ಕೃಷಿಕರ ಅಭ್ಯುದಯಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪಿಎಂ ಕಿಸಾನ್ ಯೋಜನೆ, ಕೃಷಿ ಹೊಂಡ, ನರೇಗಾ ಇತ್ಯಾದಿ ಯೋಜನೆಗಳು ರೈತರಿಗೆ ವರದಾಯಕವೆನಿಸಿವೆ. ಇದೀಗ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಸೋಲಾರ್ ಪೆನಲ್ ಯೋಜನೆ (PM Solar Panel Yojana) ಜಾರಿ ತಂದಿದ್ದು, ಇದು ಕೃಷಿಕರಿಗೆ ಒಳ್ಳೆಯ ಆದಾಯ ತರುವ ಮಾರ್ಗವಾಗಿ ಮಾರ್ಪಡಬಹುದು. ನಮ್ಮ ದೇಶಕ್ಕೆ ವಿದ್ಯುತ್ ಮತ್ತು ಇಂಧನ ಬಹಳ ಅಗತ್ಯ ಇರುವ ಶಕ್ತಿಗಳಾಗಿವೆ. ವಿದ್ಯುತ್ ಕೊರತೆ ನೀಗಿಸಲು ಸರ್ಕಾರ ಹರಸಾಹಸ ನಡೆಸುತ್ತದೆ. ಬೇಸಿಗೆ ಕಾಲದಲ್ಲಿ ದೇಶದ ಬಹುತೇಕ ಕಡೆ ಪವರ್ ಕಟ್ ಸಮಸ್ಯೆ ಕಾಡುವುದು ಇದೇ ವಿದ್ಯುತ್ ಕೊರತೆಯ ಕಾರಣಕ್ಕೇ ಹೆಚ್ಚು. ಈ ಸಮಸ್ಯೆ ನೀಗಿಸಲು ಕೇಂದ್ರ ಸರ್ಕಾರ ಪಿಎಂ ಸೋಲಾರ್ ಪೆನಲ್ ಯೋಜನೆ ಜಾರಿಗೆ ತಂದಿದೆ. ರೈತರು ಈ ಯೋಜನೆಯನ್ನು ಅಳವಡಿಸಿಕೊಂಡರೆ ವಿದ್ಯುತ್ ಸ್ವಾವಲಂಬನೆ ಜೊತೆಗೆ ನಿಯಮಿತವಾಗಿ ಹಣವನ್ನೂ ಮಾಡಬಹುದು. ಈ ಯೋಜನೆಯು ರೈತರಿಗೆ, ಸರ್ಕಾರ, ಆರ್ಥಿಕತೆಗೆ ಮತ್ತು ದೇಶಕ್ಕೆ ಬಹಳ ಪ್ರಯೋಜನ ಉಂಟು ಮಾಡುತ್ತದೆ. ಈ ಯೋಜನೆಯನ್ನು ರೈತರು ಹೇಗೆ ಅಳವಡಿಸಿಕೊಳ್ಳುವುದು ಎಂಬಿತ್ಯಾದಿ ವಿವರ ಮುಂದಿದೆ.
ಧಾನ ಮಂತ್ರಿ ಸೌರ ಫಲಕ ಯೋಜನೆ ದೇಶಾದ್ಯಂತ 20 ಲಕ್ಷ ರೈತರಿಗೆ ಉಚಿತವಾಗಿ ಲಭ್ಯ ಇದೆ. ಸ್ವಂತ ಜಮೀನು ಇರುವ ರೈತರು ತಮ್ಮ ನೆಲದ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಂಡು ಅದರಿಂದ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ವಿದ್ಯುತ್ ಅನ್ನು ಸ್ವಂತ ಬಳಕೆಯ ಜೊತೆಗೆ ಸ್ಥಳೀಯ ಡಿಸ್ಕಾಂಗಳಿಗೆ ಮಾರಾಟ ಕೂಡ ಮಾಡಬಹುದು. ಒಂದು ಯೂನಿಟ್ ವಿದ್ಯುತ್ ಅನ್ನು 30 ಪೈಸೆ ದರದಲ್ಲಿ ಮಾರಬಹುದು. ಅಲ್ಲದೇ, ಕೃಷಿಗೆ ಸಾಂಪ್ರದಾಯಿಕ ವಿದ್ಯುತ್ ಅಥವಾ ಡೀಸೆಲ್ ಮೋಟಾರ್ ಬದಲು ಸೋಲಾರ್ ಪಂಪ್ ಗಳನ್ನು ರೈತರು ಅಳವಡಿಸಿಕೊಳ್ಳಬಹುದು. ಇದಕ್ಕೆ ಸರ್ಕಾರದಿಂದ ಶೇ. 60ರಷ್ಟು ಸಬ್ಸಿಡಿ ಕೂಡ ಸಿಗುತ್ತದೆ.
ಸರ್ಕಾರ ನೀಡಿರುವ ಅಂದಾಜು ಪ್ರಕಾರ, ಒಂದು ಮೆಗಾ ವ್ಯಾಟ್ ಘಟಕದಿಂದ ಒಂದು ವರ್ಷದಲ್ಲಿ 11 ಲಕ್ಷ ಯೂನಿಟ್ ನಷ್ಟು ಸೌರ ವಿದ್ಯುತ್ ಉತ್ಪಾದಿಸಬಹುದು. ಇಷ್ಟೂ ವಿದ್ಯುತ್ ಅನ್ನು ಯೂನಿಟ್ಗೆ 30 ಪೈಸೆಯಂತೆ ಮಾರಿದರೆ ವರ್ಷದಲ್ಲಿ 3.36 ಲಕ್ಷ ರೂ ಗಳಿಸಬಹುದು.
ಒಂದು ಮೆಗಾ ವ್ಯಾಟ್ ಸೌರ ಶಕ್ತಿ ಉತ್ಪಾದನೆಗೆ ಸುಮಾರು 72 ಸಾವಿರ ಚದರ ಅಡಿ ಜಾಗ ಬೇಕಾಗುತ್ತದೆ. ಅಂದರೆ ಸುಮಾರು ಒಂದೂವರೆಯಿಂದ ಎರಡು ಎಕರೆಯವರೆಗೆ ಜಾಗ ಬೇಕಾಗುತ್ತದೆ. ಇದಕ್ಕೆ 4 ಸಾವಿರ ಸೌರ ಫಲಕಗಳನ್ನು ಹಾಕಬೇಕು. ಅಂದಾಜು ವೆಚ್ಚ 4 ಕೋಟಿಯಷ್ಟಾಗಬಹುದು. ಇದಕ್ಕೆ ಸಬ್ಸಿಡಿ ಸಿಗುತ್ತದೆ, ಅಥವಾ ಸರ್ಕಾರವೇ ಉಚಿತವಾಗಿ ಒದಗಿಸುವ ಸಾಧ್ಯತೆ ಇದೆ.
ಈ ಯೋಜನೆಯನ್ನು ಅಳವಡಿಸಲು ಆಸಕ್ತರಾಗುವ ರೈತರು ಆನ್ಲೈನಿನಲ್ಲೇ ಅರ್ಜಿ ಸಲ್ಲಿಸಬಹುದು. ಪಿಎಂ ಸೋಲಾರ್ ಪೆನಲ್ ಯೋಜನೆಯ ಅಧಿಕೃತ ವೆಬ್ ಸೈಟಿಗೆ ಹೋದರೆ ಅಲ್ಲಿ ಅರ್ಜಿ ಸಲ್ಲಿಸುವ ವಿವರ ಸಿಗುತ್ತದೆ. ಮುಖ್ಯಪುಟದಲ್ಲೇ ಸೋಲಾರ್ ರೂಫ್ ಟಾಪ್ ಪೋರ್ಟಲ್ನ ಲಿಂಕ್ ಇರುತ್ತದೆ. ಅಲ್ಲಿಗೆ ಹೋಗಿ ನೊಂದಾಯಿಸಿಕೊಳ್ಳಬಹುದು.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Fri, 6 January 23