ವಾರನ್ ಬಫೆಟ್ (Warren Buffett) ವಿಶ್ವ ಕಂಡ ಶ್ರೇಷ್ಠ ಹೂಡಿಕೆದಾರರಲ್ಲಿ ಒಬ್ಬರು. 8.5 ಲಕ್ಷ ಕೋಟಿ ರೂ ಸಂಪತ್ತಿನ ಒಡೆಯರು. ಅವರ ಅನೇಕ ಹೂಡಿಕೆಗಳು ಬಹಳ ಯಶಸ್ಸು ಕಂಡಿವೆ. ಇದರ ಜೊತೆಗೆ ಮಾನವೀಯ ಕಾರ್ಯಗಳನ್ನು ಸಾಕಷ್ಟು ಕೈಗೊಂಡಿದ್ದಾರೆ. ಯುವ ಸಮುದಾಯಕ್ಕೆ ಆಗಾಗ್ಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ. ಅದರಲ್ಲೂ ಹಣದ ವಿಚಾರದಲ್ಲಿ ಯಾವ ರೀತಿ ವರ್ತಿಸಬೇಕು, ಹಣ ಎಷ್ಟು ಮುಖ್ಯ, ಹಣದ ಉಳಿತಾಯ ಎಷ್ಟು ಮುಖ್ಯ, ಹಣದ ಸಂಪಾದನೆಗೆ ಏನು ಮಾಡಬೇಕು ಎಂಬಿತ್ಯಾದಿ ಸಂಗತಿ ಬಗ್ಗೆ ಸಲಹೆಗಳನ್ನು ನಿಡುತ್ತಿರುತ್ತಾರೆ. ಅಂಥ ಅನೇಕ ನುಡಿಮುತ್ತುಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಕೊಡಲಾಗಿದೆ. ಇದು ಕೆಲವರಿಗಾದರೂ ಉಪಯೋಗಕ್ಕೆ ಬರಬಹುದು, ಗಮನಿಸಿ ಓದಿ…
ಈ ಎರಡು ರೂಲ್ ತಿಳಿದಿರಿ. ನಂಬರ್ ಒಂದು, ಯಾವತ್ತೂ ಹಣ ಕಳೆದುಕೊಳ್ಳದಿರಿ. ನಂಬರ್ ಎರಡು, ಯಾವತ್ತೂ ಮೊದಲ ರೂಲ್ ಮರೆಯದಿರಿ. ಇದು ವಾರನ್ ಬಫೆಟ್ ತಮ್ಮದೇ ಶೈಲಿಯಲ್ಲಿ ಕೊಡುವ ಪ್ರಮುಖ ಸಲಹೆ. ಎಷ್ಟು ಸರಳ ಅಲ್ಲವಾ? ನಮಗೆ ಬರುವ ದುಡ್ಡನ್ನು ಕೈಬಿಟ್ಟರೆ ಆ ಲಕ್ಷ್ಮೀ ನಮ್ಮಿಂದ ದೂರವಾಗುತ್ತಾಳೆ ಅಂತ ದೊಡ್ಡವರು ಹೇಳೋದು ಇದೇ ಸತ್ಯ ಅಲ್ಲವಾ?
ವಾರನ್ ಬಫೆಟ್ ಷೇರುಪೇಟೆ ಹೂಡಿಕೆಗಳಿಂದ ವಿಶ್ವಖ್ಯಾತರಾಗಿದ್ದಾರೆ. ಇವರ ಪ್ರಕಾರ ಸರಿಯಾದ ಹೂಡಿಕೆ ವಿಧಾನ ಎಂದರೆ ಬಹಳ ಕಡಿಮೆ ಬೆಲೆ ಇಂಡೆಕ್ಸ್ ಫಂಡ್ಗಳಲ್ಲಿ ಹೆಚ್ಚು ಹೂಡಿಕೆ ಮಾಡಬೇಕೆನ್ನುವುದು. ‘ಕಿರು ಅವಧಿಯ ಸರ್ಕಾರಿ ಬಾಂಡ್ಗಳಲ್ಲಿ ಶೇ. 10, ಕಡಿಮೆ ಬೆಲೆಯ ಎಸ್ ಅಂಡ್ ಪಿ 500 ಇಂಡೆಕ್ಸ್ ಫಂಡ್ನಲ್ಲಿ ಶೇ. 90ರಷ್ಟು ಹಣವನ್ನು ಹಾಕಿರಿ’ ಎಂದು 2013ರಲ್ಲಿ ವಾರನ್ ಬಫೆಟ್ ಹೇಳಿದ್ದರು.
ಇದನ್ನೂ ಓದಿ: Infosys: ಇನ್ಫೋಸಿಸ್ ಉದ್ಯೋಗಿಗಳಿಗೆ ಷೇರುಭಾಗ್ಯ; ಬೋನಸ್ ಜೊತೆಗೆ ಸಿಕ್ಕಿದೆ ಕಂಪನಿ ಷೇರು
ನಮ್ಮ ಹಿರಿಯರು ಸಾಲವನ್ನು ಶೂಲಕ್ಕೆ ಹೋಲಿಸುತ್ತಾರೆ. ವಾರನ್ ಬಫೆಟ್ ಕೂಡ ಇದನ್ನೇ ಹೇಳುತ್ತಾರೆ. ನೀವು ಈ ಪ್ರಪಂಚದಲ್ಲಿ ಸಾಲ ಮಾಡುವಂಥದ್ದೇನೂ ಇರುವುದಿಲ್ಲ. ನೀವು ಜಾಣರಾಗಿದ್ದರೆ ಸಾಲ ಮಾಡುವುದಿಲ್ಲ, ಸಾಕಷ್ಟು ಹಣವನ್ನೂ ಸಂಪಾದಿಸುತ್ತೀರಿ ಎಂಬುದು ಅವರ ಅನಿಸಿಕೆ. ವಾರನ್ ಬಫೆಟ್ ಅವರು ಕ್ರೆಡಿಟ್ ಕಾರ್ಡ್ ವಿಚಾರದಲ್ಲಂತೂ ಯುವಕರಿಗೆ ಬಹಳ ಎಚ್ಚರದಿಂದ ಇರುವಂತೆ ಸಲಹೆ ನೀಡುತ್ತಾರೆ.
ಯಾರೇ ಆಗಲೀ ಯಾವ ಕಾಲಕ್ಕೂ ಇಂತಿಷ್ಟು ಎಂದು ಹಣ ಸಿದ್ಧವಾಗಿಟ್ಟುಕೊಳ್ಳಬೇಕು. ಕ್ಯಾಷ್ ಹಣ ಸದಾ ಜೇಬಲ್ಲಿರಬೇಕು. ಯಾವಾಗ ಯಾವ ಬಿಲ್ ಕಟ್ಟಬೇಕಾಗಿ ಬರುತ್ತದೋ ಗೊತ್ತಿಲ್ಲ ಎಂಬುದು ವಾರನ್ ಬಫೆಟ್ ಸಲಹೆ. ಆದರೆ, ಹಣವನ್ನು ಜೇಬಲ್ಲಿ ಇಟ್ಟುಕೊಳ್ಳಬೇಕೆಂದಿಲ್ಲ. ಈಗ ಸ್ಮಾರ್ಟ್ಫೋನ್, ಯುಪಿಐ ಕಾಲವಾದ್ದರಿಂದ ಖಾತೆಯಲ್ಲಿ ಹಣ ಇದ್ದರಾಯ್ತು.
‘ನೀವು ಕೊಡುವುದು ಹಣ, ನಿಮಗೆ ಸಿಗುವುದು ಮೌಲ್ಯ’– ಇದು 2008ರಲ್ಲಿ ವಾರನ್ ಬಫೆಟ್ ಹೇಳಿದ ಇನ್ನೊಂದು ಜಾಣನುಡಿ. ಅಂದರೆ, ಒಂದು ವಸ್ತುವಿನ ಮೌಲ್ಯಕ್ಕಿಂತ ಹೆಚ್ಚು ಬೆಲೆ ಕೊಟ್ಟು ಖರೀದಿಸಬಾರದು. ವಾರನ್ ಬಫೆಟ್ ಹೇಳುವುದೇನೆಂದರೆ ಅವರು ಸಾಕ್ಸಾಗಲೀ ಸ್ಟಾಕ್ ಆಗಲೀ ಒಳ್ಳೆಯ ಗುಣಮಟ್ಟದ ವಸ್ತು ಬೆಲೆ ಕಡಿಮೆಗೊಂಡಾಗ ಖರೀದಿಸುತ್ತಾರಂತೆ.
ನಿಮ್ಮ ಬಳಿ ಇರುವ ಅತಿದೊಡ್ಡ ಆಸ್ತಿ ನೀವೇ ಆಗಿರುತ್ತೀರಿ. ನಿಮ್ಮ ಮೇಲೆ ಹೆಚ್ಚು ಹೂಡಿಕೆ ಮಾಡಿ ಎಂಬುದು ಬಫೆಟ್ ಅವರ ಇನ್ನೊಂದು ಸಲಹೆ. ನಿಮಗಿರುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವುದೋ, ಹೊಸ ಕೌಶಲ್ಯ ಪಡೆಯುವುದೋ ಹೀಗೆ ಏನೇ ಆಗಿರಬಹುದು. ಹೊಸ ಕೋರ್ಸ್ ಕಲಿಯಬಹುದು. ಪುಸ್ತಕ ಓದಿ ಜ್ಞಾನಾರ್ಜನೆ ಮಾಡಬಹುದು. ಇಂಥದ್ದು ಮಾಡಿದಷ್ಟೂ ನಿಮಗೆ 10 ಪಟ್ಟು ಲಾಭ ಸಿಗುತ್ತದೆ ಎಂಬುದು ಈ ಹಿರಿಯರ ಸೂತ್ರ.
ನೀವು ಹೂಡಿಕೆ ಮಾಡಿದಾಕ್ಷಣ ಲಾಭ ಮಾಡಬೇಕೆನ್ನುವ ಮನಸ್ಥಿತಿ ಬಿಡಿ. ಹಣವನ್ನು ದೀರ್ಘಾವಧಿಗೆ ಯೋಚಿಸಿ. ನಿಮ್ಮ ಹೂಡಿಕೆ ದೀರ್ಘಾವಧಿಗೆ ಇರಲಿ. ಮಾರುಕಟ್ಟೆ ಅಲುಗಾಡುತ್ತಿದೆ ಎಂದು ಹೂಡಿಕೆ ಹಿಂಪಡೆಯುವ ಗೋಜಿಗೆ ಹೋಗದಿರಿ. ಇದು ನಿಮ್ಮಲ್ಲಿ ಸದಾ ಕಾಲಕ್ಕೂ ಹಣಕಾಸು ಭದ್ರತೆ ತರಬಲ್ಲುದು ಎಂದು ವಾರನ್ ಬಫೆಟ್ ಹೇಳುತ್ತಾರೆ.
ನೀವು ಶ್ರೀಮಂತರಾಗಿದ್ದೀರೆಂದರೆ ಶೇ. 1ರಷ್ಟಿರುವ ವರ್ಗಕ್ಕೆ ಸೇರಿದ್ದೀರಿ. ಉಳಿದ ಶೇ. 99ರಷ್ಟು ಮಂದಿ ಬಗ್ಗೆ ಮಾನವೀಯತೆ ತೋರಬೇಡವೇ? ನಿಮ್ಮ ಬಳಿ ಶ್ರೀಮಂತಿಕೆ ಇದ್ದರೆ ಬಡವರಿಗೆ ಮತ್ತು ಅಸಹಾಯಕರಿಗೆ ನೆರವು ಒದಗಿಸಿ ಹೃದಯ ಶ್ರೀಮಂತಿಕೆಯನ್ನೂ ತೋರಿರಿ ಎನ್ನುವುದು ವಾರನ್ ಬಫೆಟ್ ಅವರ ಮಗದೊಂದು ಸಲಹೆ.