
ಬೆಂಗಳೂರು, ಸೆಪ್ಟೆಂಬರ್ 12: ಹೆಚ್ಚು ಬಳಕೆಯ ಔಷಧಗಳನ್ನು ಅಗ್ಗದ ಬೆಲೆಗೆ ಮಾರಲಾಗುವ ಜನೌಷಧಿ ಕೇಂದ್ರಗಳ (Jan Aushadhi Kendra) ಸ್ಥಾಪನೆಗೆ ಇದ್ದ ಕೆಲ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದೆ. ಬೆಂಗಳೂರು ಸೇರಿದಂತೆ ಏಳು ಮೆಟ್ರೋಪೊಲಿಟನ್ ನಗರಗಳು ಹಾಗೂ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಈ ನಿಯಮ ಸಡಿಲಿಕೆ ಮಾಡಲಾಗಿದೆ. ನ್ಯೂಸ್18 ವರದಿ ಪ್ರಕಾರ ಈ ನಗರಗಳಲ್ಲಿ ಎರಡು ಜನೌಷಧಿ ಕೇಂದ್ರಗಳ ನಡುವೆ ಕನಿಷ್ಠ ಒಂದು ಕಿಮೀ ಅಂತರ ಇರಬೇಕು ಎನ್ನುವ ನಿಯಮವನ್ನು ತೆಗೆಯಲಾಗಿದೆ.
ಎರಡು ಜನೌಷಧಿ ಕೇಂದ್ರಗಳ ಮಧ್ಯೆ ಯಾವುದೇ ಅಂತರ ಇರುವ ಅವಶ್ಯಕತೆ ಇಲ್ಲವಾದರೂ, ಎರಡು ವರ್ಷ ಪೂರೈಸದ ಜನೌಷಧಿ ಕೇಂದ್ರದಿಂದ 1 ಕಿಮೀ ಅಂತರದೊಳಗೆ ಮತ್ತೊಂದನ್ನು ಸ್ಥಾಪಿಸುವಂತಿಲ್ಲ. ಈ ಒಂದು ಷರತ್ತನ್ನು ಮಾತ್ರ ಹಾಕಲಾಗಿದೆ.
ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧದಿಂದ ಹೆಚ್ಚು ಲಾಭ ಮಾಡುತ್ತಿರೋದು ಭಾರತವಲ್ಲ, ಚೀನಾವಲ್ಲ; ಅಮೆರಿಕಕ್ಕೆ ಹಣದ ಹೊಳೆ?
ಎಲ್ಲಾ ಏಳು ಮೆಟ್ರೋಪೊಲಿಟನ್ ನಗರಗಳು, ಹಾಗೂ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 46 ನಗರ ಮತ್ತು ಪಟ್ಟಣಗಳಲ್ಲಿ ಈ ನಿಯಮ ಸಡಿಲಿಕೆ ಮಾಡಲಾಗಿದೆ. ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಅಹ್ಮದಾಬಾದ್ ಮೆಟ್ರೋಪೊಲಿಟನ್ ನಗರಗಳಾಗಿವೆ.
ಪುಣೆ, ಕೊಚ್ಚಿ, ಕಾನಪುರ್, ಲಕ್ನೋ, ಇಂದೋರ್, ಕೊಯಮತ್ತೂರು ಮೊದಲಾದ ನಗರಗಳು 2011ರ ಸೆನ್ಸಸ್ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿವೆ. ಈ 46 ನಗರ ಮತ್ತು ಪಟ್ಟಣಗಳಲ್ಲೂ ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಹೆಚ್ಚು ಸ್ವಾತಂತ್ರ್ಯ ನೀಡಲಾಗಿದೆ.
ಇನ್ನುಳಿದ ಪ್ರದೇಶಗಳಲ್ಲಿ ಜನೌಷಧಿ ಕೇಂದ್ರಗಳ ನಡುವೆ ಎಂದಿನಂತೆ ಒಂದು ಕಿಮೀ ಅಂತರ ಇರಬೇಕೆನ್ನುವ ನಿಯಮ ಮುಂದುವರಿಯುತ್ತದೆ. ಜನೌಷಧಿ ಕೇಂದ್ರಗಳ ವ್ಯಾಪ್ತಿ ಹೆಚ್ಚಿಸಲು ಈ ನಿಯಮ ಸಡಿಲಿಕೆ ಮಾಡಲಾಗಿದೆ.
ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಪಡೆಯಲು ಎಷ್ಟು ಹೂಡಿಕೆ ಅಗತ್ಯ?
ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಅಡಿಯಲ್ಲಿ ನಡೆಸಲಾಗುವ ಈ ಸ್ಕೀಮ್ ಅನ್ನು ನಿರ್ವಹಿಸುವ ಪಿಎಂಬಿಐ (ಫಾರ್ಮಾಸ್ಯೂಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೋ) ಪ್ರಕಟಿಸಿದ ಆಂತರಿಕ ದಾಖಲೆಯಲ್ಲಿ ಈ ಕ್ರಮವನ್ನು ಸೂಚಿಸಲಾಗಿದೆ.
ಭಾರತದಾದ್ಯಂತ ಒಟ್ಟು 11,000ಕ್ಕೂ ಅಧಿಕ ಜನೌಷಧಿ ಕೇಂದ್ರಗಳಿವೆ. ಇಲ್ಲಿ ಜೆನರಿಕ್ ಔಷಧಿಗಳನ್ನು ಕಡಿಮೆ ಬೆಲೆಗೆ ಮಾರಲಾಗುತ್ತದೆ. ಬೇರೆ ಬ್ರ್ಯಾಂಡ್ ಔಷಧಕ್ಕೂ ಈ ಜನರಿಕ್ ಔಷಧಕ್ಕೂ ಅರ್ಧಕರ್ಧ ಬೆಲೆ ವ್ಯತ್ಯಾಸ ಕಾಣಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ