ಮುಂಬೈ, ಫೆಬ್ರುವರಿ 18: ವಾರ್ನರ್ ಮ್ಯೂಸಿಕ್ ಇಂಡಿಯಾ ಪ್ರೈವೇಟ್ ಲಿ ಸಂಸ್ಥೆ ಮುಂಬೈನ ಪ್ರತಿಷ್ಠಿತ ಓಶಿವಾರ ಪ್ರದೇಶದಲ್ಲಿ (Oshiwara, Mumbai) ಕಚೇರಿ ಸ್ಥಾಪಿಸುತ್ತಿದೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಸೇರಿದ ಕಚೇರಿ ಸ್ಥಳವನ್ನು ವಾರ್ನರ್ ಮ್ಯೂಸಿಕ್ ಪಡೆದಿದೆ. ಓಶಿವಾರ ಏರಿಯಾದಲ್ಲಿರುವ ಲೋಟಸ್ ಸಿಗ್ನೇಚರ್ ಕಟ್ಟಡದ 21ನೇ ಮಹಡಿಯಲ್ಲಿ ಅಮಿತಾಭ್ ಬಚ್ಚನ್ ನಾಲ್ಕು ಕಚೇರಿ ಸ್ಥಳಗಳನ್ನು ಹೊಂದಿದ್ದಾರೆ. ಬಚ್ಚನ್ ಅವರಿಂದ ಅಷ್ಟೂ ಜಾಗವನ್ನು ವಾರ್ನರ್ ಮ್ಯೂಸಿಕ್ ಬಾಡಿಗೆಗೆ ಪಡೆದುಕೊಂಡಿದೆ. ಐದು ವರ್ಷದ ಅವಧಿಗೆ ಒಪ್ಪಂದ ಆಗಿದೆ. ಮಾರ್ಚ್ ತಿಂಗಳಿಂದ ಬಾಡಿಗೆ ಅವಧಿ ಶುರುವಾಗುತ್ತದೆ.
2023ರ ಆಗಸ್ಟ್ ತಿಂಗಳಲ್ಲಿ ಹತ್ತು ಸಾವಿರ ಚದರಡಿ ವಿಸ್ತೀರ್ಣದ ಜಾಗವನ್ನು ಅಮಿತಾಭ್ ಬಚ್ಚನ್ ಖರೀದಿಸಿದ್ದರು. 21ನೇ ಮಹಡಿಯಲ್ಲಿರುವ ಈ ಜಾಗದಲ್ಲಿ ನಾಲ್ಕು ಕಮರ್ಷಿಯಲ್ ಆಫೀಸ್ ಯೂನಿಟ್ಗಳು ಒಳಗೊಂಡಿವೆ. ಒಂದೊಂದು ಯೂನಿಟ್ ಅನ್ನೂ 7.18 ಕೋಟಿ ರೂ ಬೆಲೆಗೆ ಬಚ್ಚನ್ ಪಡೆದಿದ್ದರು. ಈಗ ಈ ನಾಲ್ಕೂ ಯೂನಿಟ್ಗಳನ್ನು ವಾರ್ನರ್ ಮ್ಯೂಸಿಕ್ ಬಾಡಿಗೆಗೆ ಪಡೆದಿದೆ.
ವಾರ್ನರ್ ಮ್ಯೂಸಿಕ್ ಈ ಆಫೀಸ್ ಜಾಗಕ್ಕೆ ತಿಂಗಳಿಗೆ 17.30 ಲಕ್ಷ ರೂ ಬಾಡಿಗೆ ನೀಡಲಿದೆ. ಇದು ಮೂರು ವರ್ಷಕ್ಕೆ ನೀಡುವ ಬಾಡಿಗೆ. ಆ ಬಳಿಕ ಬಾಡಿಗೆ ಹಣ 19.90 ಲಕ್ಷ ರೂಗೆ ಏರಲಿದೆ. ಇದರೊಂದಿಗೆ ಅಮಿತಾಭ್ ಬಚ್ಚನ್ ವರ್ಷವೊಂದರಲ್ಲಿ ಎರಡು ಕೋಟಿ ರೂಗೂ ಹೆಚ್ಚು ಆದಾಯ ಗಳಿಸಲಿದ್ದಾರೆ. ಒಟ್ಟಾರೆ 11 ಕೋಟಿ ರೂ ಮೊತ್ತವನ್ನು ಬಚ್ಚನ್ ಐದು ವರ್ಷದಲ್ಲಿ ಗಳಿಸಲಿದ್ದಾರೆ. ಈ ಬಾಡಿಗೆ ಕರಾರಿನ ಪ್ರಕಾರ ಬಚ್ಚನ್ ಒಂದು ಕೋಟಿ ರೂ ಸೆಕ್ಯೂರಿಟಿ ಡೆಪಾಸಿಟ್ ಅಥವಾ ಅಡ್ವಾನ್ಸ್ ಮೊತ್ತ ಪಡೆಯಲಿದ್ದಾರೆ.
ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿರ್ಬಂಧ: ಫೆ. 29ರ ಡೆಡ್ಲೈನ್ ಮಾರ್ಚ್ 15ಕ್ಕೆ ವಿಸ್ತರಣೆ
ಸೆಲಬ್ರಿಟಿಗಳು ಕಮರ್ಷಿಯಲ್ ಸ್ಪೇಸ್ನಲ್ಲಿ ಹೂಡಿಕೆ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಮನೆಗಿಂತ ಆಫೀಸ್ ಸ್ಪೇಸ್ ಹೆಚ್ಚು ಲಾಭ ತರುತ್ತಿರುವುದು ಇದಕ್ಕೆ ಕಾರಣ. ಇದೇ ಲೋಟಸ್ ಸಿಗ್ನೇಚರ್ ಬ್ಯುಲ್ಡಿಂಗ್ನಲ್ಲಿ ಅಮಿತಾಭ್ ಬಚ್ಚನ್ ಅವರಷ್ಟೇ ಅಲ್ಲ, ಕಾಜಲ್, ಅಜಯ್ ದೇವಗನ್, ಸಾರಾ ಅಲಿ ಖಾನ್, ಮನೋಜ್ ಬಾಜಪೇಯಿ, ಕಾರ್ತಿಕ್ ಆರ್ಯನ್ ಮೊದಲಾದ ಬಾಲಿವುಡ್ ಸೆಲಬ್ರಿಟಿಗಳು ಕಚೇರಿ ಸ್ಥಳಗಳನ್ನು ಖರೀದಿಸಿದ್ದಾರೆ. ಈ ಬಿಲ್ಡಿಂಗ್ ಪಕ್ಕದಲ್ಲೇ ಉದ್ಯಮಿ ಸಾಜಿದ್ ನಾದಿಯಾವಾಲ ಅವರ ಬಿಲ್ಡಿಂಗ್ ಕೂಡ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ