Go First: ಗೋ ಫಸ್ಟ್ ಖರೀದಿಗೆ ಬಿಡ್ ಸಲ್ಲಿಸಿದ ಸ್ಪೈಸ್ಜೆಟ್ ಸಿಎಂಡಿ ಅಜಯ್ ಸಿಂಗ್ ಮತ್ತು ಬ್ಯುಸಿ ಬೀ ಏರ್ವೇಸ್
SpiceJet CMD Ajay Singh Bids for Go First: ಸ್ಪೈಸ್ಜೆಟ್ ಏರ್ಲೈನ್ಸ್ನ ಎಂಡಿ ಅಜಯ್ ಸಿಂಗ್ ಮತ್ತು ಬ್ಯುಸಿ ಬೀ ಏರ್ವೇಸ್ ಫೆ. 16ರಂದು ಗೋಫಸ್ಟ್ ಖರೀದಿಗೆ ಬಿಡ್ ಸಲ್ಲಿಸಿದ್ದಾರೆ. ಅಜಯ್ ಸಿಂಗ್ ವೈಯಕ್ತಿಕವಾಗಿ ಬಿಡ್ ಸಲ್ಲಿಸಿದ್ದು, ಇದರಲ್ಲಿ ಸ್ಪೈಸ್ಜೆಟ್ ಭಾಗಿಯಾಗಿಲ್ಲ ಎನ್ನುವುದು ಗೊತ್ತಾಗಿದೆ. ಗೋಫಸ್ಟ್ ಖರೀದಿಗೆ ಒಟ್ಟು ಮೂರು ಬಿಡ್ಗಳು ಸಲ್ಲಿಕೆ ಆಗಿದ್ದು, ಅಜಯ್ ಸಿಂಗ್ ಬಿಡ್ ಗೆದ್ದರೆ ಸ್ಪೈಸ್ಜೆಟ್ ಸಹಾಯ ಕೂಡ ಸಿಗಲಿದೆ.
ನವದೆಹಲಿ, ಫೆಬ್ರುವರಿ 16: ದಿವಾಳಿ ತಡೆ ಪ್ರಕ್ರಿಯೆಯಲ್ಲಿರುವ (insolvency process) ಗೋಫಸ್ಟ್ ಕಂಪನಿಯನ್ನು ಖರೀದಿಸಲು ಸ್ಪೈಸ್ಜೆಟ್ನ ನಿರ್ವಾಹಕ ನಿರ್ದೇಶಕರಾದ ಅಜಯ್ ಸಿಂಗ್ ಮತ್ತು ಬ್ಯುಸಿ ಬೀ ಏರ್ವೇಸ್ ಸಂಸ್ಥೆಯಿಂದ (Busy Bee Airways) ಜಂಟಿಯಾಗಿ ಬಿಡ್ ಸಲ್ಲಿಕೆ ಆಗಿದೆ. ಇಲ್ಲಿ ಅಜಯ್ ಸಿಂಗ್ ತಮ್ಮ ಸ್ಪೈಸ್ಜೆಟ್ ಕಂಪನಿ ವತಿಯಿಂದಲ್ಲ, ವೈಯಕ್ತಿಕವಾಗಿ ಬಿಡ್ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸ್ಪೈಸ್ಜೆಟ್ (SpiceJet) ಕೂಡ ಹೇಳಿಕೆ ಮೂಲಕ ಸ್ಪಷ್ಟಪಡಿಸಿದೆ.
ಇಲ್ಲಿ ಅಜಯ್ ಸಿಂಗ್ ವೈಯಕ್ತಿಕ ಈ ಹೂಡಿಕೆಗೆ ಮುಂದಾಗಿದ್ದಾರಾದರೂ ಒಂದು ವೇಳೆ ಈ ಪ್ರಯತ್ನ ಸಾಕಾರಗೊಂಡಲ್ಲಿ, ಸ್ಪೈಸ್ಜೆಟ್ ಸಂಸ್ಥೆಯಿಂದ ಸಹಾಯ ಹರಿದುಬರಲಿದೆ. ಸಿಬ್ಬಂದಿ, ತಂತ್ರಜ್ಞಾನ, ಔದ್ಯಮಿಕ ಪರಿಣಿತಿ, ಸರ್ವಿಸ್ ಇತ್ಯಾದಿ ನೆರವನ್ನು ಸ್ಪೈಸ್ಜೆಟ್ ಒದಗಿಸಬಹುದು ಎನ್ನಲಾಗಿದೆ.
ಗೋಫಸ್ಟ್ ಮತ್ತು ಸ್ಪೈಸ್ಜೆಟ್ ಎರಡೂ ಕೂಡ ಸಹಭಾಗಿತ್ವದಲ್ಲಿ ಕಾರ್ಯಾಚರಿಸಬಹುದು. ಗೋಫಸ್ಟ್ ವಿಶ್ವಾಸಾರ್ಹತೆ ಮತ್ತು ಮೌಲ್ಯ ಇರುವ ಏರ್ಲೈನ್ ಕಂಪನಿಯಾಗಿದ್ದು, ದೇಶ ಮತ್ತು ವಿದೇಶಗಳ ವಿಮಾನ ನಿಲ್ದಾಣಗಳಲ್ಲಿ ಸ್ಥಳಾವಕಾಶ ಪಡೆದಿದೆ ಎಂದು ಸ್ಪೈಸ್ ಜೆಟ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೋ ಓದಿ: ಫಾಸ್ಟ್ಯಾಗ್ ನೀಡುವ ಅಧಿಕೃತ ಬ್ಯಾಂಕುಗಳ ಪಟ್ಟಿಯಿಂದ ಪೇಟಿಎಂ ಹೊರಕ್ಕೆ; ಇಲ್ಲಿದೆ ಪಟ್ಟಿ
ಇದೇ ವೇಳೆ, ಗೋಫಸ್ಟ್ ಸಂಸ್ಥೆ ತನ್ನ ದಿವಾಳಿ ತಡೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಿಂದ 60 ದಿನಗಳ ಹೆಚ್ಚುವರಿ ಕಾಲಾವಕಾಶ ಪಡೆದಿದೆ. ಗೋಫಸ್ಟ್ನ ಬ್ಯಾಂಕ್ರಪ್ಸಿ ಪ್ರಕರಣದಲ್ಲಿ ರೆಸಲ್ಯೂಶನ್ ಪ್ರೊಫೆಶನಲ್ (ಆರ್ಪಿ) ಆಗಿ ಜವಾಬ್ಧಾರಿ ಹೊತ್ತಿರುವ ಶೈಲೇಂದ್ರ ಅಜ್ಮೇರಾ ಕಳೆದ ವಾರ ಕೋರ್ಟ್ಗೆ ನೀಡಿದ ಮಾಹಿತಿ ಪ್ರಕಾರ ಮೂರು ಸಂಸ್ಥೆಗಳು ಗೋಫಸ್ಟ್ ಅನ್ನು ಖರೀದಿಸಲು ಆಸಕ್ತಿ ತೋರಿದ್ದಾರೆ.
ಇನ್ನು ಸ್ಪೈಸ್ಜೆಟ್ ಕೂಡ ಉತ್ತಮ ಆರ್ಥಿಕ ಸ್ಥಿತಿಯಲ್ಲಿ ಇಲ್ಲ. ಇತ್ತೀಚೆಗಷ್ಟೇ ಒಂದಷ್ಟು ಫಂಡ್ ಪಡೆಯುವಲ್ಲಿ ಅದು ಯಶಸ್ವಿಯಾಗಿದೆ. ತನ್ನ ನಷ್ಟವನ್ನು ಕಡಿಮೆ ಮಾಡಲು ವಿವಿಧ ಮಾರ್ಗೋಪಾಯಗಳನ್ನು ಅನುಸರಿಸುತ್ತಿದೆ. 1,500 ಉದ್ಯೋಗಿಗಳನ್ನು ಲೇ ಆಫ್ ಮಾಡುವ ಮೂಲಕ ವರ್ಷಕ್ಕೆ 100 ಕೋಟಿ ರೂ ಉಳಿಸುವ ತನ್ನ ಪ್ಲಾನ್ ಅನ್ನು ಸ್ಪೈಸ್ಜೆಟ್ ಪ್ರಕಟಿಸಿದೆ.
ಇದನ್ನೂ ಓದಿ: ಜೀವನದಲ್ಲಿ ಸಾಧನೆ ಮಾಡಬೇಕೆ? ಬುದ್ಧಿಯಲ್ಲ, ಮನಸಿನ ಮಾತಿಗೆ ಕಿವಿಗೊಡಿ: ಗೂಗಲ್ ಸಿಇಒ ಸುಂದರ್ ಪಿಚೈ
ಈಗ ಗೋಫಸ್ಟ್ ಅನ್ನು ಅಜಯ್ ಸಿಂಗ್ ಖರೀದಿಸಲು ಯಶಸ್ವಿಯಾದಲ್ಲಿ ಸ್ಪೈಸ್ಜೆಟ್ ಬಿಸಿನೆಸ್ಗೆ ಒಂದಷ್ಟು ಪುಷ್ಟಿ ಸಿಗುತ್ತದೆ. ಗೋಫಸ್ಟ್ಗೆ ಸ್ಪೈಸ್ಜೆಟ್ ಸರ್ವಿಸ್ ಒದಗಿಸುವುದರಿಂದ ಅದಕ್ಕೆ ಹೊಸ ಆದಾಯ ಮೂಲ ಸೇರ್ಪಡೆಯಾಗಲಿದೆ. ಈ ಎಲ್ಲಾ ಲೆಕ್ಕಾಚಾರದಲ್ಲಿ ಅಜಯ್ ಸಿಂಗ್ ಸಾಕಷ್ಟು ರಿಸ್ಕ್ ತೆಗೆದುಕೊಂಡು ಗೋಫಸ್ಟ್ ಖರೀದಿಗೆ ಬಿಡ್ ಸಲ್ಲಿಸಿರುವಂತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ