ನವದೆಹಲಿ, ನವೆಂಬರ್ 19: ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ (contempt of court) ದೂರು ದಾಖಲಾಗಿದೆ. ಸುಪ್ರೀಂಕೋರ್ಟ್ನಿಂದ ನಿಗದಿಪಡಿಸಲಾದ ಗಡುವಿನೊಳಗೆ ಸೆಬಿ ತನಿಖೆ ನಡೆಸಲು ವಿಫಲವಾಗಿದೆ. ಇದರೊಂದಿಗೆ ನ್ಯಾಯಾಂಗ ಆದೇಶದ ಉಲ್ಲಂಘನೆಯಾಗಿದೆ. ಸೆಬಿ ವಿರುದ್ಧ ನ್ಯಾಯಾಂಗ ನಿಂದನೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ವಕೀಲ ವಿಶಾಲ್ ತಿವಾರಿ ಅವರು ಪಿಐಎಲ್ ಸಲ್ಲಿಸಿದವರು.
ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ಕೋರ್ಟ್ ಕಣ್ಗಾವಲಿನಲ್ಲಿ ತನಿಖೆ (court monitored probe) ನಡೆಯಬೇಕೆಂದು ಪಿಐಎಲ್ ಸಲ್ಲಿಸಿದ್ದ ಅರ್ಜಿದಾರರ ಪೈಕಿ ವಿಶಾಲ್ ತಿವಾರಿಯೂ ಒಬ್ಬರು. ಇದೀಗ ಅವರು ಸೆಬಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅದಾನಿ ಹಿಂಡನ್ಬರ್ಗ್ ಪ್ರಕರಣ: ನ. 8ರಷ್ಟರಲ್ಲಿ ಅಂತಿಮ ದಾಖಲೆ ಸಲ್ಲಿಸುವಂತೆ ಎಲ್ಲರಿಗೂ ಸುಪ್ರೀಂಕೋರ್ಟ್ ಆದೇಶ
ಶಾರ್ಟ್ ಸೆಲ್ಲರ್ ಕಂಪನಿಯಾದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ತನಿಖಾ ವರದಿ ಪ್ರಕಟಿಸಿತ್ತು. ಅದಾನಿ ಗ್ರೂಪ್ ಕಂಪನಿಗಳ ಷೇರುಬೆಲೆ ಕೃತಕವಾಗಿ ಉಬ್ಬುವಂತೆ ಅಕ್ರಮಗಳನ್ನು ಎಸಗಲಾಗಿದೆ ಎಂಬುದೂ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಆ ವರದಿಯಲ್ಲಿ ಹೇಳಲಾಗಿತ್ತು. ಇದನ್ನು ಅದಾನಿ ಗ್ರೂಪ್ ನಿರಾಕರಿಸಿದೆಯಾದರೂ, ಸುಪ್ರೀಕೋರ್ಟ್ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಮೇ 17ರಂದು ತನಿಖೆಯನ್ನು ಸೆಬಿಗೆ ವಹಿಸಿದೆ.
ಆಗಸ್ಟ್ 14ರಂದೇ ತನಿಖಾ ವರದಿ ಸಲ್ಲಿಸಬೇಕೆಂದು ಸೆಬಿಗೆ ನ್ಯಾಯಾಲಯ ಗಡುವು ಕೊಟ್ಟಿತ್ತು. ಆದರೆ, ಇನ್ನೂ ಕೂಡ ಸೆಬಿ ತನಿಖೆ ಪೂರ್ಣಗೊಂಡಿಲ್ಲ. ಇದು ಗಂಭೀರ ಪ್ರಕರಣವಾದ್ದರಿಂದ ಹೆಚ್ಚು ಸಮಯ ಬೇಕು ಎಂದು ಸೆಬಿ ಹೇಳುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ವಕೀಲ ವಿಶಾಲ್ ತಿವಾರಿ, ಸೆಬಿಯ ಈ ವರ್ತನೆಯು ನ್ಯಾಯಾಂಗ ನಿಂದನೆಯಾಗಿದೆ ಎಂದು ವಾದಿಸಿ, ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅದಾನಿ ಬಿಸಿನೆಸ್ ಸಾಮ್ರಾಜ್ಯ ವಿಸ್ತರಣೆ; ಬೇರೆ ಬೇರೆ ದೇಶಗಳಲ್ಲಿ ಉದ್ದಿಮೆ ಸ್ಥಾಪನೆಗೆ ಅದಾನಿ ಗ್ರೂಪ್ ಆಲೋಚನೆ
ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ಮಾತ್ರವಲ್ಲ, ಓಸಿಸಿಆರ್ಪಿ (ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್) ಸಂಘಟನೆ ಕೂಡ ಆರೋಪಗಳನ್ನು ಮಾಡಿದೆ. ಈ ಒಸಿಸಿಆರ್ಪಿ ವರದಿ ಬಗ್ಗೆಯೂ ಸುಪ್ರೀಂ ಕೋರ್ಟ್ ಗಮನ ಹರಿಸಿ ತಜ್ಞರ ಸಮಿತಿಯಿಂದ ತನಿಖೆ ನಡೆಸಿಸಬೇಕು ಎಂದು ವಿಶಾಲ್ ತಿವಾರಿ ತಮ್ಮ ಅರ್ಜಿಯಲ್ಲಿ ಕೋರಿಕೊಂಡಿದ್ದಾರೆ.
ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ನಲ್ಲಿ ಇನ್ನೂ ಲಿಸ್ಟ್ ಮಾಡಲಾಗಿಲ್ಲ. ಇತ್ತೀಚೆಗೆ ಬಂದ ವರದಿ ಪ್ರಕಾರ ಸೆಬಿಯ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ