ಬೆಂಗಳೂರು, ಸೆಪ್ಟೆಂಬರ್ 13: ಯುಪಿಐ ಬಳಸುತ್ತಿರುವವರು ಯುಪಿಐ ಲೈಟ್ ಫೀಚರ್ ಬಳಸುತ್ತಿರಬಹುದು. ಸಣ್ಣ ಮೊತ್ತದ ಹಣ ವಹಿವಾಟಿಗೆ ಇದು ಬಹಳ ಅನುಕೂಲ ಆಗುತ್ತದೆ. ಪೇಟಿಎಂ, ಫೋನ್ಪೇ ಮೊದಲಾದ ಕೆಲ ಯುಪಿಐ ಪ್ಲಾಟ್ಫಾರ್ಮ್ಗಳಲ್ಲಿ ಈ ಫೀಚರ್ ಅನ್ನು ಅಳವಡಿಸಲಾಗಿದೆ. ಎನ್ಪಿಸಿಐ ಈಗ ಯುಪಿಐ ಲೈಟ್ ಫೀಚರ್ನಲ್ಲಿ ಇನ್ನೊಂದು ಹಂತ ಮುಂದಕ್ಕೆ ಹೋಗಿದೆ. ಅಕ್ಟೋಬರ್ 31ರಿಂದ ಯುಪಿಐ ಲೈಟ್ ಅಕೌಂಟ್ಗೆ ಆಟೊ ಟಾಪ್ ಅಪ್ ಮಾಡುವ ಅವಕಾಶ ಇರಲಿದೆ.
ಆಟೊ ಟಾಪ್ ಅಪ್ ಎಂದರೆ ಆಟೊಮ್ಯಾಟಿಕ್ ಆಗಿ ಹಣ ವರ್ಗಾವಣೆ ಆಗುವುದು. ಯುಪಿಐ ಲೈಟ್ ಅಕೌಂಟ್ನಲ್ಲಿ 2,000 ರೂವರೆಗೆ ಹಣ ತುಂಬಿಸಬಹುದು. ಆ ಹಣ ಖಾಲಿಯಾದರೆ ಬ್ಯಾಂಕ್ ಅಕೌಂಟ್ನಿಂದ ಅದಕ್ಕೆ ಮ್ಯಾನುವಲ್ ಆಗಿ ಹಣ ತುಂಬಿಸಬೇಕಾಗುತ್ತದೆ. ಆಟೊ ಟಾಪ್ ಅಪ್ ಅವಕಾಶ ಇದ್ದರೆ ಯುಪಿಐ ಲೈಟ್ ಅಕೌಂಟ್ನಲ್ಲಿ ಹಣ ಖಾಲಿಯಾದರೆ ಬ್ಯಾಂಕ್ ಅಕೌಂಟ್ನಿಂದ ನೀವು ನಿರ್ದಿಷ್ಟಪಡಿಸಿದ ಮೊತ್ತದಷ್ಟು ಹಣ ತನ್ನಂತಾನೆ ವರ್ಗಾವಣೆ ಆಗುತ್ತದೆ. ಒಟ್ಟಾರೆ ಯುಪಿಐ ಲೈಟ್ ಅಕೌಂಟ್ನಲ್ಲಿ ಇರುವ ಹಣ 2,000 ರೂ ಮೀರಿರಬಾರದು ಅಷ್ಟೇ.
ಈ ಯುಪಿಯ ಲೈಟ್ನ ಆಟೊ ಟಾಪ್ ಅಪ್ ಫೀಚರ್ 2024ರ ಅಕ್ಟೋಬರ್ 31ರಿಂದ ಸಕ್ರಿಯಗೊಳ್ಳುತ್ತದೆ. ಆಗಸ್ಟ್ 27ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಎನ್ಪಿಸಿಐ ಈ ವಿಚಾರವನ್ನು ತಿಳಿಸಿತ್ತು.
ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು
ಯುಪಿಐ ಮೂಲಕ ನೀವು ಹಣ ಪಾವತಿ ಮಾಡುವಾಗ ಬ್ಯಾಂಕ್ ಸರ್ವರ್ನ ಬಾಗಿಲು ತಟ್ಟಬೇಕಾಗುತ್ತದೆ. ಕೋಟ್ಯಂತರ ಜನರು ವಹಿವಾಟು ನಡೆಸುವಾಗ ಬ್ಯಾಂಕ್ ಸರ್ವರ್ಗಳಿಗೆ ಕಷ್ಟವಾಗಬಹುದು. ಬ್ಯಾಂಕ್ ಅಕೌಂಟ್ನ ಪಿನ್ ನಂಬರ್ ಅನ್ನು ಗ್ರಾಹಕರು ಒದಗಿಸಬೇಕು. ಗ್ರಾಹಕರಿಗೂ ತುಸು ಹೆಚ್ಚು ಸಮಯ ಹಿಡಿಯುತ್ತದೆ. ಯುಪಿಐ ಲೈಟ್ ಫೀಚರ್ನಲ್ಲಿ ಸಣ್ಣ ಮೌಲ್ಯದ ವಹಿವಾಟುಗಳನ್ನು (500 ರೂಗಿಂತ ಕಡಿಮೆ) ಯಾವುದೇ ಪಿನ್ ನಮೂದಿಸುವ ಅಗತ್ಯ ಇಲ್ಲದೇ ನಡೆಸಬಹುದು. ಬ್ಯಾಂಕ್ನ ಕೋರ್ ಸಿಸ್ಟಮ್ ಅನ್ನು ಸಂಪರ್ಕಿಸುವ ಅವಶ್ಯಕತೆಯೂ ಇರುವುದಿಲ್ಲ.
ಯುಪಿಐ ಲೈಟ್ ಫೀಚರ್ ಎಂಬುದು ವ್ಯಾಲಟ್ ರೀತಿ ಕೆಲಸ ಮಾಡುತ್ತದೆ. ಆದರೆ ಪ್ರಮುಖ ವ್ಯತ್ಯಾಸ ಎಂದರೆ ಲೈಟ್ ಫೀಚರ್ನಲ್ಲಿ ನೀವು ಯಾವುದೇ ಪ್ಲಾಟ್ಫಾರ್ಮ್ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ವ್ಯಾಲಟ್ ಆದರೆ ಅದೇ ಪ್ಲಾಟ್ಫಾರ್ಮ್ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬಳಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ