Infosys: ಇನ್ಫೋಸಿಸ್ ಉದ್ಯೋಗಿಗಳಿಗೆ ಷೇರುಭಾಗ್ಯ; ಬೋನಸ್ ಜೊತೆಗೆ ಸಿಕ್ಕಿದೆ ಕಂಪನಿ ಷೇರು
Equity Shares For Infosys Employees: ವರದಿಗಳ ಪ್ರಕಾರ ಅರ್ಹ ಉದ್ಯೋಗಿಗಳಿಗೆ 5.11 ಲಕ್ಷಕ್ಕೂ ಹೆಚ್ಚು ಈಕ್ವಿಟಿ ಷೇರುಗಳನ್ನು ಇನ್ಫೋಸಿಸ್ ನೀಡಿರುವುದು ತಿಳಿದುಬಂದಿದೆ. ಎರಡು ಸ್ಕೀಮ್ಗಳ ಮೂಲಕ ಈ ಈಕ್ವಿಟಿ ಷೇರುಗಳನ್ನು ಇನ್ಫೋಸಿಸ್ ಮೇ 12ರಂದು ನೀಡಿದೆ.
ಬೆಂಗಳೂರು: ಸಾಮಾನ್ಯವಾಗಿ ಯಾವುದೇ ಕಂಪನಿಯಲ್ಲಿ ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ಸಂಬಳ ಹೆಚ್ಚಳ, ಬೋನಸ್, ಇನ್ಸೆಂಟಿವ್ ಇತ್ಯಾದಿ ಕೊಡುಗೆಗಳನ್ನು ನೀಡಲಾಗುತ್ತದೆ. ಕೆಲ ಕಡೆ ಬೈಕು, ಕಾರು, ಚಿನ್ನ ಬೆಳ್ಳಿ ನಾಣ್ಯ ಇತ್ಯಾದಿ ವಿಶೇಷ ಕೊಡುಗೆ ನೀಡಲಾಗುತ್ತದೆ. ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ (Infosys Technologies) ತನ್ನ ಉದ್ಯೋಗಿಗಳಿಗೆ ಪ್ರೋತ್ಸಾಹ ಕೊಡಲು ಇನ್ನೂ ಒಂದು ಹೆಜ್ಜೆ ಮುಂದೆಹೋಗಿದೆ. ಚೆನ್ನಾಗಿ ಕೆಲಸ ಮಾಡುವ ಉದ್ಯೋಗಿಗಳನ್ನು ಗುರುತಿಸಿ ಬೋನಸ್ ಜೊತೆಗೆ ಇಂತಿಷ್ಟು ಷೇರುಗಳನ್ನು ನೀಡಿದೆ. ವರದಿಗಳ ಪ್ರಕಾರ ಅರ್ಹ ಉದ್ಯೋಗಿಗಳಿಗೆ 5.11 ಲಕ್ಷಕ್ಕೂ ಹೆಚ್ಚು ಈಕ್ವಿಟಿ ಷೇರುಗಳನ್ನು (Equity Shares) ಇನ್ಫೋಸಿಸ್ ನೀಡಿರುವುದು ತಿಳಿದುಬಂದಿದೆ. ಎರಡು ಸ್ಕೀಮ್ಗಳ ಮೂಲಕ ಈ ಈಕ್ವಿಟಿ ಷೇರುಗಳನ್ನು ಇನ್ಫೋಸಿಸ್ ಮೇ 12ರಂದು ನೀಡಿದೆ. ಹಾಗಂತ ಎಕ್ಸ್ಚೇಂಜ್ ಫೈಲಿಂಗ್ ವೇಳೆ ಇನ್ಫೋಸಿಸ್ ತಿಳಿಸಿದೆ.
ಅರ್ಹ ಉದ್ಯೋಗಿಗಳಿಗೆ ನೀಡಲಾದ 5.11 ಲಕ್ಷ ಈಕ್ವಿಟಿ ಷೇರುಗಳ ಪೈಕಿ 2015ರ ಸ್ಟಾಕ್ ಇನ್ಸೆಂಟಿವ್ ಕಾಂಪೆನ್ಸೇಶನ್ ಪ್ಲಾನ್ ಅಡಿಯಲ್ಲಿ 1.04 ಲಕ್ಷ ಈಕ್ವಿಟಿ ಷೇರುಗಳನ್ನು ಹಂಚಲಾಗಿದೆ. ಇನ್ನು, 2019ರ ಇನ್ಫೋಸಿಸ್ ಎಕ್ಸ್ಪ್ಯಾಂಡೆಡ್ ಸ್ಟಾಕ್ ಓನರ್ಶಿಪ್ ಪ್ರೋಗ್ರಾಮ್ ಅಡಿಯಲ್ಲಿ 4.07 ಲಕ್ಷ ಈಕ್ವಿಟಿ ಷೇರುಗಳನ್ನು ಉದ್ಯೋಗಿಗಳಿಗೆ ನೀಡಲಾಗಿದೆ.
ಈಗ ಉದ್ಯೋಗಿಗಳಿಗೆ 5.11 ಲಕ್ಷ ಈಕ್ವಿಟಿ ಷೇರುಗಳನ್ನು ಹಂಚುವುದರೊಂದಿಗೆ ಅದರ ಸಬ್ಸ್ಕ್ರೈಬ್ಡ್ ಷೇರು ಸಂಪತ್ತು 2074.94ಕೋಟಿ ರೂನಷ್ಟಿದೆ. ಇದನ್ನು ಪ್ರತೀ ಈಕ್ವಿಟಿ ಷೇರಿಗೆ 5 ರೂನಂತೆ 415 ಕೋಟಿ ಈಕ್ವಿಟಿ ಷೇರುಗಳಾಗಿ ವಿಭಜಿಸಲಾಗಿದೆ. ಈಗ ಎಷ್ಟು ಮಂದಿ ಉದ್ಯೋಗಿಗಳಿಗೆ ಈಕ್ವಿಟಿ ಷೇರುಗಳನ್ನು ಎಷ್ಟೆಷ್ಟು ಹಂಚಲಾಗಿದೆ ಎಂಬ ಮಾಹಿತಿ ಇಲ್ಲ. ಇನ್ಫೋಸಿಸ್ನಲ್ಲಿ ಸುಮಾರು ಮೂರೂವರೆ ಲಕ್ಷ ಉದ್ಯೋಗಿಗಳಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ನ ಷೇರುಸಂಪತ್ತು ಒಟ್ಟು ಸುಮಾರು 5.16 ಲಕ್ಷ ಕೋಟಿಯಷ್ಟಿದೆ. ಬಿಎಸ್ಇ ಮಾರುಕಟ್ಟೆಯಲ್ಲಿ ಅದರ ಷೇರು ಬೆಲೆ ಸದ್ಯ 1,246 ರೂ ಹೊಂದಿದೆ.