ನವದೆಹಲಿ: ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು (OMCs) ಪೆಟ್ರೋಲ್ (Petrol Price), ಡೀಸೆಲ್ ದರದಲ್ಲಿ (Diesel Rate) 2 ರೂ. ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿರುವುದು ಮತ್ತು ಚಿಲ್ಲರೆ ಮಾರಾಟಗಾರರ ಪ್ರಾಡಕ್ಟ್ ಮಾರ್ಜಿನ್ ಉತ್ತಮಗೊಂಡಿರುವುದೇ ಬೆಲೆ ಇಳಿಕೆ ಮಾಡುವ ಕುರಿತು ಚಿಂತನೆಗೆ ಕಾರಣ ಎನ್ನಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ತೈಲ ದರದಲ್ಲಿ ಪ್ರತಿ ದಿನ 40 ಪೈಸೆಯಂತೆ ಇಳಿಕೆಯಾಗಲಿದೆ ಎಂದು ಸಿಎನ್ಬಿಸಿ ಆವಾಜ್ ವರದಿ ಮಂಗಳವಾರ ತಿಳಿಸಿತ್ತು. ಇದರ ಪರಿಣಾಮವಾಗಿ ಒಟ್ಟಾರೆಯಾಗಿ ಕೆಲವು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ 2 ರೂ. ವರೆಗೆ ಇಳಿಕೆಯಾಗಬಹುದು ಎಂದು ವರದಿ ಅಂದಾಜಿಸಿದೆ.
ಹಿಮಾಚಲ ಪ್ರದೇಶ, ಗುಜರಾತ್ ವಿಧಾನಸಭೆ ಚುನಾವಣೆಗಳು ರಾಜಕೀಯವಾಗಿಯೂ ತೈಲ ಕಂಪನಿಗಳ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಚುನಾವಣೆ ದಿನಾಂಕ ಸಮೀಪಿಸುತ್ತಿರುವಂತೆಯೇ ದರ ಕಡಿತದ ಮಹತ್ವದ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಇಂಧನ ದರದಲ್ಲಿ ತುಸು ಇಳಿಕೆ ಮಾಡುವುದರಿಂದ ಹಣದುಬ್ಬರದಲ್ಲಿ ತುಸು ಇಳಿಕೆ ಮಾಡುವುದು ಸಾಧ್ಯವಾಗಲಿದೆ. ಇದರಿಂದ ಪ್ರತಿಪಕ್ಷಗಳ ಟೀಕೆ ಎದುರಿಸುವುದು ಸರ್ಕಾರಕ್ಕೆ ಸಾಧ್ಯವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: Petrol Price on November 2: ಕಚ್ಚಾ ತೈಲದ ಬೆಲೆ ಏರಿಕೆ; ಇಂದಿನ ಪೆಟ್ರೋಲ್- ಡೀಸೆಲ್ ದರವೆಷ್ಟು?
ತೈಲ ಬೆಲೆಗಳಲ್ಲಿ ಮಂಗಳವಾರದಿಂದ ಇಳಿಕೆ ಟ್ರೆಂಡ್ ಕಂಡುಬರುತ್ತಿದ್ದು, ಪ್ರತಿ ಟನ್ ಕಚ್ಚಾ ತೈಲದ ಮೇಲಿನ ವೈಂಡ್ಫಾಲ್ ಗಳಿಕೆ ತೆರಿಗೆಯನ್ನು ಸರ್ಕಾರವು 11,000 ರೂ.ಗಳಿಂದ 9,500 ರೂ.ಗೆ ಇಳಿಕೆ ಮಾಡಿದೆ. ಜತೆಗೆ, ಜೆಟ್ ಇಂಧನದ ರಫ್ತಿನ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ಗೆ 3.5ರ ರೂ.ನಿಂದ 5 ರೂ.ಗೆ ಹೆಚ್ಚಿಸಲಾಗಿದೆ. ಡೀಸೆಲ್ ರಫ್ತಿನ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ಗೆ 12 ರೂ.ನಿಂದ 13 ರೂ.ಗೆ ಹೆಚ್ಚಿಸಲಾಗಿದೆ.
ದೇಶೀಯ ತೈಲ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ಗಳಿಸುವ ಹೆಚ್ಚುವರಿ ಲಾಭದ ಮೇಲೆ ವಿಧಿಸುವ ತೆರಿಗೆಯಾಗಿದೆ ವೈಂಡ್ಫಾಲ್ ಗಳಿಕೆ ತೆರಿಗೆ. ಹೀಗಾಗಿ ಈ ತೆರಿಗೆ ಕಡಿತವುಇಂಧನ ದರದ ಇಳಿಕೆಗೆ ನೆರವಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದಾಖಲೆ ಮಟ್ಟಕ್ಕೆ ಕುಸಿದಿತ್ತು. ಆದರೆ ಆಗ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಮೇ 22ರಂದು ತೈಲದ ಬೆಲೆಯಲ್ಲಿ ಕೊನೆಯ ಬದಲಾವಣೆಯಾಗಿತ್ತು. 5 ತಿಂಗಳಿಗೂ ಹೆಚ್ಚು ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿರುವುದು ಇದೇ ಮೊದಲಾಗಿದೆ. ಈ ಮಧ್ಯೆ, ನವೆಂಬರ್ 1ರಿಂದ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 40 ಪೈಸೆ ಇಳಿಕೆಯಾಗಲಿದೆ ಎಂದು ಹೇಳಲಾಗಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ