ಬೋಯಿಂಗ್ ವಿಮಾನ ಸಂಸ್ಥೆಗೆ ಸಿಗುತ್ತಿಲ್ಲ ಹೊಸ ಸಿಇಒ; ಚುಕ್ಕಾಣಿ ಹಿಡಿಯಲು ಒಲ್ಲೆ ಎನ್ನುತ್ತಿರುವುದ್ಯಾಕೆ?

|

Updated on: Jun 18, 2024 | 11:38 AM

Boeing latest news: ಅಮೆರಿಕದ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ಈಗ ಸಿಇಒ ಹುಡುಕಾಟದಲ್ಲಿದೆ. ಪ್ರಸಕ್ತ ಸಿಇಒ ಡೇವ್ ಕ್ಯಾಲೂನ್ ಅವರು ಮಾರ್ಚ್ ತಿಂಗಳಲ್ಲಿ ರಾಜೀನಾಮೆ ನೀಡಿದ್ದಾರೆ. ಮೂರು ತಿಂಗಳಾದರೂ ಬೋಯಿಂಗ್​ಗೆ ಹೊಸ ಸಿಇಒ ಸಿಗುತ್ತಿಲ್ಲ. ಬೋಯಿಂಗ್ ಮುನ್ನಡೆಸಲು ಸಮರ್ಥರು ಎಂದು ಭಾವಿಸಲಾದ ಕೆಲ ಎಕ್ಸಿಕ್ಯೂಟಿವ್​ಗಳು ಆ ಹುದ್ದೆ ಪಡೆಯಲು ಮೀನಮೇಷ ಎಣಿಸುತ್ತಿದ್ದಾರೆ.

ಬೋಯಿಂಗ್ ವಿಮಾನ ಸಂಸ್ಥೆಗೆ ಸಿಗುತ್ತಿಲ್ಲ ಹೊಸ ಸಿಇಒ; ಚುಕ್ಕಾಣಿ ಹಿಡಿಯಲು ಒಲ್ಲೆ ಎನ್ನುತ್ತಿರುವುದ್ಯಾಕೆ?
ಬೋಯಿಂಗ್ ವಿಮಾನ
Follow us on

ನ್ಯೂಯಾರ್ಕ್, ಜೂನ್ 18: ವಿಶ್ವದ ಎರಡು ಪ್ರಮುಖ ವಿಮಾನ ತಯಾರಕಾ ಸಂಸ್ಥೆಗಳಲ್ಲಿ ಒಂದಾಗಿರುವ ಬೋಯಿಂಗ್ (Boeing) ಈಗ ಅಕ್ಷರಶಃ ಬಿಕ್ಕಟ್ಟಿನಲ್ಲಿದೆ. ರಾಜೀನಾಮೆ ನೀಡಿರುವ ಅದರ ಸಿಇಒ ಡೇವ್ ಕ್ಯಾಲೂನ್ (Dave Calhoun) ಈಗ ಅಮೆರಿಕದ ಸಂಸತ್ತಿನಿಂದ ತನಿಖೆ ಎದುರಿಸುತ್ತಿದ್ದಾರೆ. ಅದೇ ಹೊತ್ತಲ್ಲಿ ಬೋಯಿಂಗ್ ಸಂಸ್ಥೆಯ ಹೊಸ ಸಿಇಒ ಹುಡುಕಾಟದ ಕಥೆ ಅಂತ್ಯಗೊಳ್ಳುತ್ತಿಲ್ಲ. ಸಿಇಒ ಆಗಲು ಯಾರೂ ಮುಂದೆ ಬರುತ್ತಿಲ್ಲ. ಸಂಕಷ್ಟದಲ್ಲಿರುವ ಬೋಯಿಂಗ್ ಸಂಸ್ಥೆಯನ್ನು ಮೇಲೆತ್ತಲು ಸಮರ್ಥರಿದ್ದಾರೆ ಎಂದು ಭಾವಿಸಲಾಗಿರುವ ಅನುಭವಿ ಎಕ್ಸಿಕ್ಯೂಟಿವ್​​ಗಳ್ಯಾರೂ ಆ ಕಂಪನಿಯ ಚುಕ್ಕಾಣಿ ಹಿಡಿಯಲು ಹೆದರುತ್ತಿರುವಂತಿದೆ.

ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಜಿಇ ಏರೋಸ್ಪೇಸ್​ನ ಸಿಇಒ ಲ್ಯಾರಿ ಕಲ್ಪ್, ಸ್ಪಿರಿಟ್ ಏರೋಸಿಸ್ಟಮ್ಸ್​ನ ಸಿಇಒ ಪ್ಯಾಟ್ ಶನಹ್ಯಾನ್ ಅವರನ್ನು ಸಂಪರ್ಕಿಸಿ ಬೋಯಿಂಗ್​ಗೆ ಬರುವಂತೆ ಕೇಳಿಕೊಂಡರೂ ಯಾರೂ ಒಪ್ಪಿಲ್ಲ ಎನ್ನಲಾಗುತ್ತಿದೆ. ಬೋಯಿಂಗ್​ನಲ್ಲೇ ಸಿಒಒ ಆಗಿರುವ ಸ್ಟೀಫಾನೀ ಪೋಪ್ ಅವರಿಗೂ ಕೂಡ ಸಿಇಒ ಆಗುವ ಆಫರ್ ಕೊಡಲಾಗಿತ್ತಂತೆ. ಅವರೂ ಕೂಡ ಅದಕ್ಕೆ ಸಿದ್ಧ ಇಲ್ಲ.

ಇದನ್ನೂ ಓದಿ: ಚೀನೀ ಟೆಕ್ಕಿಗಳಿಗೆ ಮಣೆಹಾಕಲು ಭಾರತ ಸಜ್ಜು; ಚೀನೀಯರ ಆಗಮನದಿಂದ ಏನು ಪರಿಣಾಮ? ಇಲ್ಲಿದೆ ಡೀಟೇಲ್ಸ್

ಬೋಯಿಂಗ್ ಸಂಸ್ಥೆಯ ವಿವಾದವೇನು?

ಅಮೆರಿಕದ ಅಲಾಸ್ಕ ಏರ್ಲೈನ್ಸ್ ಬಳಸುತ್ತಿದ್ದ ಬೋಯಿಂಗ್ ವಿಮಾನವೊಂದು 2024ರ ಜನವರಿ ತಿಂಗಳಲ್ಲಿ ಹಾರಾಟದ ವೇಳೆ ಡೋರ್ ಪ್ಯಾನಲ್ ಕಿತ್ತು ಹೋಗಿತ್ತು. ಅದೃಷ್ಟವಶಾತ್ ವಿಮಾನಕ್ಕೆ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಅನಾಹುತ ಆಗಲಿಲ್ಲ. ಅಂಥ ಘಟನೆ ಅದೇ ಮೊದಲಾಗಿದ್ದರೆ ಅಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ.

ಆದರೆ, ಈ ಹಿಂದೆ ಬೋಯಿಂಗ್​ನ ಎರಡು 737 ಮ್ಯಾಕ್ಸ್ 8 ವಿಮಾನಗಳು ಪತನಗೊಂಡು 346 ಮಂದಿ ಸಾವನ್ನಪ್ಪಿದ್ದರು. ಒಂದು ಘಟನೆ ಇಂಡೋನೇಷ್ಯಾದಲ್ಲಿ ಸಂಭವಿಸಿದರೆ, ಮತ್ತೊಂದು ದುರಂತವು ಇಥಿಯೋಪಿಯಾದಲ್ಲಿ ಆಗಿತ್ತು. ಐದಾರು ವರ್ಷದ ಅಂತರದಲ್ಲಿ ಸರಣಿಯಾಗಿ ಬೋಯಿಂಗ್ ವಿಮಾನಗಳು ವೈಫಲ್ಯ ಕಂಡಿದ್ದು ಅದರ ಮೇಲೆ ಸಂಶಯ ಹುಟ್ಟುವಂತೆ ಮಾಡಿದೆ.

ಇದನ್ನೂ ಓದಿ: ಚೀನಾ ಬೆಳವಣಿಗೆಗೆ ಸಹಾಯವಾಗಿದ್ದ ಮೂರಂಶಗಳು ಭಾರತಕ್ಕೆ ತೊಡಕಾಗಿವೆ: ಸಿಇಎ ಅನಂತನಾಗೇಶ್ವರನ್

ಅಲಾಸ್ಕ ಏರ್ಲೈನ್ಸ್​ನ ಬೋಯಿಂಗ್ ವಿಮಾನದಲ್ಲಿ ಡೋರ್ ಪ್ಯಾನಲ್ ಕಿತ್ತುಹೋದ ಘಟನೆ ಸಂಬಂಧ ಅಮೆರಿಕದಲ್ಲಿ ತನಿಖೆ ನಡೆಯುತ್ತಿದೆ. ಅಲಾಸ್ಕ ಘಟನೆ ಬಳಿಕ ಬೋಯಿಂಗ್ ಸಂಸ್ಥೆ ವಿಮಾನ ತಯಾರಿಕೆಯ ಕಾರ್ಯವನ್ನು ನಿಧಾನಗೊಳಿಸಿದೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಬೋಯಿಂಗ್ ಅನ್ನು ಮುನ್ನಡೆಸಲು ಸರಿಯಾದ ಸಿಇಒ ಅಗತ್ಯ ಇದೆ.

ಸಣ್ಣಪುಟ್ಟ ಕಂಪನಿಯಲ್ಲ ಬೋಯಿಂಗ್…

ವಿಶ್ವದಲ್ಲಿ ನಾಗರಿಕ ವಿಮಾನಗಳನ್ನು ತಯಾರಿಸುವ ಪ್ರಮುಖ ಕಂಪನಿಗಳಲ್ಲಿ ಬೋಯಿಂಗ್ ಒಂದು. ಬೋಯಿಂಗ್ ಮತ್ತು ಏರ್​ಬಸ್ ಎರಡು ಸಂಸ್ಥೆಗಳು ವಿಶ್ವದ ಶೇ. 90ಕ್ಕೂ ಹೆಚ್ಚು ನಾಗರಿಕ ವಿಮಾನಗಳನ್ನು ತಯಾರಿಸುತ್ತವೆ. ಹೀಗಾಗಿ, ಬೋಯಿಂಗ್​ಗೆ ಒಳ್ಳೆಯ ಮಾರುಕಟ್ಟೆ ಇದೆ. ಭಾರತದ ಕೆಲ ಏರ್ಲೈನ್ಸ್ ಕಂಪನಿಗಳು ಬೋಯಿಂಗ್ ವಿಮಾನಗಳಿಗೆ ಆರ್ಡರ್ ಕೊಟ್ಟಿವೆ. ಈಗ ವಿಮಾನ ತಯಾರಿಕೆ ಪ್ರಮಾಣ ಕಡಿಮೆ ಆಗಿರುವುದರಿಂದ ಭಾರತೀಯ ಏರ್ಲೈನ್ಸ್ ಕಂಪನಿಗಳಿಗೆ ನಿಗದಿತ ದಿನದೊಳಗೆ ಡೆಲಿವರಿ ಸಿಗುವುದು ಅನುಮಾನ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ