ನವದೆಹಲಿ, ನವೆಂಬರ್ 1: ಹೆಸರಾಂತ ಆರ್ಥಿಕ ತಜ್ಞರಾಗಿದ್ದ, ಹಾಗೂ ಪ್ರಧಾನಿಗೆ ಆರ್ಥಿಕ ಸಲಹೆ ನೀಡುವ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಬಿಬೇಕ್ ದೇಬರಾಯ್ (Bibek Debroy) ಅವರು ಇಂದು ಶುಕ್ರವಾರ (ನ. 1) ಬೆಳಗ್ಗೆ 7 ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. 1955ರಲ್ಲಿ ಮೇಘಾಲಯದಲ್ಲಿ ಜನರಿಸಿದ ವಿವೇಕ್ ದೇವರಾಯ್ ಅವರು ಪತ್ನಿಯನ್ನು ಅಗಲಿದ್ದಾರೆ. ಕೆಲ ವರ್ಷಗಳ ಹಿಂದೆ ಅವರಿಗೆ ಹೃದಯಾಘಾತವಾಗಿತ್ತು.
ವಿವೇಕ್ ದೇಬ್ರಾಯ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ‘ಡಾ. ಬಿಬೇಕ್ ದೇಬ್ರಾಯ್ ಅವರು ಆರ್ಥಿಕತೆ, ಇತಿಹಾಸ, ಸಂಸ್ಕೃತಿ, ರಾಜಕೀಯ, ಆದ್ಯಾತ್ಮ ಮತ್ತಿತರ ವಿಚಾರಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಭಾರತದ ಬೌದ್ಧಿಕ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿ ಹೋಗಿದ್ದಾರೆ. ಸಾರ್ವಜನಿಕ ನೀತಿಗೆ ಕೊಡುಗೆ ನೀಡುವುದರ ಜೊತೆಗೆ, ನಮ್ಮ ಪ್ರಾಚೀನ ಪಠ್ಯಗಳೊಂದಿಗೆ ಕೆಲಸ ಮಾಡಲು ಖುಷಿ ಪಡುತ್ತಿದ್ದರು,’ ಎಂದು ನರೇಂದ್ರ ಮೋದಿ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
Dr. Bibek Debroy Ji was a towering scholar, well-versed in diverse domains like economics, history, culture, politics, spirituality and more. Through his works, he left an indelible mark on India’s intellectual landscape. Beyond his contributions to public policy, he enjoyed… pic.twitter.com/E3DETgajLr
— Narendra Modi (@narendramodi) November 1, 2024
ಇದನ್ನೂ ಓದಿ: ಬಿಪಿಎಲ್ ಗ್ರೂಪ್ ಸಂಸ್ಥಾಪಕ ಗೋಪಾಲನ್ ನಂಬಿಯಾರ್ ನಿಧನ; ರಾಜೀವ್ ಚಂದ್ರಶೇಖರ್ಗೆ ಮಾವ ವಿಯೋಗ
ಪದ್ಮಶ್ರೀ ಮೊದಲಾದ ಹಲವು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿರುವ ವಿವೇಕ್ ದೇಬ್ರಾಯ್ ಅವರು ಮೇಘಾಲಯದಲ್ಲಿ ಜನಿಸಿದರೂ, ಮುಖ್ಯವಾಗಿ ಓದಿದ್ದು ಕೋಲ್ಕತಾದಲ್ಲಿ. ಲಂಡನ್ನ ಕೇಂಬ್ರಿಡ್ನಲ್ಲಿ ಅರ್ಥಶಾಸ್ತ್ರದ ಉನ್ನತ ಶಿಕ್ಷಣ ಪಡೆದಿದ್ದರು.
ಆರ್ಥಿಕ ಅಸಮಾನತೆ ಮೊದಲಾದ ಅರ್ಥ ವಿಚಾರಗಳಲ್ಲಿ ಅವರಿಗೆ ಆಸಕ್ತಿ ಇತ್ತು. ಬಡತನಕ್ಕೆ ಹೊಸ ಮಾನದಂಡ ನಿಗದಿ ಮಾಡಬೇಕು ಎಂದು ಬಯಸಿದ್ದರು.
ನೀತಿ ಆಯೋಗ್ ಸ್ಥಾಪನೆಯಾದಾಗ ಆರಂಭಿಕ ಸದಸ್ಯರಲ್ಲಿ ವಿವೇಕ್ ದೇವ್ರಾಯ್ ಕೂಡ ಒಬ್ಬರು. 2019ರ ಜೂನ್ 5ರವರೆಗೂ ಅವರು ನೀತಿ ಆಯೋಗ್ ಸದಸ್ಯರಾಗಿದ್ದರು. 2017ರ ಸೆಪ್ಟೆಂಬರ್ನಿಂದ ಅವರು ಪ್ರಧಾನಿಗಳಿಗೆ ಆರ್ಥಿಕ ಸಲಹೆ ನೀಡುವ ಮಂಡಳಿಯ (ಇಎಸಿ ಪಿಎಂ) ಅಧ್ಯಕ್ಷರಾಗಿದ್ದರು. 2024ರ ಜುಲೈ ತಿಂಗಳಲ್ಲಿ ಪುಣೆಯ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕ್ಸ್ ಅಂಡ್ ಎಕನಾಮಿಕ್ಸ್ ಸಂಸ್ಥೆಯ ಚಾನ್ಸಲರ್ ಆಗಿ ನೇಮಕವಾಗಿದ್ದರು. ಆದರೆ, ವೈಸ್ ಚಾನ್ಸಲರ್ ಡಾ. ಅಜಿತ್ ರಾಣಡೆ ವಜಾಗೊಂಡ ವಿವಾದಗಳ ನಡುವೆ ದೇವ್ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆ ಸೂಪರ್ ಹಿಟ್; 6 ತಿಂಗಳಲ್ಲಿ 50 ಪರ್ಸೆಂಟ್ ಹೆಚ್ಚಾದ ಗೃಹ ಸೋಲಾರ್ ವಿದ್ಯುತ್; ಸ್ಕೀಮ್ ಪಡೆಯುವುದು ಹೇಗೆ?
ವಿವೇಕ್ ದೇಬ್ರಾಯ್ ಅವರು ಅರ್ಥಶಾಸ್ತ್ರದಲ್ಲಷ್ಟೇ ಅಲ್ಲ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಗಮನೀಯವೆನಿಸುವ ಕೊಡುಗೆ ನೀಡಿದ್ದಾರೆ. ಆರ್ಥಿಕತೆಗೆ ಸಂಬಂಧಿಸಿದ ಹಲವು ಪುಸ್ತಕ ಹಾಗೂ ಲೇಖನಗಳನ್ನು ಬರೆದಿದ್ದಾರೆ. ಪ್ರಾಚೀನ ಭಾರತೀಯ ಶಾಸ್ತ್ರಗಳ ಪಠ್ಯಗಳನ್ನು ಆಂಗ್ಲ ಭಾಷೆಗೆ ತರ್ಜಿಮೆ ಮಾಡಿದ್ದಾರೆ. ರಾಮಾಯಣ, ಮಹಾಭಾರತ, ಪುರಾಣಗಳನ್ನು ಅವರು ಇಂಗ್ಲೀಷ್ಗೆ ಭಾಷಾಂತರಿಸಿದ್ದಾರೆ. ಇದರಲ್ಲಿ ಅವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರ್ಪಡೆಯಾಗಿದೆ.
ಬಿಬೇಕ್ ದೇಬ್ರಾಯ್ ಅವರು 50 ವರ್ಷ ವಯಸ್ಸಿನಲ್ಲಿ ಸಂಸ್ಕೃತ ಕಲಿತು, ಪ್ರಾಚೀನ ಪಠ್ಯಗಳನ್ನು ಇಂಗ್ಲೀಷ್ಗೆ ತರ್ಜಿಮೆ ಮಾಡಿದ್ದರು. ಎಲ್ಲಾ ಮಹಾಪುರಾಣಗಳನ್ನು ಭಾಷಾಂತರಿಸುವ ಇರಾದೆಯಲ್ಲಿ ಅವರಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Fri, 1 November 24