ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು
Reasons for health insurance claim rejection: ಇನ್ಷೂರೆನ್ಸ್ ಪಾಲಿಸಿಯಲ್ಲಿ ಹಣಕ್ಕೆ ನೀವು ಸಲ್ಲಿಸುವ ಕ್ಲೇಮ್ ರಿಜೆಕ್ಟ್ ಆಗಲು ಹಲವು ಕಾರಣಗಳಿವೆ. ಇನ್ಷೂರೆನ್ಸ್ ಪಾಲಿಸಿ ಮಾಡಿಸುವಾಗ ಮಾಹಿತಿ ತಪ್ಪಾಗಿ ನೀಡಿದ್ದರೆ, ಅಥವಾ ಮಾಹಿತಿ ಮರೆ ಮಾಚಿದರೆ, ಅಥವಾ ನಿಯಮಾನುಸಾರ ಕ್ಲೇಮ್ ಅರ್ಜಿ ಸಲ್ಲಿಸದೇ ಇದ್ದರೆ ರೀಇಂಬರ್ಸ್ಮೆಂಟ್ ಆಗದೇ ಹೋಗಬಹುದು.
ನವದೆಹಲಿ, ಸೆಪ್ಟೆಂಬರ್ 9: ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯಲ್ಲಿ ಸಲ್ಲಿಸಲಾಗುವ ಕ್ಲೇಮ್ ರಿಜೆಕ್ಟ್ ಆಗುತ್ತಿದೆ ಎಂದು ಹಲವಾರು ಜನರು ಆಕ್ಷೇಪ ವ್ಯಕ್ತಪಡಿಸುವುದುಂಟು. ಹೆಲ್ತ್ ಇನ್ಷೂರೆನ್ಸ್ ಇವತ್ತಿನ ದಿನದ ಬಹಳ ಅಗತ್ಯದ ಹಣಕಾಸು ಯೋಜನೆ ಆಗಿದೆ. ಈ ಆರೋಗ್ಯ ವಿಮೆಯ ಪ್ರೀಮಿಯಮ್ ಹಣ ಕೂಡ ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತಗೊಂಡರೆ ಪಾಲಿಸಿ ನಿರರ್ಥಕ ಎನಿಸುತ್ತದೆ. ಇನ್ಷೂರೆನ್ಸ್ ಕ್ಲೇಮ್ ರಿಜೆಕ್ಟ್ ಆಗಲು ಕೆಲ ಪ್ರಮುಖ ಕಾರಣಗಳಿವೆ. ತಪ್ಪಾದ ಮಾಹಿತಿ ಸಲ್ಲಿಕೆಯಿಂದ ಹಿಡಿದು, ನಿಯಮಾನುಸಾರ ಕ್ಲೇಮ್ ಸಲ್ಲಿಸದೇ ಇರುವುದು ಇತ್ಯಾದಿ ಕಾರಣಗಳಿವೆ. ಅವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:
1. ತಪ್ಪಾದ ಮಾಹಿತಿ ನೀಡಿದ್ದರೆ ಕ್ಲೈಮ್ ರಿಜೆಕ್ಟ್ ಆಗುತ್ತೆ
ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸುವಾಗ ನಿಮ್ಮ ವಯಸ್ಸು, ಆದಾಯ, ವೃತ್ತಿ, ಪ್ರವೃತ್ತಿ ಇತ್ಯಾದಿ ಬಗ್ಗೆ ತಪ್ಪಾದ ಮಾಹಿತಿ ನೀಡಿದ್ದರೆ ಕೆಲವೊಮ್ಮೆ ನಿಮ್ಮ ಕ್ಲೇಮ್ ಸ್ವೀಕೃತವಾಗುವುದಿಲ್ಲ. ಈಗಾಗಲೇ ಬೇರೆ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಹೊಂದಿದ್ದೂ ಅದರ ಮಾಹಿತಿಯನ್ನು ಮುಚ್ಚಿಟ್ಟಿದ್ದರೂ ಕ್ಲೇಮ್ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಿಮೆ ಮಾಡಿಸುವಾಗ ಸಾಧ್ಯವಾದಷ್ಟೂ ವಿಚಾರಗಳಲ್ಲಿ ಸತ್ಯಾಂಶವನ್ನು ತಿಳಿಸುವುದು ಅವಶ್ಯಕ.
ಇದನ್ನೂ ಓದಿ: ಬ್ಯಾಂಕಲ್ಲಿ ಪರ್ಸನಲ್ ಲೋನ್ ಸಿಗುತ್ತಿಲ್ಲವಾ? ಬೇರೆಡೆ ಸಾಲ ಮಾಡುವಾಗ ಗಮನಿಸಬೇಕಾದ 3 ಸಂಗತಿಗಳು
2. ಪೂರ್ವ ಕಾಯಿಲೆ, ಖಯಾಲಿಗಳ ಮಾಹಿತಿ ಮುಚ್ಚಿಟ್ಟಿದ್ದರೆ ಇನ್ಷೂರೆನ್ಸ್ ಕ್ಲೇಮ್ ರಿಜೆಕ್ಟ್ ಆಗುತ್ತೆ
ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸುವಾಗ ಪೂರ್ವದಲ್ಲೇ ಯಾವುದಾದರೂ ರೋಗ ಅಸ್ತಿತ್ವದಲ್ಲಿ ಇದೆಯಾ ಎಂದು ಕೇಳಬಹುದು. ಉದಾಹರಣೆಗೆ, ಬಿಪಿ, ಶುಗರ್, ಕ್ಯಾನ್ಸರ್ ಇತ್ಯಾದಿ ಬಗ್ಗೆ ಮಾಹಿತಿ ಕೇಳಿದ್ದರೆ ಸತ್ಯಾಂಶವನ್ನೇ ತಿಳಿಸಿ. ಹಾಗೆಯೇ, ಕುಟುಂಬದ ಆರೋಗ್ಯ ಇತಿಹಾಸ, ಧೂಮಪಾನ, ಮದ್ಯಪಾನ, ತಂಬಾಕು ಇತ್ಯಾದಿ ಚಟ ಇದ್ದೂ ಅದರ ಮಾಹಿತಿ ಮುಚ್ಚಿಟ್ಟಿದ್ದರೆ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತಗೊಳ್ಳಬಹುದು.
3. ವೇಟಿಂಗ್ ಪೀರಿಯಡ್ಗೆ ಮುನ್ನವೇ ಕ್ಲೇಮ್ ಬೇಡ
ಕೆಲ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ವೇಟಿಂಗ್ ಪೀರಿಯಡ್ ಇರುತ್ತದೆ. ಅಂದರೆ ಪಾಲಿಸಿ ಮಾಡಿಸಿ ನಿರ್ದಿಷ್ಟ ಅವಧಿಯವರೆಗೆ ನೀವು ಸರ್ವಿಸ್ ಪಡೆಯಲು ಆಗುವುದಿಲ್ಲ. ಕ್ಲೇಮ್ ಮಾಡಲು ಆಗುವುದಿಲ್ಲ. ಹಾಗೊಂದು ವೇಳೆ ಕಾಯುವಿಕೆ ಅವಧಿಯೊಳಗೆ ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅದರ ಹಣಕ್ಕೆ ಕ್ಲೇಮ್ ಸಲ್ಲಿಸಿದರೆ ಅದು ರಿಜೆಕ್ಟ್ ಆಗುತ್ತದೆ.
ಇದನ್ನೂ ಓದಿ: ಇವತ್ತಿನ ಒಂದು ಕೋಟಿ ರೂ ಹಣದ ನಿಜ ಮೌಲ್ಯ 30 ವರ್ಷದ ಬಳಿಕ ಎಷ್ಟಾಗಬಹುದು? ಭವಿಷ್ಯದ ಭದ್ರತೆಗೆ ಇದು ಬಹಳ ಮುಖ್ಯ
4. ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ಕ್ಲೇಮ್ ಅಸಾಧ್ಯ
ನಿಮ್ಮ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ರಿನಿವಲ್ ಆಗದೇ ಹೋಗಿದ್ದರೆ, ಅಥವಾ ಪ್ರೀಮಿಯಮ್ ಅನ್ನು ಸಕಾಲಕ್ಕೆ ಕಟ್ಟದೇ ಹೋಗಿದ್ದರೆ ಆಗ ವಿಮೆ ಚಾಲ್ತಿಯಲ್ಲಿ ಇರುವುದಿಲ್ಲ. ಈ ಅವಧಿಯಲ್ಲಿ ನೀವು ಕ್ಲೇಮ್ ಮಾಡಿದರೆ ಅದು ಸ್ವೀಕೃತವಾಗದೇ ಹೋಗಬಹುದು.
5. ನಿರ್ದಿಷ್ಟ ಅವಧಿಯೊಳಗೆ ಕ್ಲೇಮ್ ಮಾಡದಿದ್ದರೆ…
ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಂತಿಷ್ಟು ದಿನಗಳೊಳಗಾಗಿ ಕ್ಲೇಮ್ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಪಾಲಿಸಿಗಳಲ್ಲಿ ಈ ಗಡುವಿನ ಅವಧಿ ಒಂದೆರಡು ವಾರ ಇರುತ್ತದೆ. ಅಷ್ಟರೊಳಗೆ ನೀವು ಎಲ್ಲಾ ಮೂಲ ದಾಖಲೆಗಳ ಸಮೇತ ಕ್ಲೇಮ್ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಗಡುವು ತಪ್ಪಿದರೆ ಕ್ಲೇಮ್ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ