ಮುಂಬೈ, ಜೂನ್ 18: ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಹೂಡಿಕೆದಾರರು ಪೆನ್ನಿ ಸ್ಟಾಕ್ಗಳಿಗಾಗಿ (Penny stock) ಹುಡುಕುತ್ತಿರುತ್ತಾರೆ. ಬಹಳ ಕಡಿಮೆ ಬೆಲೆಯಲ್ಲಿರುವ ಈ ಷೇರುಗಳು ಬೇಗ ಬೆಳೆಯುವ ಸಾಧ್ಯತೆ ಇರುತ್ತದೆ. ಉತ್ತಮವಾಗಿ ಬೆಳೆಯಬಲ್ಲಂತಹ ಪೆನ್ನಿ ಸ್ಟಾಕ್ಗಳನ್ನು ಗುರುತಿಸಿ ಅದರ ಮೇಲೆ ಹೂಡಿಕೆ ಮಾಡಿದರೆ ಅದು ಅದ್ಭುತ ಧನಲಾಭ ತಂದುಕೊಡಬಲ್ಲುದು. ಇಂಥ ಪೆನ್ನಿ ಸ್ಟಾಕ್ಗಳಲ್ಲಿ ರಿಫೆಕ್ಸ್ ಇಂಡಸ್ಟ್ರೀಸ್ (Refex Industries) ಒಂದು. ಇವತ್ತು ಇದು ಪೆನ್ನಿ ಸ್ಟಾಕ್ ಆಗಿ ಉಳಿದಿಲ್ಲವಾದರೂ ಒಂದು ಕಾಲದಲ್ಲಿ ಕೇವಲ 65 ಪೈಸೆ ಇದ್ದ ಇದರ ಷೇರುಬೆಲೆ ಇವತ್ತು 166 ರೂ ಆಗಿದೆ.
ತಮಿಳುನಾಡು ಮೂಲದ ರಿಫೆಕ್ಸ್ ಇಂಡಸ್ಟ್ರೀಸ್ ಸಂಸ್ಥೆ ರೆಫ್ರಿಜರೆಂಟ್ ಗ್ಯಾಸ್ಗಳನ್ನು ತಯಾರಿಸುತ್ತದೆ. ಸಾಂಪ್ರದಾಯಿಕವಾಗಿ ಬಳಸಲಾಗುವ ಕ್ಲೋರೋ ಫ್ಲೋರೋ ಕಾರ್ಬನ್ಗಳಿಗೆ ಪರ್ಯಾಯವಾದ ಮತ್ತು ಪರಿಸರಸ್ನೇಹಿ ಎಂದು ಪರಿಗಣಿಸಲಾದ ರೆಫ್ರಿಜರೆಂಟ್ ಗ್ಯಾಸ್ಗಳನ್ನು ಇದು ತಯಾರಿಸುತ್ತದೆ.
ಇದನ್ನೂ ಓದಿ: ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?
ರಿಫೆಕ್ಸ್ ಇಂಡಸ್ಟ್ರೀಸ್ 2009ರಲ್ಲಿ ಷೇರು ಮಾರುಕಟ್ಟೆಗೆ ಬಂದಾಗಿನಿಂದ ಶೇ. 2,389ರಷ್ಟು ಏರಿಕೆ ಆಗಿದೆ. 2019ರಿಂದ ಇದರ ಗಮನಾರ್ಹ ಪ್ರಗತಿಯನ್ನು ಕಾಣಬಹುದು. ನಾಲ್ಕು ಹಂತಗಳಲ್ಲಿ ಇದು ಜಿಗಿತ ಕಂಡಿದೆ. 2019ರಲ್ಲಿ, 2022ರಲ್ಲಿ, 2023ರ ಮಾರ್ಚ್ನಲ್ಲಿ ಮತ್ತು 2023ರ ನವೆಂಬರ್ ತಿಂಗಳಲ್ಲಿ ಇದು ಸೂಪರ್ ಜಿಗಿತ ಕಂಡಿದೆ.
2013ರಲ್ಲಿ ಒಮ್ಮೆ ಇದರ ಷೇರು ಬೆಲೆ ಕೇವಲ 65 ಪೈಸೆಗೆ ಇಳಿದಿತ್ತು. ಇವತ್ತು ಮಂಗಳವಾರದ ಕೊನೆಯಲ್ಲಿ 166.28 ಬೆಲೆ ಪಡೆದಿದೆ. 65 ಪೈಸೆ ಬೆಲೆ ಇದ್ದ 2013ರಲ್ಲಿ ಇದರ ಮೇಲೆ ಯಾರಾದರೂ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆಂದಿಟ್ಟುಕೊಳ್ಳಿ. ಈ ಹನ್ನೊಂದು ವರ್ಷದಲ್ಲಿ ಅವರಿಗೆ ಬರುತ್ತಿದ್ದ ಲಾಭ ಬರೋಬ್ಬರಿ ಎರಡೂವರೆ ಕೋಟಿ ರೂಗಿಂತಲೂ ಹೆಚ್ಚು. ಒಂದು ಲಕ್ಷಕ್ಕೆ ಎರಡೂವರೆ ಕೋಟಿ ರೂ ಲಾಭ ಎಂದರೆ ಸಾಮಾನ್ಯದ ಮಾತಲ್ಲ. ಶೇ. 75ರ ವಾರ್ಷಿಕ ದರದಲ್ಲಿ ಈ ಷೇರುಬೆಲೆ ಬೆಳೆದಂತಾಗಿದೆ.
ಇದನ್ನೂ ಓದಿ: 2023-24ರಲ್ಲಿ ಸರ್ಕಾರಿ ಉದ್ದಿಮೆಗಳ ಒಟ್ಟು ಲಾಭ 5 ಲಕ್ಷ ಕೋಟಿ ರೂ; ಹೊಸ ಮೈಲಿಗಲ್ಲು
ಷೇರು ಮಾರುಕಟ್ಟೆಯಲ್ಲಿ ಎಲ್ಲವನ್ನೂ ಖಚಿತವಾಗಿ ಹೇಳಲು ಆಗುವುದಿಲ್ಲ. ರೀಫೆಕ್ಸ್ ಇಂಡಸ್ಟ್ರೀಸ್ನ ಷೇರಿನಲ್ಲಿ 2009ರಲ್ಲಿ ಯಾರಾದರೂ ಹೂಡಿಕೆ ಮಾಡಿದ್ದರೆ ಹತ್ತು ವರ್ಷ ಕಾಲ ಅವರಿಗೆ ಲಾಭವೇ ಬಂದಿರಲಿಲ್ಲ. ಅಲ್ಲಿಯವರೆಗೆ ಅವರು ಸಂಯಮದಿಂದ ಕಾದಿದ್ದರೆ ಪರವಾಗಿಲ್ಲ. ಇಲ್ಲದಿದ್ದರೆ ಮಿಂಚಿನ ಓಟವನ್ನು ಕಾಣುವ ಸೌಭಾಗ್ಯ ತಪ್ಪಿ ಹೋಗಿರುತ್ತಿತ್ತು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ