಕ್ತಿಗಳು ನಿವೃತ್ತಿ ಜೀವನಕ್ಕೆ ಸಾಕಷ್ಟು ಸೇವಿಂಗ್ಸ್ ಹೊಂದಿರುವುದು ಅಗತ್ಯ. ಎಷ್ಟು ಹಣ ಬೇಕಾಗುತ್ತದೆ ಎಂಬ ಲೆಕ್ಕಾಚಾರ ಇಲ್ಲಿದೆ.

ನೀವು ಕೆಲಸ ಮಾಡೋದು ನಿಲ್ಲಿಸಿ ಆರಾಮವಾಗಿ ಬದುಕಬೇಕಾದರೆ ಎಷ್ಟು ಸೇವಿಂಗ್ಸ್ ಹೊಂದಿರಬೇಕು? ತಪ್ಪದೇ ನೋಡಿ ಲೆಕ್ಕಾಚಾರ
ಹಣ
Follow us on

ಯಾರೇ ಆದರೂ ಯಾವತ್ತಾದರೂ ಒಂದು ದಿನ ನಿವೃತ್ತಿ ಪಡೆದುಕೊಳ್ಳುವುದು ಅನಿವಾರ್ಯ. ಉದ್ಯೋಗಿಗಳ ಪೈಕಿ ಬಹುತೇಕರು 60 ವರ್ಷಕ್ಕೆ ನಿವೃತ್ತರಾಗುತ್ತಾರೆ. ಸರ್ಕಾರಿ ನೌಕರಿಯಾದರೆ ಪಿಂಚಣಿ ಸಿಗುತ್ತದೆ. ಖಾಸಗಿ ನೌಕರರಾದರೆ ಇಪಿಎಫ್ ಇರುತ್ತದೆ. ಸ್ವಯಂ ಆಗಿ ಎನ್​ಪಿಎಸ್ ಸ್ಕೀಮ್ ಮಾಡಿದ್ದರೆ ರಿಟೈರ್ಮೆಂಟ್ ಕಾರ್ಪಸ್ ಒಂದಷ್ಟು ಇರುತ್ತದೆ. ಇಲ್ಲದಿದ್ದರೆ? ನಿವೃತ್ತಿಗೆ ನೀವು ಮೊದಲೇ ಪ್ಲಾನ್ ಮಾಡುವುದು ಬಹಳ ಅಗತ್ಯ. ನಿವೃತ್ತಿ ನಂತರದ ಜೀವನಕ್ಕೆ ಎಷ್ಟು ಫಂಡ್ ಬೇಕಾಗುತ್ತದೆ ಎನ್ನುವ ಪ್ರಶ್ನೆ ಕಾಡಬಹುದು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಆಯಸ್ಸು 80 ವರ್ಷ ಸರಾಸರಿ ಎಂದು ಪರಿಗಣಿಸಲಾಗುತ್ತದೆ. ನೀವು 80 ವರ್ಷ ವಯಸ್ಸಿನವರೆಗೆ ಬದುಕಬಹುದು ಎಂದು ಅಂದಾಜಿಸಿಕೊಂಡು ಅದಕ್ಕೆ ತಕ್ಕಂತೆ ರಿಟೈರ್ಮೆಂಟ್ ಫಂಡ್ ಯೋಜಿಸಬಹುದು. ಹಣದುಬ್ಬರವನ್ನೂ ಪರಿಗಣಿಸಿ ಹತ್ತು ಹೆಚ್ಚುವರಿ ವರ್ಷಗಳೆಂದು ಪರಿಗಣಿಸಲಾಗುತ್ತದೆ.

ನೀವು 50 ವರ್ಷಕ್ಕೆ ಕೆಲಸ ನಿಲ್ಲಿಸಿದರೆ 40 ವರ್ಷಕ್ಕೆ ಆಗುವಷ್ಟು ಫಂಡ್ ಇರಬೇಕು ಎನ್ನುತ್ತಾರೆ ತಜ್ಞರು. ಅಂದರೆ ನಿಮ್ಮ ಈಗಿನ ವಾರ್ಷಿಕ ವೆಚ್ಚ ಎಷ್ಟಿದೆ ಆ ಮೊತ್ತದ 40 ಪಟ್ಟು ಹೆಚ್ಚು ಹಣವನ್ನು ನೀವು ರಿಟೈರ್ಮೆಂಟ್ ಫಂಡ್​ಗೆ ಇರಿಸಬೇಕು. 60 ವರ್ಷಕ್ಕೆ ನಿವೃತ್ತಿಯಾದರೆ 30 ಪಟ್ಟು ಹೆಚ್ಚು ಸೇವಿಂಗ್ಸ್ ಇರಬೇಕು. ನಿಮ್ಮ ವಾರ್ಷಿಕ ವೆಚ್ಚವನ್ನು ಲೆಕ್ಕ ಹಾಕುವಾಗ ರಿಟೈರ್ಮೆಂಟ್​ವರೆಗಿನ ಹಣದುಬ್ಬರ ಲೆಕ್ಕವೂ ಸೇರಿರಲಿ. ನಿಮ್ಮ ರಿಟೈರ್ಮೆಂಟ್ ವಯಸ್ಸು ಎ ಎಂದಿಟ್ಟುಕೊಳ್ಳಿ. ಆಗ ನಿಮಗೆ ಬೇಕಾದ ಸೇವಿಂಗ್ಸ್ ಹಣವು 90 ಮೈನಸ್ ಎ ಆಗುತ್ತದೆ. 65 ವರ್ಷಕ್ಕೆ ರಿಟೈರ್ ಆದರೆ ನಿಮ್ಮ ವಾರ್ಷಿಕ ವೆಚ್ಚದ 25 ಪಟ್ಟು ಹಣ ಸಾಕಾಗಬಹುದು.

ಇದನ್ನೂ ಓದಿ: ಎಸ್​ಐಪಿ ಮತ್ತು ಎಸ್​ಡಬ್ಲ್ಯುಪಿ ಸಂಯೋಜನೆಯಲ್ಲಿ ನಿಮ್ಮ ಜೀವನಕ್ಕೊಂದು ಭದ್ರತೆ ನೀಡುವುದು ಹೇಗೆ?

ಉದಾಹರಣೆಗೆ, ಪ್ರಸಕ್ತ ವರ್ಷ ನಿಮ್ಮ ಸರಾಸರಿ ವಾರ್ಷಿಕ ವೆಚ್ಚ 10 ಲಕ್ಷ ರೂ ಇದೆ ಎಂದಿಟ್ಟುಕೊಳ್ಳಿ. ಇನ್ನು 10 ವರ್ಷಕ್ಕೆ ನಿಮಗೆ 60 ವರ್ಷ ಆಗಲಿದ್ದು ನೀವು ರಿಟೈರ್ ಆಗುತ್ತಿದ್ದರೆ ಆಗ ಈ 10 ವರ್ಷಕ್ಕೆ ಶೇ. 6ರ ವಾರ್ಷಿಕ ಹಣದುಬ್ಬರ ಸೇರಿಸಿದರೆ ಅದು 16 ಲಕ್ಷ ರೂ ಆಗುತ್ತದೆ. ಅಂದರೆ ಹತ್ತು ವರ್ಷದ ಬಳಿಕ ನಿಮ್ಮ ಒಂದು ವರ್ಷದ ಖರ್ಚು 16 ಲಕ್ಷ ರೂ ಆಗಬಹುದು. ಹತ್ತು ವರ್ಷದಲ್ಲಿ ನಿಮ್ಮ ಒಟ್ಟಾರೆ ಉಳಿತಾಯ ಹಣ 4ರಿಂದ 5 ಕೋಟಿ ರೂ ಇರಬೇಕಾಗುತ್ತದೆ.

ಬೇರೆ ಕೆಲ ತಜ್ಞರ ಪ್ರಕಾರ ನೀವು ನಿವೃತ್ತರಾದಾಗ ಅಂದಿನ ವಾರ್ಷಿಕ ಜೀವನ ವೆಚ್ಚದ ಏಳೆಂಟು ಪಟ್ಟು ಹೆಚ್ಚು ಸೇವಿಂಗ್ಸ್ ಹಣ ಇದ್ದರೆ ಸಾಕು. ವೃದ್ಧಾಪ್ಯದಲ್ಲಿ ಖರ್ಚು ತೀರಾ ಹೆಚ್ಚಿರುವುದಿಲ್ಲ. ಸರಳ ಜೀವನ ನಡೆಸಬಹುದು ಎನ್ನುವ ನಿರೀಕ್ಷೆಯಲ್ಲಿ ಮಾಡಲಾಗಿರುವ ಲೆಕ್ಕಾಚಾರ. ಹೆಚ್ಚು ಚಿಂತೆ ಇಲ್ಲದೇ ನಿವೃತ್ತಿ ಜೀವನ ನಡೆಸಲು 30 ಪಟ್ಟು ವಾರ್ಷಿಕ ವೆಚ್ಚದ ಸೇವಿಂಗ್ಸ್ ಇರಬೇಕು ಎನ್ನುವುದು ಸದ್ಯಕ್ಕೆ ಇರುವ ಥಂಬ್ ರೂಲ್.

ನಿಮ್ಮ ಭವಿಷ್ಯದ ವೈದ್ಯಕೀಯ ಖರ್ಚಿಗೆ ಅಗತ್ಯ ಇರುವ ಹೆಲ್ತ್ ಇನ್ಷೂರೆನ್ಸ್ ಇತ್ಯಾದಿ ಎಲ್ಲಕ್ಕೂ ವ್ಯವಸ್ಥೆ ಮಾಡಿಕೊಂಡು ರಿಟೈರ್ಮೆಂಟ್​ಗೆಂದೇ ಪ್ರತ್ಯೇಕ ಪ್ಲಾನ್ ಮಾಡಿದ್ದರೆ ಇದು ಸಾಧ್ಯ.

ಇದನ್ನೂ ಓದಿ: ಎಸ್​ಬಿಐನ ಈ ಫಂಡ್ ಭರ್ಜರಿ ಲಾಭ; ತಿಂಗಳಿಗೆ 10,000 ರೂ ಹೂಡಿಕೆ; 3 ವರ್ಷದಲ್ಲಿ 5 ಲಕ್ಷ ರೂ ಸಂಪತ್ತು

ನಿಮ್ಮ ನಿವೃತ್ತಿಗೆ ಬೇಕಾದ ಹಣವನ್ನು ನೀವು ಮೊದಲೇ ಪ್ಲಾನ್ ಮಾಡಿ ಕೂಡಿಟ್ಟುಕೊಳ್ಳುವುದು ಉತ್ತಮ. ರಿಟೈರ್ಮೆಂಟ್​ಗೆಂದು ಪ್ರತ್ಯೇಕ ಫಂಡ್​ಗಳು, ಹೆಲ್ತ್ ಇನ್ಷೂರೆನ್ಸ್ ಇವುಗಳನ್ನು ನೀವು ಮೊದಲೇ ಆರಂಭಿಸಬೇಕು. ಇದರ ಜೊತೆಗೆ ನಿಮ್ಮ ಆರೋಗ್ಯವನ್ನು ಸದಾ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಮನೆ, ಕಾರು ಇತ್ಯಾದಿ ಯಾವುದೇ ಅಗತ್ಯತೆಗಳನ್ನು ನೀವು ರಿಟೈರ್ಮೆಂಟ್​ಗಿಂತ ಮುನ್ನವೇ ತೆಗೆದುಕೊಂಡು ಅದರ ಇಎಂಐ ಯಾವುದೂ ಬಾಕಿ ಇರದಂತೆ ನೋಡಿಕೊಳ್ಳಬೇಕು. ನಿವೃತ್ತಿ ಬಳಿಕ ನಿಮ್ಮ ವೈಯಕ್ತಿಕ ಖರ್ಚು ಮಾತ್ರವೇ ಇರುವಂತೆ ನೋಡಿಕೊಳ್ಳಬೇಕು. ಆಗ ನೆಮ್ಮದಿಯಾಗಿ ವೃದ್ಧಾಪ್ಯ ಕಾಲಘಟ್ಟ ಮುಗಿಸಬಹುದು ಎಂದನ್ನುತ್ತಾರೆ ತಜ್ಞರು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ