ನವದೆಹಲಿ, ನವೆಂಬರ್ 17: ದೇಶಾದ್ಯಂತ ವಿವಿಧ ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲಕ್ಕೆ ಬಡ್ಡಿದರ ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ. ಅರ್ಬಿಐ ಕೆಲ ನಿಯಮಗಳನ್ನು ಬಿಗಿಗೊಳಿಸಿರುವುದು ಇದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಕಮರ್ಷಿಯಲ್ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (NBFC) ಅಸುರಕ್ಷಿತ ಸಾಲಗಳ (Unsecured Loan) ವಿಚಾರದಲ್ಲಿ ಆರ್ಬಿಐ ನಿಯಮ ಪರಿಷ್ಕರಿಸಿದೆ. ಅಸುರಕ್ಷಿತ ಸಾಲ ಅಥವಾ ಅನ್ಸೆಕ್ಯೂರ್ಡ್ ಲೋನ್ಗಳ ಸಂಖ್ಯೆಯಲ್ಲಿ ತೀರಾ ಹೆಚ್ಚಾಗಿರುವುದು ಆರ್ಬಿಐ (RBI) ಗಮನಕ್ಕೆ ಬಂದಿದ್ದು, ಬ್ಯಾಂಕ್ ವಲಯದ ಆರೋಗ್ಯಕ್ಕೆ ಇದು ಮಾರಕವಾಗಬಹುದು ಎಂದು ಪರಿಗಣಿಸಲಾಗಿದೆ. ಹೀಗಾಗಿ, ಅಸುರಕ್ಷಿತ ಸಾಲಗಳಿಗೆ ಆರ್ಬಿಐ ನಿಗದಿ ಮಾಡಿರುವ ರಿಸ್ಕ್ ವೈಟೇಜ್ (Risk Weight) ಅನ್ನು 25 ಪ್ರತಿಶತದಷ್ಟು ಹೆಚ್ಚಿಸಿದೆ. ಕಮರ್ಷಿಯಲ್ ಬ್ಯಾಂಕುಗಳಲ್ಲಿ ರಿಸ್ಕ್ ವೈಟ್ ಶೇ. 125 ಇದ್ದದ್ದು ಶೇ. 150ಕ್ಕೆ ಏರಿಸಲಾಗಿದೆ. ಎನ್ಬಿಎಫ್ಸಿಗಳಲ್ಲಿ ಶೇ. 100ರಿಂದ ಶೇ. 125ಕ್ಕೆ ಏರಿಸಲಾಗಿದೆ.
ಹಣಕಾಸು ಸಂಸ್ಥೆ ತನ್ನ ಗ್ರಾಹಕರಿಗೆ ಸಾಲ ನೀಡಿದಾಗ ನಿರ್ದಿಷ್ಟ ಮೊತ್ತವನ್ನು ಪ್ರತ್ಯೇಕವಾಗಿ ತೆಗೆದಿರಿಸಬೇಕು. ಅಂದರೆ, ಒಂದು ವೇಳೆ ಆ ಸಾಲ ಮರಳದೇ ಹೋದರೆ ಅದನ್ನು ಭರಿಸುವಷ್ಟು ಫಂಡ್ಗಳು ಬ್ಯಾಂಕ್ನಲ್ಲಿ ಇರಬೇಕು ಎಂಬುದು ಆರ್ಬಿಐನ ಅಪೇಕ್ಷೆ. ಹೀಗಾಗಿ, ರಿಸ್ಕ್ ವೈಟ್ ನಿಯಮವನ್ನು ಆರ್ಬಿಐ ತಂದಿದೆ. ಇದರೊಂದಿಗೆ ಬ್ಯಾಂಕುಗಳು ಸಿಎಆರ್ ಅಥವಾ ಕ್ಯಾಷ್ ಅಡಿಕ್ವಸಿ ರೇಷಿಯೋ ಮೊತ್ತವನ್ನು ಶೇ. 20 ಇರಿಸಲು ಹೆಚ್ಚು ಹಣವನ್ನು ಎತ್ತಿ ಇಟ್ಟುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: RBI: ಈ ಎರಡು ಬಜಾಜ್ ಫೈನಾನ್ಸ್ ಸ್ಕೀಮ್ ಅಡಿಯಲ್ಲಿ ಸಾಲ ನೀಡದಂತೆ ಆರ್ಬಿಐನಿಂದ ನಿರ್ಬಂಧ
ಆರ್ಬಿಐನ ಈ ರಿಸ್ಕ್ ವೈಟ್ ನಿಯಮ ಪರಿಷ್ಕರಣೆಯು ಹೆಚ್ಚಾಗಿ ಪರ್ನಲ್ ಲೋನ್ಗಳಿಗೆ ಅನ್ವಯಿಸುತ್ತವೆ. ಗೃಹಸಾಲ, ವಾಹನ ಸಾಲ, ಚಿನ್ನದ ಸಾಲ ಇತ್ಯಾದಿ ಅಡಮಾನ ಸಾಲಗಳಿಗೆ ಈ ನಿಯಮಗಳ ಬದಲಾವಣೆ ಇಲ್ಲ. ಶಿಕ್ಷಣ ಸಾಲಕ್ಕೂ ಇದು ಅನ್ವಯಿಸುವುದಿಲ್ಲ.
ಈಗ ಹೆಚ್ಚಿನ ಮೊತ್ತವನ್ನು ತೆಗೆದಿರಿಸಬೇಕಾಗಿರುವುದರಿಂದ ಬ್ಯಾಂಕುಗಳು ವೈಯಕ್ತಿಕ ಸಾಲವನ್ನು ಹೆಚ್ಚಿನ ಬಡ್ಡಿದರಕ್ಕೆ ಕೊಡುವುದು ಅನಿವಾರ್ಯವಾಗಬಹುದು. ಪರ್ಸನಲ್ ಲೋನ್ ಬಡ್ಡಿದರಗಳು ಸದ್ಯ ಶೇ. 14ರಿಂದ 25ರಷ್ಟಿವೆ. ಇದು ಇನ್ನಷ್ಟು ಹೆಚ್ಚಾಗಬಹುದು.
ಇದನ್ನೂ ಓದಿ: ಇ-ರುಪಾಯಿ ವಹಿವಾಟು ನಡೆಸಿದರೆ ಸಿಗುತ್ತವೆ ಕ್ಯಾಷ್ಬ್ಯಾಕ್, ರಿವಾರ್ಡ್ಗಳು..! ಬ್ಯಾಂಕುಗಳಿಂದ ಭರ್ಜರಿ ಆಫರ್
ಕಮರ್ಷಿಯಲ್ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಲ್ಲಿ ಪರ್ಸನಲ್ ಲೋನ್ಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿರುವುದು ಗಮನಕ್ಕೆ ಬಂದಿದೆ ಎಂದು ಕಳೆದ ತಿಂಗಳು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ವೈಯಕ್ತಿಕ ಸಾಲಗಳು ಸಾಮಾನ್ಯವಾಗಿ ಅಡಮಾನರಹಿತವಾಗಿರುವ ಅಸುರಕ್ಷಿತ ಸಾಲವಾಗಿರುತ್ತವೆ. ಗ್ರಾಹಕರ ಆದಾಯದ ಆಧಾರದ ಮೇಲೆ ಮಾತ್ರ ಸಾಲ ನೀಡಲಾಗುತ್ತದೆ. ಇಂಥ ಸಾಲ ಮರುಪಾವತಿ ಆಗದೇ ಹೋದರೆ ಬ್ಯಾಂಕುಗಳು ನಷ್ಟಕ್ಕೆ ತಿರುಗಬಹುದು ಎಂಬುದು ಆರ್ಬಿಐ ಭೀತಿ. ಅದಕ್ಕೆ ಬ್ಯಾಂಕುಗಳನ್ನು ಇಂಥ ಅಪಾಯಕಾರಿ ಸಾಲದ ಬಗ್ಗೆ ಎಚ್ಚರಿಸಲು ರಿಸ್ಕ್ ವೈಟ್ ನಿಯಮವನ್ನು ಬಿಗಿಗೊಳಿಸಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:17 am, Fri, 17 November 23