ಪಿಎಂ ಕಿಸಾನ್ ಯೋಜನೆ ಹಣ 6,000ದಿಂದ 8,000 ರೂಗೆ ಏರಿಸಲಾಗುತ್ತದಾ? ಸಂಸತ್​ನಲ್ಲಿ ಸ್ಪಷ್ಟನೆ ಕೊಟ್ಟ ಕೃಷಿ ಸಚಿವಾಲಯ

|

Updated on: Feb 06, 2024 | 3:46 PM

PM Kisan Scheme: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವರ್ಷಕ್ಕೆ ನೀಡಲಾಗುವ 6,000 ರೂ ಹಣದ ಮೊತ್ತ 8,000 ರೂಗೆ ಏರಿಕೆ ಆಗುತ್ತಿಲ್ಲ. ಯೋಜನೆ ಹಣ ಹೆಚ್ಚಿಸುವ ಯಾವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಂಸತ್​ನಲ್ಲಿ ಕೃಷಿ ಸಚಿವಾಲಯ ಹೇಳಿದೆ. ಪಿಎಂ ಕಿಸಾನ್ ಯೋಜನೆಯಲ್ಲಿ 2019ರಿಂದ ಇಲ್ಲಿಯವರೆಗೆ ತಲಾ 2,000 ರೂಗಳ 15 ಕಂತುಗಳನ್ನು ಸರ್ಕಾರ ರೈತರಿಗೆ ಕೊಟ್ಟಿದೆ.

ಪಿಎಂ ಕಿಸಾನ್ ಯೋಜನೆ ಹಣ 6,000ದಿಂದ 8,000 ರೂಗೆ ಏರಿಸಲಾಗುತ್ತದಾ? ಸಂಸತ್​ನಲ್ಲಿ ಸ್ಪಷ್ಟನೆ ಕೊಟ್ಟ ಕೃಷಿ ಸಚಿವಾಲಯ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ
Follow us on

ನವದೆಹಲಿ, ಫೆಬ್ರುವರಿ 6: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Scheme) ರೈತರಿಗೆ ವರ್ಷಕ್ಕೆ ನೀಡಲಾಗುವ ಹಣದ ಮೊತ್ತವನ್ನು ಸರ್ಕಾರ ಏರಿಸುತ್ತಿಲ್ಲ. ವರ್ಷದ ಮೊತ್ತವನ್ನು ಅರು ಸಾವಿರ ರೂನಿಂದ ಎಂಟು ಸಾವಿರ ರೂಗೆ ಏರಿಸಲು ಸರ್ಕಾರ ನಿರ್ಧರಿಸಿದೆ ಎನ್ನುವಂತಹ ಸುದ್ದಿ ಇತ್ತು. ಆ ನಿರೀಕ್ಷೆ ಹುಸಿಯಾಗಿದೆ. ಇಂತಹ ಯಾವುದೇ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಕೇಂದ್ರ ಕೃಷಿ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು (ಫೆ. 6) ಸಂಸತ್​ಗೆ ತಿಳಿಸಿದೆ.

2019ರ ಮಧ್ಯಂತರ ಬಜೆಟ್​ನಲ್ಲಿ ಪಿಎಂ ಕಿಸಾನ್ ಯೋಜನೆಗೆ ಚಾಲನೆ ಕೊಡಲಾಗಿತ್ತು. ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂ ಹಣವನ್ನು ಸರ್ಕಾರ ಕೊಡುತ್ತದೆ. ಈಗ ಒಂದು ಹೆಚ್ಚುವರಿ ಕಂತು ಸೇರಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. ಅಂದರೆ ವರ್ಷಕ್ಕೆ ಎಂಟು ಸಾವಿರ ರೂ ನೀಡಲಾಗುತ್ತದೆ. ಇದು 2024ರ ಮಧ್ಯಂತರ ಬಜೆಟ್​ನಲ್ಲಿ ಘೋಷಣೆ ಆಗಬಹುದು ಎನ್ನುವಂತಹ ಸುದ್ದಿ ಇತ್ತು. ಆದರೆ, ಇಂಟೆರಿಮ್ ಬಜೆಟ್​ನಲ್ಲಿ ಇದರ ಘೋಷಣೆ ಆಗಿಲ್ಲ. ಈಗ ಕೃಷಿ ಸಚಿವಾಲಯ ಈ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆಯಾ? ತೆರಿಗೆ ಹಂಚಿಕೆ ವಿಧಾನ ಹೇಗಿದೆ? ಇಲ್ಲಿದೆ ವಿವರ

2019ರಿಂದ ಇಲ್ಲಿಯವರೆಗೆ ಸರ್ಕಾರ ತಲಾ 2,000 ರೂಗಳ 15 ಕಂತುಗಳ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ. ನವೆಂಬರ್ 15ಕ್ಕೆ 15ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಈಗ 16ನೇ ಕಂತಿನ ಹಣ 2024ರ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಬಹುದು ಎನ್ನಲಾಗಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಇಲ್ಲಿಯವರೆಗೆ 11 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಸದ್ಯ ಫಲಾನುಭವಿಗಳ ಸಂಖ್ಯೆ 8ರಿಂದ 9 ಕೋಟಿಯಷ್ಟಿರಬಹುದು.

ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು?

ಸ್ವಂತ ಜಮೀನು ಹೊಂದಿರುವವರು ಈ ಯೋಜನೆಗೆ ನೊಂದಾಯಿಸಲು ಅರ್ಹರಿರುತ್ತಾರೆ. ಆದರೆ, ಶಾಸಕರು, ಸಂಸದರು ಇತ್ಯಾದಿ ಜನಪ್ರತಿನಿಧಿಗಳಾಗಿರಬಾರದು. ಸರ್ಕಾರಿ ನೌಕರಿಯಲ್ಲಿ ಇರಬಾರದು. ಅಥವಾ ನಿವೃತ್ತಿ ಹೊಂದಿ ಪಿಂಚಣಿ ಪಡೆಯುತ್ತಿರಬಾರದು. ಆದಾಯ ತೆರಿಗೆ ಪಾವತಿಸುವಷ್ಟು ಆದಾಯವಂತರಾಗಿರಬಾರದು. ವೈದ್ಯ, ವಕೀಲ ಇತ್ಯಾದಿ ವೃತ್ತಿಪರರಾಗಿರಬಾರದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ