Paytm: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿರ್ಬಂಧ: ಫೆ. 29ರ ಡೆಡ್ಲೈನ್ ಮಾರ್ಚ್ 15ಕ್ಕೆ ವಿಸ್ತರಣೆ
Paytm Payments bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಬಿಸಿನೆಸ್ ಅಂತ್ಯಗೊಳಿಸಲು ಫೆಬ್ರುವರಿ 29ಕ್ಕೆ ಇರುವ ಡೆಡ್ಲೈನ್ ಅನ್ನು ಮಾರ್ಚ್ 15ಕ್ಕೆ ವಿಸ್ತರಿಸಲಾಗಿದೆ. ಹೊಸ ಡೆಪಾಸಿಟ್ ಪಡೆಯುವಂತಿಲ್ಲ, ಹೊಸ ಕ್ರೆಡಿಟ್ ಟ್ರಾನ್ಸಾಕ್ಷನ್ ನಡೆಸುವಂತಿಲ್ಲ ಎಂದು ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ಹಾಕಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಿಂದ ಕೆವೈಸಿ ನಿಯಮಗಳ ಪಾಲನೆ ಆಗಿಲ್ಲದಿರುವುದು ಆರ್ಬಿಐನ ಕ್ರಮಕ್ಕೆ ಪ್ರಮುಖ ಕಾರಣವೆನ್ನಲಾಗಿದೆ.
ನವದೆಹಲಿ, ಫೆಬ್ರುವರಿ 16: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ನಿರ್ಬಂಧ ಕ್ರಮ ಜರುಗಿಸಿರುವ ಆರ್ಬಿಐ, ಈಗ ಇದರ ಡೆಡ್ಲೈನ್ ಅನ್ನು ಫೆಬ್ರುವರಿ 29ರಿಂದ ಮಾರ್ಚ್ 15ಕ್ಕೆ ವಿಸ್ತರಿಸಿದೆ. ಪೇಮೆಂಟ್ಸ್ ಬ್ಯಾಂಕ್ನ ಗ್ರಾಹಕರ (customers of Paytm Payments Bank) ಹಿತ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು, ಅದರಲ್ಲೂ ವರ್ತಕರು, ಪೇಟಿಎಂ ವ್ಯಾಲಟ್ ಉಪಯೋಗಿಸುತ್ತಿರುವವರು, ಫಾಸ್ಟ್ಯಾಗ್, ನ್ಯಾಷನಲ್ ಮೊಬಿಲಿಟಿ ಕಾರ್ಡ್ ಇತ್ಯಾದಿ ಬಳಸುತ್ತಿರುವವರು ತುಸು ನಿರಾಳರಾಗಬಹುದು. ಪೇಟಿಎಂ ಸಂಸ್ಥೆಗೂ ಈ ಡೆಡ್ಲೈನ್ ಸ್ವಲ್ಪ ಉಸಿರಾಡಲು ಅವಕಾಶ ಕೊಡಬಹುದು.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫೆಬ್ರುವರಿ 29ರ ಬಳಿಕ ಯಾವುದೇ ಹೊಸ ಡೆಪಾಸಿಟ್ ಪಡೆಯುವಂತಿಲ್ಲ, ಹೊಸ ಕ್ರೆಡಿಟ್ ಟ್ರಾನ್ಸಾಕ್ಷನ್ ನಡೆಸುವಂತಿಲ್ಲ ಎಂದು ಜನವರಿ 31ರಂದು ಆರ್ಬಿಐ ನಿರ್ಬಂಧ ಹೇರಿತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆ ಜೋಡಿತವಾದ ಯವುದೇ ಸೇವೆಯೂ ಫೆಬ್ರುವರಿ 29ರ ಬಳಿಕ ಸಾಧ್ಯವಾಗುವುದಿಲ್ಲ. ಈಗ ಇದರ ಗಡುವನ್ನು ಮಾರ್ಚ್ 15ಕ್ಕೆ ವಿಸ್ತರಿಸಲಾಗಿದೆ.
ಮಾರ್ಚ್ 15ರವರೆಗೂ ಪೇಟಿಎಂ ಗ್ರಾಹಕರು ತಮ್ಮ ವ್ಯಾಲಟ್ಗೆ ಹಣ ತುಂಬಿಸಿ ಅದರ ಮೂಲಕ ವಹಿವಾಟು ನಡೆಸಬಹುದು. ಫಾಸ್ಟ್ಯಾಗ್ ಉಪಯೋಗಿಸಬಹುದು. ಪೇಮೆಂಟ್ಸ್ ಬ್ಯಾಂಕ್ನಲ್ಲೂ ಅಲ್ಲಿಯವರೆಗೆ ಹೊಸ ಡೆಪಾಸಿಟ್ ಇಡಬಹುದು. ಆದರೆ, ಮಾರ್ಚ್ 15ರ ಬಳಿಕ ಇದು ಸಾಧ್ಯವಾಗುವುದಿಲ್ಲ. ತಮ್ಮ ಖಾತೆಯಲ್ಲಿರುವ ಹಣ ಪೂರ್ಣ ಮುಗಿಯುವವರೆಗೂ ಗ್ರಾಹಕರು ಅದನ್ನು ಬಳಕೆ ಮಾಡಲು ಮಾರ್ಚ್ 15ರ ನಂತರವೂ ಅವಕಾಶ ಇರುತ್ತದೆ.
ಪೇಟಿಎಂ ಬ್ಯಾಂಕ್ಗೆ ಆರ್ಬಿಐನಿಂದ ಯಾಕೆ ನಿರ್ಬಂಧ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ಹೇರಿದ್ದು ದಿಢೀರ್ ನಿರ್ಧಾರ ಅಲ್ಲ. ಪೇಮೆಂಟ್ಸ್ ಬ್ಯಾಂಕ್ನ ಕೆಲ ಖಾತೆಗಳ ಮಧ್ಯೆ ಅನುಮಾನ ಹುಟ್ಟಿಸುವ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಪೇಮೆಂಟ್ಸ್ ಬ್ಯಾಂಕ್ನಲ್ಲಿ ಖಾತೆ ತೆರೆಯುವಾಗ ಕೆವೈಸಿ ನಿಯಮಗಳನ್ನು ಸರಿಯಾಗಿ ಅನುಸರಿಸಲಾಗಿಲ್ಲ. ಹೀಗಾಗಿ, ವಹಿವಾಟಿನ ಜಾಡು ಹಿಡಿಯುವುದು ಕಷ್ಟವಾಗುತ್ತದೆ. ಈ ಬಗ್ಗೆ ಪೇಟಿಎಂ ಬ್ಯಾಂಕ್ಗೆ ಆರ್ಬಿಐ ಬಾರಿ ಬಾರಿ ಎಚ್ಚರಿಕೆಗಳನ್ನು ಕೊಟ್ಟಿತ್ತು. ಆದರೂ ಪೇಟಿಎಂ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕೊನೆಯ ಅಸ್ತ್ರವಾಗಿ ಆರ್ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ವಹಿವಾಟನ್ನೇ ನಿರ್ಬಂಧಿಸುವ ಕ್ರಮ ಜರುಗಿಸಬೇಕಾಯಿತು ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ