ನಿಮ್ಮದು ವರ್ಷಕ್ಕೆ 12 ಲಕ್ಷ ರೂ ಆದಾಯ ಇದ್ದರೆ ಎಷ್ಟು ತೆರಿಗೆ ಕಟ್ಟಬೇಕು? ಟ್ಯಾಕ್ಸ್ ಸ್ಲ್ಯಾಬ್ ಹೇಗೆ ಅನ್ವಯ ಆಗುತ್ತೆ ನೋಡಿ

|

Updated on: Jun 18, 2024 | 2:31 PM

Income tax returns, latest updates: ಟ್ಯಾಕ್ಸ್ ಸ್ಲ್ಯಾಬ್​ಗಳು ಹೇಗೆ ಅನ್ವಯ ಆಗುತ್ತವೆ ಎಂಬುದು ಹಲವರಲ್ಲಿ ಈಗಲೂ ಗೊಂದಲ ಇದೆ. ನಿಮ್ಮದು ಒಟ್ಟು ಆದಾಯದಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್ ಕೊಡುವ ಹೂಡಿಕೆಗಳನ್ನು ಹೊರತುಪಡಿಸಿ ಉಳಿದ ಮೊತ್ತವು ತೆರಿಗೆಗೆ ಅರ್ಹವಾದ ಆದಾಯವಾಗಿರುತ್ತದೆ. ಈ ಟ್ಯಾಕ್ಸಬಲ್ ಇನ್ಕಮ್​ಗೆ ತೆರಿಗೆ ದರಗಳು ಅನ್ವಯ ಆಗುತ್ತದೆ. ಆಯಾ ಸ್ಲ್ಯಾಬ್ಸ್ ಪ್ರಕಾರ ವರ್ಗೀಕರಣಗೊಂಡ ಆದಾಯಕ್ಕೆ ದರಗಳಿರುತ್ತವೆ.

ನಿಮ್ಮದು ವರ್ಷಕ್ಕೆ 12 ಲಕ್ಷ ರೂ ಆದಾಯ ಇದ್ದರೆ ಎಷ್ಟು ತೆರಿಗೆ ಕಟ್ಟಬೇಕು? ಟ್ಯಾಕ್ಸ್ ಸ್ಲ್ಯಾಬ್ ಹೇಗೆ ಅನ್ವಯ ಆಗುತ್ತೆ ನೋಡಿ
ಇನ್ಕಮ್ ಟ್ಯಾಕ್ಸ್
Follow us on

ನವದೆಹಲಿ, ಜೂನ್ 18: ಕಳೆದ ಹಣಕಾಸು ವರ್ಷಕ್ಕೆ ಇನ್ಕಮ್ ಟ್ಯಾಕ್ಸ್ ರಿಟರ್ನ್ (IT Returns) ಸಲ್ಲಿಸಲು ಆದಾಯ ತೆರಿಗೆ ಇಲಾಖೆ ಈಗ ಕಿಟಕಿ ತೆರೆದಿದೆ. ಐಟಿಆರ್ ಫೈಲ್ ಮಾಡಲು ಜುಲೈ 31ರವರೆಗೂ ಕಾಲಾವಕಾಶ ಇದೆ. ಆದರೆ, ಬಹಳಷ್ಟು ಜನರಿಗೆ ಐಟಿಆರ್ ವಿಚಾರವು ಗೊಂದಲದ ಗೂಡಾಗಿರುವುದು ಹೌದು. ಇವರಲ್ಲಿ ಹೆಚ್ಚಿನವರು ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸುವ ಗೋಜಿಗೇ ಹೋಗುವುದಿಲ್ಲ. ನೀವು ತೆರಿಗೆ ಕಟ್ಟಿದ್ದರೆ ಮಾತ್ರ ಐಟಿಆರ್ ಸಲ್ಲಿಸಬೇಕು ಎಂಬುದು ತಪ್ಪು. ಹಾಗೆಯೇ, ಐಟಿಆರ್ ಫೈಲ್ ಮಾಡಿದರೆ ತೆರಿಗೆ ಕಟ್ಟಬೇಕಾಗುತ್ತದೆ ಎಂಬ ಅನಿಸಿಕೆಯೂ ತಪ್ಪು. ಇಲ್ಲಿ ನಿಮ್ಮ ಒಟ್ಟಾರೆ ವಾರ್ಷಿಕ ಆದಾಯವೇ ಬೇರೆ, ನಿಮ್ಮ ಆದಾಯದಲ್ಲಿ ತೆರಿಗೆಗೆ ಅರ್ಹವಾದ ಆದಾಯವೇ ಬೇರೆಯಾಗಿರಬಹುದು. ಹೀಗಾಗಿ, ಹೆಚ್ಚಿನ ಸಂದರ್ಭದಲ್ಲಿ ನೀವು ತೆರಿಗೆ ಕಟ್ಟುವ ಪ್ರಮೇಯ ಇಲ್ಲದೇ ಇರಬಹುದು. ಆದಾಗ್ಯೂ ರಿಟರ್ನ್ ಫೈಲ್ ಮಾಡಬೇಕಾದ್ದು ಕರ್ತವ್ಯ.

ಟ್ಯಾಕ್ಸ್ ಸ್ಲ್ಯಾಬ್​ಗಳು ಹೇಗೆ ಅನ್ವಯ ಆಗುತ್ತವೆ?

ನಿಮಗೆ ವಾರ್ಷಿಕವಾಗಿ ಸಂಬಳ ಸೇರಿ 12 ಲಕ್ಷ ರೂ ಆದಾಯ ಪಡೆಯುತ್ತೀರಿ. ಹಳೆಯ ಟ್ಯಾಕ್ಸ್ ರೆಜಿಮೆ ನೋಡಿದರೆ 10 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ತೆರಿಗೆ ಇದೆ ಎಂದಿದೆ. ಈ ವಿಚಾರ ಬಹಳ ಜನರಿಗೆ ಗೊಂದಲ ತಂದಿದೆ. ನಿಮ್ಮ ಆದಾಯ 12 ಲಕ್ಷ ರೂ ಇರುವುದರಿಂದ ಶೇ. 30 ಅಂದರೆ 3.6 ಲಕ್ಷ ರೂ ಟ್ಯಾಕ್ಸ್ ಕಟ್ಟಬೇಕಾದೀತು ಎಂದು ತಪ್ಪಾಗಿ ಭಾವಿಸಬಹುದು.

ವಸ್ತು ಸ್ಥಿತಿ ಹಾಗಿಲ್ಲ. ಸೆಕ್ಷನ್ 80ಸಿ ಇತ್ಯಾದಿ ಅಡಿಯಲ್ಲಿ ನೀವು ಹೂಡಿಕೆ ಮಾಡಿದ್ದರೆ, ಅದಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಎನ್​ಪಿಎಸ್, ಮೆಡಿಕಲ್ ಇನ್ಷೂರೆನ್ಸ್ ಕೂಡ ಮಾಡಿಸಿದರೆ ಒಟ್ಟು ಎರಡೂವರೆ ಲಕ್ಷ ರೂವರೆಗಿನ ಹಣಕ್ಕೆ ವಿನಾಯಿತಿ ಪಡೆಯಬಹುದು. ಇಲ್ಲಿ ನೀವು ಒಂದೂವರೆ ಲಕ್ಷ ರೂ ಹಣವನ್ನು ತೆರಿಗೆ ಉಳಿಸುವ ಸಾಧನಗಳನ್ನು ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಆಗ ನಿಮ್ಮ 12,00,000 ರೂ ಆದಾಯದ ಪೈಕಿ ತೆರಿಗೆಗೆ ಅರ್ಹವಾದ ಆದಾಯವು 10,50,000 ರೂ ಆಗಿರುತ್ತದೆ.

ಇದನ್ನೂ ಓದಿ: ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್​ನ ಲಾಕ್ ಇನ್ ಅವಧಿ ಐದರಿಂದ ಮೂರು ವರ್ಷಕ್ಕೆ ಇಳಿಸಲು ಬ್ಯಾಂಕುಗಳು ಸಜ್ಜು

ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿನ ಸ್ಲ್ಯಾಬ್​ಗಳು ಹೀಗಿವೆ:

  • ಎರಡೂವರೆ ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
  • 2,50,001ರಿಂದ 3,00,000 ರೂವರೆಗೆ: ಶೇ. 5 ತೆರಿಗೆ
  • 3,00,001ರಿಂದ 5,00,000 ರೂವರೆಗೆ: ಶೇ.5
  • 5,00,001ರಿಂದ 10,00,000 ರೂವರೆಗೆ: ಶೇ. 20
  • 10,00,000 ರೂ ಮೇಲ್ಪಟ್ಟ ಆದಾಯ: ಶೇ. 30ರಷ್ಟು ತೆರಿಗೆ

ಇಲ್ಲಿ ತೆರಿಗೆಗೆ ಅರ್ಹವಾದ ಆದಾಯ 10,50,000 ರೂ ಇದೆ. ಇಷ್ಟಕ್ಕೂ ನೀವು ಶೇ. 30ರಷ್ಟು ತೆರಿಗೆ ಕಟ್ಟಬೇಕಿಲ್ಲ. ಎರಡೂವರೆ ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ.

2,50,001ರಿಂದ 5,00,000 ರೂವರೆಗಿನ ಆದಾಯಕ್ಕೆ ಶೇ. 5 ತೆರಿಗೆ ಇರುತ್ತದೆ. ಅಂದರೆ ಎರಡೂವರೆ ಲಕ್ಷ ರೂಗೆ ಶೇ. 5ರಷ್ಟು ತೆರಿಗೆ ಎಂದರೆ 12,500 ರೂ ಆಗುತ್ತದೆ.

ಐದರಿಂದ ಹತ್ತು ಲಕ್ಷ ರೂವರೆಗೆ ಶೇ. 20 ತೆರಿಗೆ ಇದೆ. ಐದು ಲಕ್ಷಕ್ಕೆ ಶೇ. 20 ಎಂದರೆ ಒಂದು ಲಕ್ಷ ರೂ ಆಗುತ್ತದೆ.

ನಿಮ್ಮ ಟ್ಯಾಕ್ಸಬಲ್ ಇನ್ಕಮ್ 10,50,000 ರೂ ಇರುವುದರಿಂದ ಉಳಿದಿರುವ 50,000 ರೂಗೆ ಶೇ. 30 ತೆರಿಗೆ ಅನ್ವಯ ಆಗುತ್ತದೆ. ಅಂದರೆ 15,000 ರೂ ಆಗುತ್ತದೆ.

ಅಲ್ಲಿಗೆ ನಿಮ್ಮ ತೆರಿಗೆ ಬಾಧ್ಯತೆಯು 12,500 + 1,00,000 + 15,000 = 1,27,500 ರೂ ಆಗುತ್ತದೆ. ನೀವು ಪಾವತಿಸಬೇಕಾದ ತೆರಿಗೆ ಇದು.

ಇದನ್ನೂ ಓದಿ: ITR filing: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ

ಮೇಲಿನದೇ ನಿದರ್ಶನ ಮುಂದುವರಿಸುತ್ತಾ, ಒಂದು ವೇಳೆ ನೀವು ಸೆಕ್ಷನ್ 80ಸಿ ಅಡಿಯಲ್ಲಿ ಒಂದೂವರೆ ಲಕ್ಷ ರೂ ಹೂಡಿಕೆ ಮಾಡದೇ ಹೋದರೆ ಆಗ ಎಷ್ಟಾಗುತ್ತೆ? ಈ ಒಂದೂವರೆ ಲಕ್ಷ ರೂಗೆ ಶೇ. 30ರಷ್ಟು ತೆರಿಗೆ ಅನ್ವಯ ಆಗುತ್ತದೆ. 45,000 ರೂ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ. ಒಟ್ಟು ನೀವು ಕಟ್ಟಬೇಕಾದ ತೆರಿಗೆ 1,72,500 ರೂ ಆಗುತ್ತದೆ.

ಈ ಕಾರಣಕ್ಕೆ ಬಹಳಷ್ಟು ಜನರು ಪಿಪಿಎಫ್, ಇಎಲ್​ಎಸ್​ಎಸ್ ಇತ್ಯಾದಿ ಟ್ಯಾಕ್ಸ್ ಸೇವಿಂಗ್ ಇನ್​​ಸ್ಟ್ರುಮೆಂಟ್​​ಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ನೀವು ಹೂಡಿಕೆ ಮಾಡುವ ಉಮೇದಿನಲ್ಲಿ ಇದ್ದರೆ ಈ ವಿಚಾರಗಳು ಗಮನದಲ್ಲಿರಲಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ