
ಹಾಗೇ ಬಿಟ್ಟ ಹಣದ ಮೌಲ್ಯ ವರ್ಷದಿಂದ ವರ್ಷಕ್ಕೆ ಕುಂದುತ್ತಲೇ ಇರುತ್ತದೆ. ಆದ್ದರಿಂದ ನೀವು ಉಳಿಸಿದ ಹಣವನ್ನು ಸರಿಯಾದ ಸ್ಥಳಗಳಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಹಣದ ಮಹಿಮೆ ವ್ಯಕ್ತವಾಗಬೇಕಾದರೆ ಹೂಡಿಕೆ ಅಗತ್ಯವೇ ಅಗತ್ಯ. ಬಹಳ ಜನರು ಹೂಡಿಕೆ ಮಾಡುತ್ತಾರಾದರೂ ಬೇಗ ಸಂಯಮ ಕಳೆದುಕೊಳ್ಳುವುದುಂಟು. 20 ವರ್ಷದಲ್ಲಿ 10 ಕೋಟಿ ರೂ ಗಳಿಸಬಹುದು ಎಂದು ಭಾವಿಸಿ ಹೂಡಿಕೆ (Investments) ಆರಂಭಿಸಿದವರು ಐದು ವರ್ಷವಾಗುವಷ್ಟರಲ್ಲಿ ಭ್ರಮ ನಿರಸನಗೊಂಡು ಹೂಡಿಕೆಯಿಂದ ಹೊರಬರುವುದುಂಟು. ಇವರು ಮುಂದಿನ ವರ್ಷಗಳಲ್ಲಿ ಹಣದ ಮ್ಯಾಜಿಕ್ ಪವರ್ ಎಂಥದ್ದು ಎಂದು ಗೊತ್ತೇ ಆಗುವುದಿಲ್ಲ.
ಹಣಕಾಸು ತಜ್ಞರೊಬ್ಬರ ಸಲಹೆ ಮೇರೆಗೆ 20 ವರ್ಷದಲ್ಲಿ 1 ಕೋಟಿ ರೂ ಗಳಿಸುವ ಗುರಿಯೊಂದಿಗೆ 10,000 ರೂಗಳ ಮಾಸಿಕ ಎಸ್ಐಪಿ ಆರಂಭಿಸುತ್ತೀರಿ. ನಿಮ್ಮ ಎಸ್ಐಪಿ ಇರುವ ಮ್ಯೂಚುವಲ್ ಫಂಡ್ ವಾರ್ಷಿಕವಾಗಿ ಸರಾಸರಿ ಶೇ. 12ರಷ್ಟು ರಿಟರ್ನ್ ಕೊಡುತ್ತಾ ಹೋಗುತ್ತದೆ ಎಂದಿಟ್ಟುಕೊಳ್ಳಿ. ನಿಮ್ಮ ಎಸ್ಐಪಿ ಹೂಡಿಕೆ ಮೌಲ್ಯ 1 ವರ್ಷದಲ್ಲಿ 1.28 ಲಕ್ಷ ರೂ ಆಗಿರುತ್ತದೆ. ನಿಮಗೆ ಸಿಕ್ಕಿರುವ ರಿಟರ್ನ್ ಕೇವಲ 8,093 ರೂ ಮಾತ್ರ.
ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾ? ಮೊದಲು ಕೈಬಿಟ್ಟುಹೋಗೋದು ಹಣ ಅಲ್ಲ; ಇದು ತಿಳಿದಿರಿ…
ಹಾಗೇ 5 ವರ್ಷ ನೀವು ಎಸ್ಐಪಿ ಮುಂದುವರಿಸುತ್ತೀರಿ. ನೀವು ಅಲ್ಲಿಯವರೆಗೆ 6,00,000 ರೂ ಕಟ್ಟಿರುತ್ತೀರಿ. ನಿಮ್ಮ ಹೂಡಿಕೆ ಮೌಲ್ಯ 8,24,864 ರೂ ಆಗುತ್ತದೆ. ಹೂಡಿಕೆಗೆ 5 ವರ್ಷದಲ್ಲಿ ಸಿಕ್ಕ ರಿಟರ್ನ್ 2.24 ಲಕ್ಷ ರೂ. ಒಂದು ಕೋಟಿ ರೂನ ಗುರಿ ಮುಟ್ಟುವುದು ಅಸಾಧ್ಯ ಎಂದು ಅನೇಕರು ಹತಾಶೆಗೊಳ್ಳುವ ಹಂತ ಇದು. ಆದರೆ, ಇಲ್ಲಿಂದ ಮುಂದಿನ ಹಾದಿ ಬಹಳ ರೋಚಕ ಮತ್ತು ಅದ್ಭುತವಾಗಿರುತ್ತದೆ ಎಂಬುದು ಬಹಳ ಜನರಿಗೆ ಗೊತ್ತೇ ಇರುವುದಿಲ್ಲ.
ಇದೇ 10,000 ರೂ ಮಾಸಿಕ ಹೂಡಿಕೆಯು 5 ವರ್ಷದಲ್ಲಿ 8.24 ಲಕ್ಷ ರೂ ಆಗುತ್ತದೆ. ಮುಂದಿನ 5 ವರ್ಷದಲ್ಲಿ ಇದು ಬರೋಬ್ಬರಿ 23 ಲಕ್ಷ ರೂ ಆಗುತ್ತದೆ. ನಿಮ್ಮ ಹೂಡಿಕೆ ಹಣ ಬಹುತೇಕ ಡಬಲ್ ಆಗಿರುತ್ತದೆ. ಮತ್ತೂ 5 ವರ್ಷ ನೀವು ಎಸ್ಐಪಿ ಮುಂದುವರಿಸಿದಲ್ಲಿ ಹೂಡಿಕೆ ಮೌಲ್ಯ 50 ಲಕ್ಷ ರೂ ದಾಟಿ ಹೋಗಿರುತ್ತದೆ. ಮತ್ತೂ ಐದು ವರ್ಷ ಹೂಡಿಕೆ ಮುಂದುವರಿಸಿದರೆ ನಿಮ್ಮ ಹೂಡಿಕೆ ಮೌಲ್ಯ 1 ಕೋಟಿ ರೂ ಮುಟ್ಟಿರುತ್ತದೆ.
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಯುಎಎನ್ ಮತ್ತು ಇಪಿಎಫ್ ಖಾತೆಗಳು ಇದ್ದರೆ ಏನು ಮಾಡಬೇಕು? ಇಲ್ಲಿವೆ ಕ್ರಮಗಳು
ಅಂದರೆ, 20 ವರ್ಷದವರೆಗೂ ನೀವು ಸಂಯಮದಿಂದ ಮತ್ತು ನಿರಂತರವಾಗಿ ಎಸ್ಐಪಿ ಮುಂದುವರಿಸುತ್ತಾ ಹೋದರೆ ನಿಮ್ಮ ಗುರಿ ಮುಟ್ಟಿರುತ್ತದೆ. ನೀವು ಆ ಹೂಡಿಕೆಯನ್ನು ಇನ್ನೂ 10 ವರ್ಷ ಮುಂದುವರಿಸಿಕೊಂಡು ಹೋದಲ್ಲಿ 3.50 ಕೋಟಿ ರೂ ಒಡೆಯರಾಗಬಹುದು. ಇದು ದೀರ್ಘಾವಧಿ ಹೂಡಿಕೆಯಿಂದ ನಿಮಗೆ ಸಿಗುವ ಅದ್ಭುತ ರಿಟರ್ನ್. ಇದು ಗಣಿತದಲ್ಲಿ ಹಣದ ಕಾಂಪೌಂಡಿಂಗ್ ಗುಣದ ಪರಿಣಾಮ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ