ಐದು ತಿಂಗಳ ಹಿಂದ ಪ್ರಾರಂಭಿಸಲಾದ ಪಿಎಂ ವಿಶ್ವಕರ್ಮ ಯೋಜನೆ ದೇಶದ ಕುಶಲಕರ್ಮಿಗಳಿಗೆ (artisans and craftsmen) ವರದಾನವಾಗಿ ಪರಿಣಮಿಸಿದೆ. ಕೇಂದ್ರ ಎಂಎಸ್ಎಂಇ ಸಚಿವಾಲಯದ ವತಿಯಿಂದ ನಡೆಸಲಾಗುವ 13,000 ಕೋಟಿ ರೂ ಮೊತ್ತದ ಈ ಸ್ಕೀಮ್ನಲ್ಲಿ ಅಡಮಾನ ರಹಿತ ಸಾಲದ ಜೊತೆಗೆ ಕುಶಲಕರ್ಮಿಗಳ ಕೌಶಲ್ಯವೃದ್ಧಿ, ಆಧುನಿಕ ಪರಿಕರ, ಮಾರ್ಕೆಟಿಂಗ್ ಟೆಕ್ನಿಕ್ ಇತ್ಯಾದಿ ವಿವಿಧ ಸ್ತರಗಳಲ್ಲಿ ಸರ್ಕಾರ ಸಹಾಯ ಒದಗಿಸುತ್ತದೆ. ಸಣ್ಣ ಮತ್ತು ಮಧ್ಯಮ ಗಾತ್ರ ಉದ್ದಿಮೆಗಳ ವಲಯದಲ್ಲಿ ಕರಕುಶಲಕರ್ಮಿಗಳ ಪಾತ್ರ ಹೆಚ್ಚಿದೆ. ಇವರನ್ನು ಆಧುನಿಕ ತಂತ್ರಜ್ಞಾನಕ್ಕೆ ತೆರೆಯುವಂತೆ ಮಾಡುವುದು ಈ ಯೋಜನೆಯ ಗುರಿ. ಗಾರೆ ಕೆಲಸದವರಿಂದ ಹಿಡಿದು ಕಾರ್ಪೆಂಟರ್, ಮೀನು ಬಲೆ ತಯಾರಕರವರೆಗೆ 18 ವಿವಿಧ ಕುಶಲಕರ್ಮಿ ವರ್ಗದವರು ಈ ಯೋಜನೆಯ (PM Vishwakarma Yojana) ವ್ಯಾಪ್ತಿಗೆ ಬರುತ್ತಾರೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಬೇರೆ ಬೇರೆ ಸ್ಕೀಮ್ಗಳಲ್ಲಿ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಡೀಟೇಲ್ಸ್
ಈ ಯೋಜನೆಯ ಎಲ್ಲಾ ಫಲಾನುಭವಿಗಳಿಗೂ ಅವರವರ ಕ್ಷೇತ್ರದಲ್ಲಿನ ಪರಿಣಿತಿ ಗುರುತಿಸಿ ಪಿಎಂ ವಿಶ್ವಕರ್ಮ ಸರ್ಟಿಫಿಕೇಟ್ ಮತ್ತು ಐಡಿ ಕಾರ್ಡ್ ನೀಡಲಾಗುತ್ತದೆ.
ಕುಶಲಕರ್ಮಿಯ ಕೌಶಲ್ಯ ಮಟ್ಟವನ್ನು ಪರಿಶೀಲಿಸಿ ಅವರಿಗೆ ಅನುಕೂಲವಾಗುವಂತೆ 15,000 ರೂಗಳ ಟೂಲ್ಕಿಟ್ ಒದಗಿಸಲಾಗುತ್ತದೆ.
ಯೋಜನೆಯ ಫಲಾನುಭವಿಗಳು ಐದರಿಂದ ಏಳು ದಿನಗಳವರೆಗೆ ಮೂಲಭೂತ ಕೌಶಲ ತರಬೇತಿ ಪಡೆಯಲಿದ್ದಾರೆ. ಈ ತರಬೇತಿ ಅವಧಿಯಲ್ಲಿ ಅವರಿಗೆ ದಿನಕ್ಕೆ 500 ರೂ ಸ್ಟೈಪೆಂಡ್ ಕೂಡ ಸಿಗುತ್ತದೆ. ಆ ವೃತ್ತಿಯಲ್ಲಿ ಬಳಸಲಾಗುವ ಆಧನಿಕ ಪರಿಕರಗಳು, ಬ್ರ್ಯಾಂಡಿಂಗ್ ವಿಧಾನಗಳು, ಹಣಕಾಸು ಕಲೆ, ಉದ್ಯಮಶೀಲತೆ, ಸಾಲ ಸೌಲಭ್ಯ, ಮಾರ್ಕೆಟಿಂಗ್ ತಂತ್ರಗಾರಿಕೆ ಇವೆಲ್ಲದರ ತರಬೇತಿ ಮತ್ತು ಪರಿಚಯ ನೀಡಲಾಗುತ್ತದೆ.
ಮೂಲಭೂತ ತರಬೇತಿ ಬಳಿಕ 15 ದಿನಗಳ ಉನ್ನತ ತರಬೇತಿ ಅವಕಾಶ ಕೂಡ ಇರುತ್ತದೆ. ಈ ಹಂತದಲ್ಲೂ ದಿನಕ್ಕೆ 500 ರೂ ಸಹಾಯ ಧನ ನೀಡಲಾಗುತ್ತದೆ. ವೃತ್ತಿಯಲ್ಲಿ ಹೆಚ್ಚು ಪರಿಣಿತಿ ಸಾಧಿಸಲು ಈ ಉನ್ನತ ತರಬೇತಿ ಮುಖ್ಯವಾಗುತ್ತದೆ.
ಬೇಸಿಕ್ ಸ್ಕಿಲ್ ಟ್ರೈನಿಂಗ್ ಅಥವಾ ಮೂಲಭೂತ ಕೌಶಲ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಒಂದು ಲಕ್ಷ ರೂವರೆಗೆ ಸಾಲ ಸೌಲಭ್ಯ ಕೊಡಲಾಗುತ್ತದೆ. ಇದಕ್ಕೆ ಬಡ್ಡಿದರ ಬಹಳ ಕಡಿಮೆ ಇರುತ್ತದೆ.
ಉನ್ನತ ಮಟ್ಟದ ತರಬೇತಿ ಪಡೆದವರಿಗೆ ಹಾಗೂ ಡಿಜಿಟಲ್ ವಹಿವಾಟು ಬಳಸುತ್ತಿರುವವರಿಗೆ, ಮತ್ತು ಹಿಂದೆ ಪಡೆದುಕೊಂಡ ಸಾಲದ ಮರುಪಾವತಿ ಮಾಡಿದವರಿಗೆ ಸಾಲದ ಮೊತ್ತವನ್ನು 2 ಲಕ್ಷ ರೂಗೆ ಹೆಚ್ಚಿಸಲಾಗುತ್ತದೆ.
ಕುಶಲಕರ್ಮಿಗಳ ಉತ್ಪನ್ನಗಳು ಮಾರುಕಟ್ಟೆ ತಲುಪುವುದು ಸುಲಭವಾಗುವಂತೆ ಮಾರ್ಕೆಟಿಂಗ್ ಸಪೋರ್ಟ್ ಒದಗಿಸಲಾಗುತ್ತದೆ. ಇಕಾಮರ್ಸ್, ಜಿಇಎಂ ಪ್ಲಾಟ್ಫಾರ್ಮ್ಗಳಲ್ಲಿ ಬ್ರ್ಯಾಂಡಿಂಗ್ ಪ್ರಚುರಪಡಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ