ಚಿನ್ನದ ಬೆಲೆ ಗಗನದತ್ತ; ಹೊಸ ಮೈಲಿಗಲ್ಲುಗಳನ್ನು ದಾಟಲು ಕಾರಣವಾಗಿರುವ ವಿದ್ಯಮಾನಗಳೇನು?
Reasons for rise in gold rates: ಚಿನ್ನದ ಬೆಲೆ ಹೊಸ ಹೊಸ ಮೈಲಿಗಲ್ಲು ದಾಟುತ್ತಿದೆ. ಬೆಳ್ಳಿ ಬೆಲೆಯೂ ಕೂಡ ದಾಖಲೆ ಮಟ್ಟಕ್ಕೆ ಏರುತ್ತಿದೆ. ಇಸ್ರೇಲ್ ಹೆಜ್ಬೊಲ್ಲಾ ಸಂಘರ್ಷದಿಂದ ಹಿಡಿದು, ಸೆಂಟ್ರಲ್ ಬ್ಯಾಂಕ್ ಬಡ್ಡಿದರ ಕಡಿತದವರೆಗೆ ಕೆಲ ಪ್ರಮುಖ ಕಾರಣಗಳಿಂದ ಚಿನ್ನ, ಬೆಳ್ಳಿ ಬೆಲೆ ಏರುತ್ತಿರಬಹುದು ಎಂದು ತಜ್ಞರು ಹೇಳುತ್ತಾರೆ.
ನವದೆಹಲಿ, ಸೆಪ್ಟೆಂಬರ್ 25: ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಭರ್ಜರಿಯಾಗಿ ಏರಿಕೆ ಆಗುತ್ತಿದೆ. ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಇಳಿಕೆ ಮಾಡಿದಾಗ ಚಿನ್ನದ ಬೆಲೆ ಹೆಚ್ಚಳ ಆಗಬಹುದು ಎಂದು ಭಾವಿಸಲಾಗಿತ್ತಾದರೂ ಈ ಪರಿ ವೇಗವಾಗಿ ಬೆಳೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಭಾರತದಲ್ಲಿ 22 ಕ್ಯಾರಟ್ನ ಆಭರಣ ಚಿನ್ನ ಮೊದಲ ಬಾರಿಗೆ 7,000 ರೂ ಗಡಿ ದಾಟಿದೆ. 24 ಕ್ಯಾರಟ್ನ ಅಪರಂಜಿ ಚಿನ್ನ 7,700 ರೂ ಮೈಲಿಗಲ್ಲು ಮುಟ್ಟಿದೆ. ಚಿನ್ನ ಅಮೂಲ್ಯ ಹಾಗೂ ಸೀಮಿತ ಸಂಪತ್ತಾದ್ದರಿಂದ ಬೇಡಿಕೆ ಇದ್ದೇ ಇರುತ್ತದೆ. ಕ್ರಮೇಣವಾಗಿ ಬೆಲೆ ಹೆಚ್ಚಳ ಆಗುವುದು ಸಹಜ. ಆದರೆ, ಈಗ ಭಾರೀ ವೇಗದಲ್ಲಿ ಬೆಲೆ ಹೆಚ್ಚಳ ಆಗುತ್ತಿರುವುದಕ್ಕೆ ಬೇರೆ ಕಾರಣಗಳಿರಬೇಕು. ತಜ್ಞರು ಒಂದಷ್ಟು ಕಾರಣಗಳನ್ನಂತೂ ನೀಡಿದ್ದಾರೆ.
ಚಿನ್ನ ಆಪತ್ಕಾಲಕ್ಕೆ ಆಗುವ ಆಸ್ತಿ. ಕಾಲ ಕೆಟ್ಟು ಹೋಗುತ್ತಿದೆ ಎಂದು ಭಾವಿಸುವ ಸಂದರ್ಭದಲ್ಲಿ ಜನರು ತಮ್ಮ ಹಣವನ್ನು ಚಿನ್ನದ ಮೇಲೆ ಹಾಕುತ್ತಾರೆ. ಇದು ಸಹಜ ಪ್ರವೃತ್ತಿ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಶುರುವಾಗಬಹುದು ಎನ್ನುವ ಭಯ ಕಾಡುತ್ತಿದೆ. ಇಸ್ರೇಲ್ ಮತ್ತು ಹಿಜ್ಬೊಲ್ಲಾ ಮಧ್ಯೆ ಪೂರ್ಣಪ್ರಮಾಣದಲ್ಲಿ ಯುದ್ಧ ಶುರುವಾದರೆ ಪಶ್ಚಿಮ ಏಷ್ಯಾ ಮತ್ತು ಮಧ್ಯಪ್ರಾಚ್ಯ ಭಾಗದಲ್ಲಿ ಸೂಕ್ಷ್ಮ ವಾತಾವರಣ ನೆಲಸುತ್ತದೆ. ಈ ಜಾಗತಿಕ ರಾಜಕೀಯ ಬಿಕ್ಕಟ್ಟಿನ ಸ್ಥಿತಿಯಲ್ಲಿ ಆರ್ಥಿಕತೆ ಮಂದಗೊಳ್ಳುತ್ತದೆ. ಇದು ಹೂಡಿಕೆದಾರರನ್ನು ಚಿನ್ನದತ್ತ ಆಕರ್ಷಿಸುತ್ತಿರಬಹುದು. ಇದರಿಂದ ಚಿನ್ನದ ಬೆಲೆ ಹೆಚ್ಚುತ್ತಿರಬಹುದು ಎಂಬುದು ಕೆಲವರು ಕಾರಣ ನೀಡಿದ್ದಾರೆ.
ಇದನ್ನೂ ಓದಿ: ಏರ್ಟೆಲ್ ಬಳಕೆದಾರರಿಗೆ ಸಖತ್ ಆಫರ್; ತಿಂಗಳಿಗೆ ಸಾವಿರ ರೂಗೂ ಹೆಚ್ಚು ಕ್ಯಾಷ್ಬ್ಯಾಕ್ ಪಡೆಯುವುದು ಹೇಗೆ?
ಹಾಗೆಯೇ, ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಕಡಿಮೆಗೊಳಿಸಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ಕೂಡ ಬಡ್ಡಿದರ ಕಡಿಮೆಗೊಳಿಸಿದೆ. ಇತರ ಕೆಲ ಪ್ರಮುಖ ಸೆಂಟ್ರಲ್ ಬ್ಯಾಂಕುಗಳೂ ಕೂಡ ಬಡ್ಡಿದರ ಇಳಿಸಿವೆ. ಇವು ಕೂಡ ಚಿನ್ನ ಮತ್ತು ಬೆಳ್ಳಿ ವಲಯಕ್ಕೆ ಪುಷ್ಟಿ ಕೊಟ್ಟಿವೆ. ಜನರ ಬಳಿ ಹೆಚ್ಚು ಹಣ ಸಿಗುತ್ತಿರುವುದರಿಂದ ಚಿನ್ನ, ಬೆಳ್ಳಿಯತ್ತ ಹಣ ಹಾಕುತ್ತಿದ್ದಾರೆ. ಹೀಗಾಗಿ, ಬೆಲೆ ಏರುತ್ತಿರಬಹುದು ಎನ್ನುವ ಅಭಿಪ್ರಾಯ ಇದೆ.
ಚಿನ್ನ ಮಾತ್ರವಲ್ಲ ಬೆಳ್ಳಿಗೂ ಬೇಡಿಕೆ ಹೆಚ್ಚುತ್ತಿದೆ. ಚಿನ್ನದಷ್ಟು ಅಲ್ಲದಿದ್ದರೂ ಬೆಳ್ಳಿ ಬೆಲೆಯೂ ಗಮನಾರ್ಹವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಚೆನ್ನೈ ಮೊದಲಾದ ಕೆಲವೆಡೆ ಚಿನ್ನದ ಬೆಲೆ ಗ್ರಾಮ್ಗೆ 100 ರೂ ಗಡಿ ದಾಟಿ ಹೋಗಿದೆ. ಇದು ಬೆಳ್ಳಿಗೆ ಹೊಸ ಮೈಲಿಗಲ್ಲು.
ಚೀನಾದಲ್ಲಿ ಅಲ್ಲಿನ ಆರ್ಥಿಕತೆಗೆ ಪುಷ್ಟಿ ಕೊಡಲು ದೊಡ್ಡ ಪ್ರಮಾಣದಲ್ಲಿ ಉತ್ತೇಜಕ ಯೋಜನೆಗಳನ್ನು ಘೋಷಿಸಲಾಗಿದೆ. ಇದು ಬೆಳ್ಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ