ದಯವಿಟ್ಟು… ಭಾರತ ಮೂಲದ ವಿನೋದ್ ಖೋಸ್ಲಾ ಬಳಿ ಕ್ಷಮೆ ಯಾಚಿಸಿದ ಇಲಾನ್ ಮಸ್ಕ್; ಕ್ಯಾಲಿಫೋರ್ನಿಯಾ ಬೀಚ್ವೊಂದರ ಕಥೆ ಇದು
Elon Musk apologises to Vinod Khosla: ಅಮೆರಿಕದ ಕ್ಯಾಲಿಫೋರ್ನಿಯಾದ ಮಾರ್ಟಿನ್ಸ್ ಬೀಚ್ನಲ್ಲಿ ವಿನೋದ್ ಖೋಸ್ಲಾ ಪ್ರಾಪರ್ಟಿ ವಿವಾದ ಇದೆ. ಈ ಸಂಬಂಧ ಇಲಾನ್ ಮಸ್ಕ್ ತಮ್ಮ ಎಕ್ಸ್ ಅಕೌಂಟ್ನಿಂದ ಒಂದು ಇಮೇಜ್ ಪೋಸ್ಟ್ ಮಾಡಿದ್ದರು. ಇದರಲ್ಲಿ ಬೀಚ್ನಲ್ಲಿ ಸಾಮಾನ್ಯರಿಗೆ ಪ್ರವೇಶ ಇಲ್ಲ ಎಂದು ವಿನೋದ್ ಖೋಸ್ಲಾ ಬೋರ್ಡ್ ಹಾಕಿದಂತಿತ್ತು ಈ ಫೋಟೋ. ಈ ವಿಚಾರವಾಗಿ ಇಲಾನ್ ಮಸ್ಕ್ ಅವರು ಖೋಸ್ಲಾ ಬಳಿ ಕ್ಷಮೆ ಯಾಚಿಸಿದ್ದಾರೆ.
ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 25: ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿರುವ ಇಲಾನ್ ಮಸ್ಕ್ ಅವರು ಭಾರತ ಮೂಲದ ಅಮೆರಿಕನ್ ಉದ್ಯಮಿ ವಿನೋದ್ ಖೋಸ್ಲಾ ಬಳಿ ಕ್ಷಮೆ ಯಾಚಿಸಿದ್ದಾರೆ. ಕ್ಯಾಲಿಫೋರ್ನಿಯಾ ಬೀಚ್ನಲ್ಲಿ ಸಾಮಾನ್ಯ ಜನರ ಪ್ರವೇಶ ನಿರ್ಬಂಧಿಸಿ ವಿನೋದ್ ಖೋಸ್ಲಾ ಬೋರ್ಡ್ ಹಾಕಿದ್ದಾರೆಂದು ಬಿಂಬಿಸುವ ಫೋಟೋವೊಂದನ್ನು ಇಲಾನ್ ಮಸ್ಕ್ ತಮ್ಮ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಸ್ಪಂದಿಸಿದ ವಿನೋದ್ ಖೋಸ್ಲಾ, ಆ ಬೋರ್ಡ್ ತಾನು ಹಾಕಿಲ್ಲ. ಈ ತಪ್ಪಿಗೆ ತಾವು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್ ಅವರು ಕ್ಷಮೆ ಕೋರಿದ್ದಾರೆ.
‘ಸುಳ್ಳುಗಳನ್ನು ಹರಡುತ್ತಿರುವ ನೀವು ನನ್ನ ಬಳಿ ಕ್ಷಮೆ ಯಾಚಿಸಬೇಕಾಗಿದೆ. ವಂಚನೀಯ ಎನಿಸುವ ಫೋಟೋ ಹಾಕಿದ್ದಕ್ಕೆ ನಿಮ್ಮ ಪೋಸ್ಟ್ಗೆ ಕಮ್ಯೂನಿಟಿ ಕಮೆಂಟ್ ಅವಶ್ಯಕತೆ ಇದೆ. ಇಂಥ ಯಾವುದೇ ಸೈನ್ ಬೋರ್ಡ್ ಅನ್ನು ನಾನು ಹಾಕಿಲ್ಲ. ಎಐನಿಂದ ಜನರೇಟ್ ಆಗಿರುವ ಇಮೇಜ್ ಇದೆಂದು ಭಾವಿಸಿದ್ದೇನೆ. ನೀವೂ ಅದನ್ನು ಪರಿಶೀಲಿಸಬಹುದು,’ ಎಂದು ವಿನೋದ್ ಖೋಸ್ಲಾ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಊಟದ ಜೊತೆಗೆ ಉಪ್ಪಿನಕಾಯಿ ಇದ್ದಂತೆ; ಹೂಡಿಕೆದಾರರಿಗೆ 80:20 ಸೂತ್ರ ಕೊಟ್ಟ ರಾಧಿಕಾ ಗುಪ್ತ
‘ನೀವು ಪಬ್ಲಿಕ್ ಬೀಚ್ನಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಒಂದು ಸೈನ್ಬೋರ್ಡ್ ಮಾಡಿದೆ. ಅದು ನಿಜಕ್ಕೂ ತಪ್ಪಾಯಿತು. ದಯವಿಟ್ಟು ಕ್ಷಮಿಸಿ’ ಎಂದು ಇಲಾನ್ ಮಸ್ಕ್ ಪ್ರತಿಕ್ರಿಯಿಸಿದರು. ಆದರೆ, ತಾವು ಈ ವಿಚಾರದಲ್ಲಿ ವಿನೋದ್ ಖೋಸ್ಲಾಗೆ ತಿವಿಯಬೇಕಿದ್ದ ಅಂಶವನ್ನು ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದು ಹೌದು.
‘ನೋ ಪ್ಲೆಬ್ಸ್ ಅಲೋಡ್… ಪ್ರಾಪರ್ಟಿ ಆಫ್ ವಿನೋದ್ ಖೋಸ್ಲಾ’ ಎಂದಿತ್ತು ಇಲಾನ್ ಮಸ್ಕ್ ಪೋಸ್ಟ್ ಮಾಡಿದ ಸೈನ್ ಬೋರ್ಡ್ನಲ್ಲಿ. ಇಲ್ಲಿ ಪ್ಲೆಬ್ಸ್ ಎಂದರೆ ಸಾಮಾನ್ಯ ಜನರು.
You owe me an apology for spreading falsehoods. I think this post of yours needs a community comment for being a fraudulent photo. I have never put up this sign or anything even remotely like this. I presume it is AI generated but you can verify that. It will help X if we can… https://t.co/5PVE8uxDpH
— Vinod Khosla (@vkhosla) September 22, 2024
ಏನಿದು ಕ್ಯಾಲಿಫೋರ್ನಿಯಾ ಬೀಚ್ನಲ್ಲಿನ ಸೈನ್ ಬೋರ್ಡ್?
ಅಮೆರಿಕದ ಕ್ಯಾಲಿಫೋರ್ನಿಯಾದ ಮಾರ್ಟಿನ್ಸ್ ಬೀಚ್ನಲ್ಲಿ ಇದ್ದ ಪಾರ್ಕಿಂಗ್ ಜಾಗವೊಂದನ್ನು ವಿನೋದ್ ಖೋಸ್ಲಾ 2008ರಲ್ಲಿ ಖರೀದಿಸಿದ್ದರು. ಬೀಚ್ನಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ. ಆದರೆ, ವಿನೋದ್ ಖೋಸ್ಲಾ ತಾನು ಖರೀದಿಸಿದ ಪ್ಲಾಟ್ಗೆ ಸಾರ್ವಜನಿಕ ಪ್ರವೇಶವನ್ನು ವಿರೋಧಿಸುತ್ತಿದ್ದಾರೆ. ಹದಿನಾರು ವರ್ಷಗಳಿಂದಲೂ ಅವರು ಮತ್ತು ರಾಜ್ಯ ಸರ್ಕಾರದ ಮಧ್ಯೆ ಈ ಬಗ್ಗೆ ವ್ಯಾಜ್ಯ ನಡೆಯುತ್ತಲೇ ಬಂದಿದೆ. ಇನ್ನೂ ಅದು ಇತ್ಯರ್ಥ ಆಗಿಲ್ಲ.
ಇಲಾನ್ ಮಸ್ಕ್ ವ್ಯಂಗ್ಯ ಮಾಡಿದ್ದು ಯಾಕೆ?
ವಿನೋದ್ ಖೋಸ್ಲಾ ಮತ್ತು ಇಲಾನ್ ಮಸ್ಕ್ ಮಧ್ಯೆ ಹಲವು ವಿಚಾರಗಳಲ್ಲಿ ಅಭಿಪ್ರಾಯಭೇದಗಳಿವೆ. ವಿನೋದ್ ಖೋಸ್ಲಾ ಡೆಮಾಕ್ರಾಟ್ ಪಕ್ಷದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಒಬಾಮ, ಕ್ಲಿಂಟನ್, ಬೈಡನ್ ಮತ್ತು ಈಗ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುತ್ತಿದ್ದಾರೆ. ಇನ್ನೊಂದೆಡೆ, ಇಲಾನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದ್ದಾರೆ.
ಇದನ್ನೂ ಓದಿ: ಆಲೂಗಡ್ಡೆಯಿಂದ ಎಥನಾಲ್ ಇಂಧನ; ಸಿಪಿಆರ್ಐನಿಂದ ಸದ್ಯದಲ್ಲೇ ಪ್ರಾಯೋಗಿಕ ಘಟಕ
ರಾಜಕೀಯ ವಿಚಾರವೊಂದೇ ಅಲ್ಲ, ಅಮೆರಿಕಕ್ಕೆ ವಲಸಿಗರು ಬರುತ್ತಿರುವ ವಿಚಾರ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಯಾವ ದಿಕ್ಕಿನಲ್ಲಿ ಅಭಿವೃದ್ಧಿಯಾಗಬೇಕು ಎಂಬಿತ್ಯಾದಿ ಕೆಲ ಪ್ರಮುಖ ಸಂಗತಿಗಳಲ್ಲಿ ಇಬ್ಬರ ಧೋರಣೆಗಳಲ್ಲಿ ವ್ಯತ್ಯಾಸಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ