ನವದೆಹಲಿ, ಸೆಪ್ಟೆಂಬರ್ 26: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವರ್ಷಕ್ಕೆ ಮೂರು ಬಾರಿ ನೀಡಲಾಗುವ ಕಂತಿನ ಹಣ ಅಕ್ಟೋಬರ್ 5ಕ್ಕೆ ಬರಲಿದೆ. ಈವರೆಗೆ 17 ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅ. 5ಕ್ಕೆ 18ನೇ ಕಂತಿನ ಹಣ ರಿಲೀಸ್ ಆಗಲಿದೆ. ಜೂನ್ 18ಕ್ಕೆ 17ನೇ ಕಂತಿನ ಹಣ ಬಿಡುಗಡೆ ಆಗಿತ್ತು. 2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಎಲ್ಲಾ ನೊಂದಾಯಿತ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ಹಣವನ್ನು ಸರ್ಕಾರ ಸಹಾಯಧನವಾಗಿ ನೀಡುತ್ತದೆ. ಪ್ರತೀ ಕಂತಿನಲ್ಲೂ ರೈತರಿಗೆ 2,000 ರೂ ಸಿಗುತ್ತದೆ.
ಎರಡು ಹೆಕ್ಟೇರ್ ಅಥವಾ ಐದು ಎಕರೆಯೊಳಗಿನ ಜಮೀನು ಹೊಂದಿರುವ ರೈತರು ಈ ಸ್ಕೀಮ್ಗೆ ಅರ್ಹರಾಗಿರುತ್ತಾರೆ. ಸಣ್ಣ ರೈತರಿಗೆ ವ್ಯವಸಾಯಕ್ಕೆ ಸಹಾಯಾಗಲೆಂದು ಸರ್ಕಾರ ಈ ಸ್ಕೀಮ್ ಆರಂಭಿಸಿದೆ. ಸರ್ಕಾರಿ ಸೇವೆಯಲ್ಲಿರುವವರು, ವೈದ್ಯ, ವಕೀಲ ಇತ್ಯಾದಿ ವೃತ್ತಿಪರ ಕೆಲಸದವರು, ಶಾಸಕರು, ಸಂಸದರು ಇತ್ಯಾದಿ ಜನಪ್ರತಿನಿಧಿಗಳು, ತೆರಿಗೆ ಪಾವತಿಸುತ್ತಿರುವವರು ಹಾಗೂ ಅವರು ಇರುವ ಕುಟುಂಬದವರು ಪಿಎಂ ಕಿಸಾನ್ ಯೋಜನೆ ಪಡೆಯಲು ಅರ್ಹತೆ ಹೊಂದಿರುವುದಿಲ್ಲ. ಇಲ್ಲಿಯವರೆಗೆ ಸುಮಾರು 10 ಕೋಟಿ ರೈತರು ಸ್ಕೀಮ್ಗೆ ನೊಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಮೇಕ್ ಇನ್ ಇಂಡಿಯಾ’ ಕೈಂಕರ್ಯಕ್ಕೆ 10 ವರ್ಷ; ನರೇಂದ್ರ ಮೋದಿ ಪಟ್ಟಿ ಮಾಡಿದ ಸಾಧನೆಗಳ ವಿವರ
ಯೋಜನೆಗೆ ನೊಂದಾಯಿಸಲು ಆಫ್ಲೈನ್ ಮತ್ತು ಆನ್ಲೈನ್ ಎರಡೂ ಮಾರ್ಗಗಳಲ್ಲಿ ಅವಕಾಶ ಇದೆ. ನಿಮ್ಮ ಗ್ರಾಮದ ಸಮೀಪ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಲ್ಲಿ ಖುದ್ದಾಗಿ ನೊಂದಾಯಿಸಿಕೊಳ್ಳಬಹುದು. ಆಧಾರ್ ಕಾರ್ಡ್, ವೋಟರ್ ಐಡಿ, ಪಹಣಿ ಸರ್ಟಿಫಿಕೇಟ್, ಬ್ಯಾಂಕ್ ಖಾತೆ ಪ್ರತಿ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕಾಗಬಹುದು.
ಆನ್ಲೈನ್ನಲ್ಲಿ ಮಾಡಬೇಕೆಂದರೆ ಪಿಎಂ ಕಿಸಾನ್ ಸ್ಕೀಮ್ನ ವೆಬ್ಸೈಟ್ಗೆ ಹೋಗಬೇಕು. ಅದರ ವಿಳಾಸ: pmkisan.gov.in/
ಇಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಅನ್ನು ಕಾಣಬಹುದು. ಅಲ್ಲಿ ಕ್ರಮಾವಳಿಗಳನ್ನು ಅನುಸರಿಸಿ ಯೋಜನೆಗೆ ನೊಂದಾಯಿಸಿಕೊಳ್ಳಲು ಸಾಧ್ಯವಿದೆ.
ನೀವು ಈಗಾಗಲೇ ಸ್ಕೀಮ್ಗೆ ನೊಂದಾಯಿಸಿದ್ದು ಇನ್ನೂ ಕೂಡ ಕಂತಿನ ಹಣ ಬಂದಿಲ್ಲ ಎಂದಿದ್ದರೆ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅದನ್ನು ಆನ್ಲೈನ್ನಲ್ಲೇ ಮಾಡಬಹುದು.
ಇದನ್ನೂ ಓದಿ: ದಯವಿಟ್ಟು… ಭಾರತ ಮೂಲದ ವಿನೋದ್ ಖೋಸ್ಲಾ ಬಳಿ ಕ್ಷಮೆ ಯಾಚಿಸಿದ ಇಲಾನ್ ಮಸ್ಕ್; ಕ್ಯಾಲಿಫೋರ್ನಿಯಾ ಬೀಚ್ವೊಂದರ ಕಥೆ ಇದು
ಮೇಲೆ ತಿಳಿಸಿದ ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ ಅಲ್ಲಿ ಫಾರ್ಮರ್ಸ್ ಕಾರ್ನರ್ನಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ದುಕೊಂಡು ಸರ್ಚ್ ಕೊಡಿ. ಆ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಕಾಣಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ