
ನವದೆಹಲಿ, ಆಗಸ್ಟ್ 1: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan scheme) 20ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ನಾಳೆ, ಶನಿವಾರ (ಆಗಸ್ಟ್ 2) ಬಿಡುಗಡೆ ಮಾಡಲಿದೆ. ಉತ್ತರಪ್ರದೇಶದ ವಾರಾಣಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ 20ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. 9.7 ಕೋಟಿಗೂ ಅಧಿಕ ರೈತರ (farmers) ಖಾತೆಗಳಿಗೆ ಒಟ್ಟಾರೆ 20,500 ರೂ ಬಿಡುಗಡೆ ಆಗಲಿದೆ. ಪ್ರತೀ ರೈತರ ಖಾತೆಗೆ 2,000 ರೂ ಸಿಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2ರಂದು ಬೆಳಗ್ಗೆ 11 ಗಂಟೆಗೆ ಹಣ ಬಿಡುಗಡೆ ಮಾಡಲಿದ್ದಾರೆ. ವಾರಾಣಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ಗ್ರಾಮೀಣ ಭಾಗದ ವಿವಿಧೆಡೆ ಪ್ರಧಾನಿ ಭಾಷಣಗಳನ್ನು ಕೇಳಲು ವ್ಯವಸ್ಥೆ ಮಾಡಲಾಗಿದೆ.
2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಕೃಷಿಕರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 6,000 ರೂ ನೀಡುತ್ತದೆ. ವರ್ಷದಲ್ಲಿ ಮೂರು ಕಂತುಗಳಲ್ಲಿ ಈ ಹಣವನ್ನು ನೀಡಲಾಗುತ್ತದೆ. ಈವರೆಗೆ 19 ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಒಟ್ಟಾರೆ 3.69 ಲಕ್ಷ ಕೋಟಿ ರೂ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ನೊಂದಾಯಿತ ರೈತರಿದ್ದಾರೆ. ಈ ಪೈಕಿ ಇ-ಕೆವೈಸಿ ಮಾಡಿಕೊಳ್ಳದವರಿಗೆ ಹಣ ಸಿಕ್ಕೋದಿಲ್ಲ. ಈ ಸ್ಕೀಮ್ನಲ್ಲಿ ನೊಂದಾಯಿತರಾದ ಪ್ರತಿಯೊಬ್ಬರೂ ಕೂಡ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದು. ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಈ ಪಟ್ಟಿಯನ್ನು ಕಾಣಬಹುದು.
ಇದನ್ನೂ ಓದಿ: LPG Cylinder Price: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ
ಪಟ್ಟಿಯಲ್ಲಿ ಹೆಸರಿದ್ದೂ ಬ್ಯಾಂಕ್ ಖಾತೆಗೆ ಹಣ ಬರದೇ ಹೋಗುವ ಸಾಧ್ಯತೆಯೂ ಇರುತ್ತದೆ. ಹಾಗೇನಾದರೂ ಆಗಿದ್ದಲ್ಲಿ ಇಕೆವೈಸಿ ಆಗಿಲ್ಲದೇ ಇರುವುದು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದೇ ಇರುವುದು ಇತ್ಯಾದಿ ಕಾರಣ ಇರಬಹುದು. ನಿಮ್ಮ ಸಮೀಪದ ರೈತರ ಸಂಪರ್ಕ ಕೇಂದ್ರಕ್ಕೆ ಹೋಗಿ ವಿಚಾರಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ