
ಇರುವುದೊಂದೇ ಜೀವನ. ಇದನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಹತ್ತಾರು ಮಾರ್ಗಗಳಿವೆ. ಹಿಂದೆ ನಡೆದುದು, ಮುಂದೆ ನಡೆಯುವುದ ಚಿಂತಿಸಿ ಫಲ ಇಲ್ಲ. ಈಗ ಏನಿದೆ ಅದನ್ನು ಅನುಭವಿಸಿ. ಸಾಲ ಮಾಡಿಯಾದರೂ ತುಪ್ಪ ತಿನ್ನಿ ಎಂದು ಒಂದು ವರ್ಗದ ಜನರು ಹೇಳುತ್ತಾರೆ. ಆದರೆ, ಇದಕ್ಕೆ ಪ್ರತಿಯಾಗಿ ಇನ್ನೊಂದು ವರ್ಗದವರು ನಾಳೆಯ ದಿನಕ್ಕೆ ಇಂದಿನಿಂದಲೇ ಅಣಿಯಾಗುವುದು ಜಾಣತನ ಎಂದು ಕಿವಿ ಮಾತು ಹೇಳುತ್ತಾರೆ. ಭೂಪೇಂದ್ರ ಪೋಪಟಾನಿ (Bhupendra Poptani) ಎನ್ನುವ ಹಣಕಾಸು ತಜ್ಞರೊಬ್ಬರು ಎಕ್ಸ್ನಲ್ಲಿ ಒಂದು ಕುತೂಹಲಕಾರಿ ಪೋಸ್ಟ್ ಹಾಕಿದ್ದಾರೆ. ತಮಗೆ ತಿಳಿದ ವ್ಯಕ್ತಿಯೊಬ್ಬರ ಹಣಕಾಸು ಸ್ಥಿತಿ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ.
ತಾನು 30 ವರ್ಷದ ಕ್ಲೈಂಟ್ವೊಬ್ಬರನ್ನು ಭೇಟಿ ಮಾಡಿದೆ. ಆತ ತಿಂಗಳಿಗೆ 1.7 ಲಕ್ಷ ರೂ ಸಂಬಳ ಪಡೆಯುತ್ತಾರೆ. ಹೊಸದಾಗಿ ಮದುವೆಯಾಗಿದ್ದಾನೆ. ಒಳ್ಳೆಯ ಕೆಲಸದಲ್ಲಿದ್ದಾನೆ. ಹೊಸ ಕಾರು, ಹೊಸ ಮಾಡಲ್ ಐಫೋನ್, ಒಳ್ಳೆಯ ಮನೆಯನ್ನು ಹೊಂದಿದ್ದಾನೆ. ಆ ವಯಸ್ಸಿನ ಎಂಥವರಿಗೂ ಕಣ್ಣು ಕುಕ್ಕುವಂತಹ ಜೀವನ. ಆದರೆ, ಆತನ ಹಣಕಾಸು ವಾಸ್ತವ ಸ್ಥಿತಿ ಬೇರೆಯೇ ಇದೆ ಎಂದು ಭೂಪೇಂದ್ರ ಪೋಪಟಾನಿ ವಿವರ ನೀಡಿದ್ದಾರೆ.
ಇದನ್ನೂ ಓದಿ: ಸಾಲ ಬಳಸಿ ಸಾಹುಕಾರರಾದವರಿದ್ದಾರೆ… ಒಳ್ಳೆ ಸಾಲ, ಕೆಟ್ಟ ಸಾಲ ಮಧ್ಯೆ ವ್ಯತ್ಯಾಸ ತಿಳಿದಿರಿ…
‘ಆ ಯುವಕನ 1.7 ಲಕ್ಷ ರೂ ಸಂಬಳದಲ್ಲಿ 90,000 ರೂ ಹಣ ಕಾರು, ಮೊಬೈಲ್ ಮತ್ತು ಗೃಹ ವಸ್ತುಗಳ ಇಎಂಐಗಳಿಗೆ ವ್ಯಯವಾಗುತ್ತದೆ. ವೀಕೆಂಡ್ ಟ್ರಿಪ್, ಡಿನ್ನರ್, ಅಪ್ಗ್ರೇಡ್ಸ್ ಇತ್ಯಾದಿ ಜೀವನಶೈಲಿ ವೆಚ್ಚಗಳಿಗೆ ಇನ್ನಷ್ಟು 30,000 ರೂ ಹೋಗುತ್ತದೆ. ಆತ ಉಳಿಸುತ್ತಿರುವುದು ಎಷ್ಟು? ಒಂಚೂರೂ ಸೇವಿಂಗ್ಸ್ ಇಲ್ಲ’ ಎಂದು ಭೂಪೇಂದ್ರ ಪೋಪಟಾನಿ ಅವರು ತಮ್ಮ ಕ್ಲೈಂಟ್ನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಪೋಪಟಾನಿ ಅವರ ಎಕ್ಸ್ ಪೋಸ್ಟ್
Yesterday, I met a 30-year-old client earning ₹1.7 lakh a month. Recently married, good job, and living what most people would call a perfect life, a new car, the latest iPhone, and a beautifully furnished apartment.
But when we started talking about his finances, the reality…
— Bhupendra Poptani (@Compoundingfund) October 30, 2025
‘ತಾನು ಈ ಹಂತಕ್ಕೆ ಬರಲು ಬಹಳ ಕಷ್ಟಪಟ್ಟಿದ್ದು, ಸದ್ಯ ಜೀವನ ಅನುಭವಿಸುವುದು ಮುಖ್ಯ. ಒಂದು ಮನೆ ಖರೀದಿಸಿ ಸೆಟಲ್ ಆದ ಮೇಲೆ ಹಣ ಉಳಿಸಲು ಆರಂಭಿಸುವುದಾಗಿ ತಮ್ಮ ಕ್ಲೈಂಟ್ ಹೇಳುತ್ತಾರೆ. ಆದರೆ, ನಾಳೆ ಉದ್ಯೋಗ ಕಳೆದುಹೋದರೆ ಏನು ಮಾಡುತ್ತೀರಿ ಎಂಬುದು ನನ್ನ ಪ್ರಶ್ನೆ. ಭಾರತದಲ್ಲಿ ನಿರುದ್ಯೋಗಿಗಳಿಗೆ ನೆರವಾಗುವ ಯಾವ ಯೋಜನೆಯೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತು’ ಎಂದು ಎಎಂಎಫ್ಐ ಮಾನ್ಯತೆಯ ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗಿರುವ ಪೋಪಟಾನಿ ಹೇಳಿದ್ದಾರೆ.
ಇದನ್ನೂ ಓದಿ: 24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!
ಇವತ್ತಿನ ಯುವಜನರು ಕಾರು, ಗ್ಯಾಜೆಟ್ ಇತ್ಯಾದಿಗಳ ಹಿಂದೆ ಬಿದ್ದಿದ್ದಾರೆ. ಒಮ್ಮೆ ಕೆಲಸ ಕಳೆದುಕೊಂಡರೆ, ಅಥವಾ ದೊಡ್ಡ ಆರೋಗ್ಯ ಸಮಸ್ಯೆ ಎದುರಾದರೆ ಅವರ ಸುಖದ ಜೀವನವೆಲ್ಲಾ ಘೋರ ಕಷ್ಟವಾಗಿ ಮಾರ್ಪಡುತ್ತದೆ ಎಂದು ಎಚ್ಚರಿಸುತ್ತಾರೆ ಪೋಪಟಾನಿ.
ನಾಳೆಯ ಅಗತ್ಯಗಳಿಗೆ ಅಣಿಗೊಳ್ಳಲು ಪ್ರತಿಯೊಬ್ಬ ವ್ಯಕ್ತಿ ಕೂಡ ತಡಮಾಡದೇ ಹಣ ಉಳಿತಾಯ ಆರಂಭಿಸಬೇಕು. ಎಸ್ಐಪಿ ಶುರು ಮಾಡಬೇಕು. ಎಮರ್ಜೆನ್ಸಿ ಫಂಡ್ಗಳನ್ನು ಎತ್ತಿ ಇಡಬೇಕು. ನಿವೃತ್ತಿಗೆ ಬಹಳ ವರ್ಷ ಮುನ್ನವೇ ಪ್ಲಾನ್ ಮಾಡಬೇಕು ಎಂದು ಈ ತಜ್ಞರು ಸಲಹೆ ನೀಡುತ್ತಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Sun, 2 November 25