ಸಮತೋಲಿತವಾಗಿ ಸಮಾಜ ಮುಂದುವರಿಯಬೇಕಾದರೆ ಎಲ್ಲರೂ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಸುದೃಢವಾಗಿರಬೇಕು. ಬೇರೆ ಬೇರೆ ಕಾರಣಗಳಿಗೆ ಹೆಚ್ಚಿನ ಜನರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದುಹೋಗುತ್ತಾರೆ. ಇಂಥ ಅಸಹಾಯಕ ಜನರನ್ನು ಮೇಲೆತ್ತಲು ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸುತ್ತವೆ. ಇಂಥ ಯೋಜನೆಗಳಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಅಟಲ್ ಪಿಂಚಣಿ ಯೋಜನೆ (APY- Atal Pension Yojana) 2015ರಲ್ಲಿ ಆರಂಭಗೊಂಡಂಥವು. ಇದೀಗ ಈ ಮೂರು ಯೋಜನೆಗಳಿಗೆ 8 ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ ಈ ಯೋಜನೆಗಳು ಎಷ್ಟು ಮಂದಿಯನ್ನು ತಲುಪಿವೆ, ಎಷ್ಟು ಲಾಭಕಾರಿ ಆಗಿವೆ ಎಂಬ ಕುತೂಹಲ ಹಲವರಿಗೆ ಇರಬಹುದು.
ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪೆನ್ಷನ್ ಯೋಜನೆಗಳು ಒಟ್ಟು ಸೇರಿ ಹೊಂದಿರುವ ಗ್ರಾಹಕರ ಸಂಖ್ಯೆ 55.6 ಕೋಟಿ ಅಂತೆ. ಇದರಲ್ಲಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಅತ್ಯಧಿಕ ಎನ್ರೋಲ್ಮೆಂಟ್ ಇದೆಯಂತೆ.
ಇದು 2023ರ ಏಪ್ರಿಲ್ 26ರವರೆಗಿನ ಮಾಹಿತಿ. ಜೀವನಜ್ಯೋತಿ ವಿಮಾ ಯೋಜನೆ ಅಡಿ 6.64 ಲಕ್ಷ ಕುಟುಂಬಗಳಿಗೆ 13,290 ಕೋಟಿ ರೂನಷ್ಟು ಹಣ ವಿತರಿಸಲಾಗಿದೆ. ಇನ್ನು ಸುರಕ್ಷಾ ವಿಮಾ ಯೋಜನೆ ಅಡಿ 1.15 ಲಕ್ಷ ಕುಟುಂಬಗಳಿಗೆ 2,302 ಕೋಟಿ ರೂ ನೀಡಲಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ.
ಇದು ಎಲ್ಐಸಿ ಪಾಲಿಸಿಯಲ್ಲ. ಕೇಂದ್ರ ಸರ್ಕಾರವೇ ಖುದ್ದಾಗಿ ನಿರ್ವಹಿಸುವ ಜೀವ ವಿಮಾ ಯೋಜನೆ. ಬ್ಯಾಂಕ್ ಖಾತೆ ಹೊಂದಿರುವ 18ರಿಂದ 50 ವರ್ಷ ವಯೋಮಾನದ ಜನರು ಈ ಸ್ಕೀಮ್ ಪಡೆಯಬಹುದು. ಅವರು ಖಾತೆ ಹೊಂದಿರುವ ಬ್ಯಾಂಕ್ ಮುಖಾಂತರವೇ ಈ ಯೋಜನೆ ಸಿಗುತ್ತದೆ. ವರ್ಷಕ್ಕೆ 436 ರೂ ಪ್ರೀಮಿಯಮ್ ಕಟ್ಟಿದರೆ 2 ಲಕ್ಷ ರೂವರೆಗೂ ಡೆತ್ ಇನ್ಷೂರೆನ್ಸ್ ಕವರ್ ಆಗುತ್ತದೆ. ಪ್ರತೀ ವರ್ಷವೂ ಇದನ್ನು ನವೀಕರಿಸಬಹುದು. ಯಾವುದೇ ರೀತಿಯ ಸಾವಾದರೂ ವಾರಸುದಾರರು ಹಣ ಕ್ಲೈಮ್ ಮಾಡಬಹುದು. ಅಂಚೆ ಕಚೇರಿಯಲ್ಲೂ ಈ ಪಾಲಿಸಿ ಪಡೆಯಬಹುದು.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಪಘಾತ ವಿಮೆ ಪಾಲಿಸಿಯಾಗಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವ 18ರಿಂದ 70 ವರ್ಷ ವಯೋಮಾನದ ಜನರು ಈ ಸ್ಕೀಮ್ ಪಡೆಯಬಹುದು. ವರ್ಷಕ್ಕೆ ಕೇವಲ 20 ರೂ ಮಾತ್ರ ಪ್ರೀಮಿಯಮ್ ಕಟ್ಟಬೇಕು. ಅಪಘಾತದಿಂದ ಸಾವಾದರೆ ವಾರಸುದಾರರಿಗೆ 2 ಲಕ್ಷ ರೂ ಸಿಗುತ್ತದೆ. ಅಪಘಾತದಿಂದ ಅಂಗ ಊನವಾದರೆ 1 ಲಕ್ಷ ರೂ ಹಣವನ್ನು ಕ್ಲೈಮ್ ಮಾಡಬಹುದು.
ಅಸಂಘಟಿತ ವಲಯದಲ್ಲಿರುವ ಕಾರ್ಮಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಸ್ಕೀಮ್ ಅಟಲ್ ಪೆನ್ಷನ್ ಯೋಜನೆ. ತೆರಿಗೆ ಪಾವತಿದಾರರಲ್ಲದ ಹಾಗೂ 18ರಿಂದ 40 ವರ್ಷ ವಯೋಮಾನದ ಮಂದಿಗೆ ಈ ಯೋಜನೆ ಸಿಗುತ್ತದೆ. ನಮ್ಮ ಖಾತೆ ಇರುವ ಬ್ಯಾಂಕ್ಗಳಲ್ಲಿ ಈ ಸ್ಕೀಮ್ ಪಡೆಯಬಹುದು. ಈ ಯೋಜನೆ ಪ್ರಕಾರ 60 ವರ್ಷ ವಯಸ್ಸಾಗುವವರೆಗೂ ನಿಯಮಿತವಾಗಿ ಖಾತೆಗೆ ಇಂತಿಷ್ಟು ಹಣ ತುಂಬಿಸುತ್ತಾ ಹೋದರೆ 60 ವರ್ಷದ ಬಳಿಕ ತಿಂಗಳಿಗೆ 1ರಿಂದ 6 ಸಾವಿರ ರೂವರೆಗೂ ಪೆನ್ಷನ್ ಬರುತ್ತದೆ.
ಉದಾಹರಣೆಗೆ 18ರ ವಯಸ್ಸಿನಲ್ಲಿ ಪೆನ್ಷನ್ ಯೋಜನೆ ಪಡೆದರೆ 42 ವರ್ಷಗಳ ಕಾಲ ಪ್ರೀಮಿಯಮ್ ಕಟ್ಟಬೇಕು. ತಿಂಗಳಿಗೆ 42 ರೂನಂತೆ 42 ವರ್ಷ ಕಟ್ಟಿದರೆ 60 ವರ್ಷ ವಯಸ್ಸಾದಾಗ 1.7 ಲಕ್ಷ ರೂ ಸಂಗ್ರಹವಾಗುತ್ತದೆ. ಅಲ್ಲಿಂದ ನಿಮಗೆ ತಿಂಗಳಿಗೆ 1,000 ರೂ ಪಿಂಚಣಿ ಸಿಗುತ್ತಾ ಹೋಗುತ್ತದೆ. 5,000 ರೂ ಮಾಸಿಕ ಪಿಂಚಣಿ ಬೇಕೆಂದರೆ ತಿಂಗಳಿಗೆ 210 ರೂ ಕಟ್ಟಬೇಕು.
ನೀವು 40ನೇ ವಯಸ್ಸಿಗೆ ಯೋಜನೆ ಆರಂಭಿಸಿದರೆ 20 ವರ್ಷ ಪ್ರೀಮಿಯಮ್ ಕಟ್ಟಬೇಕು. 5,000 ರೂ ಮಾಸಿಕ ಪಿಂಚಣಿ ಬೇಕೆಂದರೆ ತಿಂಗಳಿಗೆ 1,318 ರೂ ಕಟ್ಟಿಕೊಂಡು ಹೋಗಬೇಕು. 1,000 ರೂ ಪಿಂಚಣಿ ಸಾಕು ಎನಿಸಿದರೆ ತಿಂಗಳಿಗೆ 264 ರೂ ಕಟ್ಟಿದರೆ ಸಾಕು.