ಕಸ ಗುಡಿಸುವ ಕಾಯಕ; ಸಾಯುವಾಗ ಹೊಂದಿದ್ದ ಆಸ್ತಿ 60 ಕೋಟಿ ರೂ; ಮಾದರಿಯಾಗುವ ರೊನಾಲ್ಡ್ ರೀಡ್ ಕಥೆ

|

Updated on: Oct 15, 2024 | 12:52 PM

Inspiring story of Ronald Read: ಇದು ರೊನಾಲ್ಡ್ ರೀಡ್ ಎಂಬ ಬಡವನ ಕಥೆ... ಮೆಕ್ಯಾನಿಕ್, ಪೆಟ್ರೋಲ್ ಬಂಕ್ ಅಸಿಸ್ಟೆಂಟ್, ಕ್ಲೀನರ್ ಇತ್ಯಾದಿ ಕಾಯಕಗಳು ಇವರದ್ದು. ಸೌದೆ ಒಡೆಯುವುದು ಇತ್ಯಾದಿ ಹವ್ಯಾಸ ಇವರದ್ದು. ಕಡಿಮೆ ಆದಾಯ ಇದ್ದರೂ ಮಕ್ಕಳನ್ನು ಓದಿಸಿ, ಜೊತೆ ಜೊತೆಗೆ ಹಣವನ್ನೂ ಉಳಿಸಿದ್ದರು. ಉಳಿಸಿದ ಹಣವನ್ನು ಹೂಡಿಕೆ ಮಾಡಿದರ. ಸಾಯುವಾಗ ಕುಬೇರನಾಗಿ ಸತ್ತರು. ಸಂಪತ್ತನ್ನು ದಾನ ಕೂಡ ಮಾಡಿದರು.

ಕಸ ಗುಡಿಸುವ ಕಾಯಕ; ಸಾಯುವಾಗ ಹೊಂದಿದ್ದ ಆಸ್ತಿ 60 ಕೋಟಿ ರೂ; ಮಾದರಿಯಾಗುವ ರೊನಾಲ್ಡ್ ರೀಡ್ ಕಥೆ
ರೊನಾಲ್ಡ್ ರೀಡ್
Follow us on

ಹತ್ತು ವರ್ಷದ ಹಿಂದೆ ಮೃತಪಟ್ಟ ಅಮೆರಿಕದ ರೋನಾಲ್ಡ್ ರೀಡ್ (Ronald James Read) ಎಂಬ ವ್ಯಕ್ತಿಯ ಕಥೆ ಸಾಕಷ್ಟು ಜನರಿಗೆ ಅಮೂಲ್ಯ ಜೀವನಪಾಠ ಒದಗಿಸಬಲ್ಲುದು. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನ ಸವೆಸಿ 92ರ ಇಳಿವಯಸ್ಸಿನಲ್ಲಿ ಮೃತಪಟ್ಟಾಗ ಇವರ ಬಳಿ ಇದ್ದ ಆಸ್ತಿ ಎಂಟು ಮಿಲಿಯನ್ ಡಾಲರ್. ಅಂದಿನ ರುಪಾಯಿ ಮೌಲ್ಯದಲ್ಲಿ ಸುಮಾರು 60 ಕೋಟಿ ರೂ ಇರಬಹುದು. ಅಮೆರಿಕದಲ್ಲಿ ಅದೇನೂ ದೊಡ್ಡ ಮೊತ್ತ ಎನಿಸದೇ ಹೋಗಬಹುದು. ಆದರೆ, ರೊನಾಲ್ಡ್ ರೀಡ್ ದೊಡ್ಡ ಸಂಬಳ ಕೊಡುವ ಕೆಲಸದಲ್ಲಿ ಇದ್ದವರಲ್ಲ. ಆದರೂ ಕೂಡ ಅಷ್ಟೊಂದು ಮೊತ್ತದ ಹಣವನ್ನು ಇವರು ಹೇಗೆ ಕೂಡಿಹಾಕಿದರು ಎಂಬುದು ತುಸು ಸೋಜಿಗ ಮೂಡಿಸಬಹುದು. ಅಷ್ಟೇ ಅಲ್ಲ, ಇವರ ಜೀವನಕ್ರಮ, ಹೂಡಿಕೆ ವಿಧಾನ ಇವೂ ಕೂಡ ಸಂಪತ್ತು ಕ್ರೋಡೀಕರಣಕ್ಕೆ ಎಡೆ ಮಾಡಿಕೊಟ್ಟಿರಬಹುದು. ಆ ಮಟ್ಟಿಗೆ ಕೋಟ್ಯಂತರ ಕೆಳ ಮಧ್ಯಮ ಭಾರತೀಯರಿಗೆ ಇವರು ರೋಲ್ ಮಾಡಲ್ ಎನಿಸಬಹುದು.

1921ರ ಅಕ್ಟೋಬರ್​ನಲ್ಲಿ ಅಮೆರಿಕದ ವೆರ್ಮಾಂಡ್​ನಲ್ಲಿ (Vermont) ಜನಿಸಿದ ರೊನಾಲ್ಡ್ ಜೆಮ್ಸ್ ರೀಡ್ ಬಡ ಕುಟುಂಬದಲ್ಲಿ ಜನಿಸಿದವರು. ಇವರ ಕುಟುಂಬದಲ್ಲಿ ಹೈಸ್ಕೂಲ್ ಗ್ರಾಜುಯೇಟ್​ವರೆಗೂ ಓದಿದ್ದು ಇವರೇ ಮೊದಲು. ಮಿಲಿಟರಿಯಲ್ಲಿ ಕೆಲಸ ಮಾಡಿ ನಿವೃತ್ತರಾದ ಬಳಿಕ ಇವರು ಸಣ್ಣಪುಟ್ಟ ಕಾಯಕ ಮಾಡಿಕೊಂಡಿದ್ದರು. ಸೌದೆ ಒಡೆಯುವುದು ಇವರ ಹವ್ಯಾಸ. ಇವರ ಮನೆಯಲ್ಲಿ ಸೌದೆ ಒಲೆಯಿಂದಲೇ ಅಡುಗೆ ಮಾಡಲಾಗುತ್ತಿತ್ತು.

ಇದನ್ನೂ ಓದಿ: ನ್ಯಾಷನಲ್ ಪೆನ್ಷನ್ ಸ್ಕೀಮ್ ಮೂಲಕ ಲಕ್ಷ ರೂ ಪಿಂಚಣಿ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಪೆಟ್ರೋಲ್ ಬಂಕ್​ನಲ್ಲಿ ಸಹಾಯಕನಾಗಿದ್ದರು. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಕಟ್ಟಡವೊಂದರಲ್ಲಿ ಕಸ ಗುಡಿಸುವ (Janitor) ಪಾರ್ಟ್​ಟೈಮ್ ಕೆಲಸವನ್ನೂ ಮಾಡುತ್ತಿದ್ದರು. ಇವ್ಯಾವುದೂ ಕೂಡ ಒಳ್ಳೆಯ ವರಮಾನ ಕೊಡುವ ಕಾಯಕಗಳಾಗಿರಲಿಲ್ಲ. ಆದರೂ ಕೂಡ ರೊನಾಲ್ಡ್ ರೀಡ್ ಅವರು ಸಂಗ್ರಹಿಸಿದ ಷೇರುಗಳ ಮೌಲ್ಯ ಇವರು ಸಾಯುವಾಗ 8 ಮಿಲಿಯನ್ ಡಾಲರ್ ಆಗಿತ್ತು.

ರೊನಾಲ್ಡ್ ರೀಡ್ ಅಷ್ಟೊಂದು ಹೂಡಿಕೆ ಮಾಡಲು ಹೇಗೆ ಸಾಧ್ಯವಾಯಿತು?

ರೊನಾಲ್ಡ್ ರೀಡ್ ಅವರಿಗೆ ಹೆಚ್ಚು ಸಂಪಾದನೆ ಇರಲಿಲ್ಲ. ಆದರೂ ತಮ್ಮ ಮಕ್ಕಳ ಓದನ್ನು ನಿಲ್ಲಿಸಲಿಲ್ಲ. ಇದು ಸಾಧ್ಯವಾಗಿದ್ದು ಅವರ ಸರಳ ಜೀವನ. ಸಂಪಾದನೆಯಲ್ಲಿ ಹೆಚ್ಚು ಭಾಗವನ್ನು ಉಳಿಸುತ್ತಿದ್ದರು. ಬಹಳ ಇತಿಮಿತಿಯಲ್ಲಿ ಖರ್ಚು ಮಾಡುತ್ತಿದ್ದರು. ಕಿತ್ತು ಹೋದ ಹಳೆಯ ಡೆನಿಮ್ ಜ್ಯಾಕೆಟ್​ಗೆ ಪಿನ್ ಹಾಕಿಕೊಂಡೇ ಬಳಸುತ್ತಿದ್ದಂತಹ ವ್ಯಕ್ತಿ ಅವರು.

ಷೇರುಗಳಲ್ಲಿ ಹೂಡಿಕೆ ಮಾಡಿದ್ದರು…

ರೊನಾಲ್ಡ್ ರೀಡ್ ತಾನು ಉಳಿಸಿದ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡುತ್ತಾ ಹೋಗಿದ್ದರು. ಉತ್ತಮ ಡಿವಿಡೆಂಡ್ ತರುವ ಜಾನ್ಸನ್ ಅಂಡ್ ಜಾನ್ಸನ್, ಸಿವಿಎಸ್, ಡೋವ್ ಇತ್ಯಾದಿ ಬ್ಲೂಚಿಪ್ ಷೇರುಗಳನ್ನು ಖರೀದಿಸಿದರು. ತಮಗೆ ಚಿರಪರಿಚಿತವಿರುವ ಕಂಪನಿಗಳ ಮೇಲೆ ಇವರ ಹೂಡಿಕೆ ಇತ್ತು. ಆಗ ಟ್ರೆಂಡ್ ಆಗುತ್ತಿದ್ದ ಟೆಕ್ನಾಲಜಿ ಕಂಪನಿಗಳ ಗೊಡವೆಗೆ ಇವರು ಹೋಗಲಿಲ್ಲ.

ತಾವು ಷೇರುಗಳಲ್ಲಿ ಮಾಡಿದ್ದ ಹೂಡಿಕೆಯನ್ನು ಇವರು ದೀರ್ಘಾವಧಿ ಬಿಟ್ಟಿದ್ದರು. ಅದರ ಪರಿಣಾಮವಾಗಿ ಇವರ ಷೇರುಸಂಪತ್ತು ಗಣನೀಯವಾಗಿ ಹೆಚ್ಚುತ್ತಾ ಹೋಗಿತ್ತು.

ಇದನ್ನೂ ಓದಿ: Viral : ಕದ್ದ ಕಾರನ್ನು ಅರ್ಧದಲ್ಲೇ ಬಿಟ್ಟು ಕ್ಷಮೆಯಾಚನೆ ಪತ್ರ ಅಂಟಿಸಿ ಹೋದ ಕಳ್ಳ, ಹೀಗೂ ಇರ್ತಾರಾ

ಮಿತವ್ಯಯಿಯಾಗಿದ್ದ ರೀಡ್, ದಾನದಲ್ಲಿ ಉದಾರಿ

ರೊನಾಲ್ಡ್ ರೀಡ್ ಪತ್ನಿ ಬಹಳ ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಆಕೆಯ ಇಬ್ಬರು ಮಕ್ಕಳನ್ನು ರೀಡ್ ಅವರೇ ಬೆಳೆಸಿದರು. ಸಾಯುವ ಮುನ್ನ ತಮ್ಮ ಆಸ್ತಿಯನ್ನು ಅವರು ಹಂಚಿಕೆ ಮಾಡಿದ್ದರು. ಎಂಟು ಮಿಲಿಯನ್ ಡಾಲರ್ ಹಣದಲ್ಲಿ ಎರಡು ಮಿಲಿಯನ್ ಅನ್ನು ಇಬ್ಬರು ಮಕ್ಕಳಿಗೆ ಬರೆದರು. ಬ್ರೂಕ್ಸ್ ಲೈಬ್ರರಿಗೆ 1.2 ಮಿಲಿಯನ್ ಡಾಲರ್ ಕೊಟ್ಟರು. ವಿವಿಧ ಆಸ್ಪತ್ರೆ ಇತ್ಯಾದಿಗೆ ಒಂದಷ್ಟು ಹಣ ಬರೆದಿದ್ದರು.

ರೊನಾಲ್ಡ್ ರೀಡ್ ಜೀವನದಿಂದ ಕಲಿಯುವ ಪಾಠಗಳಿವು

  1. ಸರಳ ಜೀವನ
  2. ಸಾಕಷ್ಟು ಉಳಿತಾಯ
  3. ದೀರ್ಘಾವಧಿ ಹೂಡಿಕೆ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Tue, 15 October 24