ಒಂದು ಕಾಲಕ್ಕೆ ಅಮೆರಿಕವನ್ನೇ ಮೀರಿಸಿ ನಂಬರ್ ಒನ್ ಆಗಹೊರಟಿದ್ದ ಜಪಾನ್ ಈಗ 4ನೇ ಸ್ಥಾನಕ್ಕೆ ಕುಸಿತ; ಓವರ್​ಟೇಕ್ ಮಾಡಲು ಭಾರತವೂ ಸಿದ್ಧ

Japan vs Germany: ಒಂದು ಕಾಲದಲ್ಲಿ ವಿಶ್ವದ ನಂಬರ್ ಒನ್ ಆರ್ಥಿಕತೆಯಾಗಲಿದ್ದ ಜಪಾನ್ ಇದೀಗ 3ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದೆ. 4.5 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜರ್ಮನಿ ಜಪಾನ್ ಅನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರಿದೆ. 3.7 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಭಾರತ ಮುಂದಿನ 2-3 ವರ್ಷದಲ್ಲಿ ಜರ್ಮನಿ ಮತ್ತು ಜಪಾನ್ ಎರಡನ್ನೂ ಹಿಂದಿಕ್ಕುವ ಸನ್ನಾಹದಲ್ಲಿದೆ.

ಒಂದು ಕಾಲಕ್ಕೆ ಅಮೆರಿಕವನ್ನೇ ಮೀರಿಸಿ ನಂಬರ್ ಒನ್ ಆಗಹೊರಟಿದ್ದ ಜಪಾನ್ ಈಗ 4ನೇ ಸ್ಥಾನಕ್ಕೆ ಕುಸಿತ; ಓವರ್​ಟೇಕ್ ಮಾಡಲು ಭಾರತವೂ ಸಿದ್ಧ
ಜಪಾನ್
Follow us
|

Updated on: Feb 16, 2024 | 5:57 PM

ನವದೆಹಲಿ, ಫೆಬ್ರುವರಿ 16: ಜಪಾನ್ ಆರ್ಥಿಕತೆ (Japan economy) ಒಂದು ಕಾಲಕ್ಕೆ ವಿಶ್ವದ ಸೂಪರ್ ಸ್ಟಾರ್ ಆಗಿ ಮಿಂಚುತಿತ್ತು. ಈಗಿನ ಚೀನಾ ರೀತಿಯಲ್ಲಿ ಆಗ ಜಪಾನ್ ನಾಗಾಲೋಟ ನಡೆಸಿತ್ತು. ಅಮೆರಿಕವನ್ನೇ ಮೀರಿಸಿ ವಿಶ್ವದ ಅತಿದೊಡ್ಡ ಆರ್ಥಿಕ ದೇಶವಾಗಬಹುದು ಎಂದು ಎಲ್ಲರೂ ಜಪಾನ್ ಬಗ್ಗೆ ನಿರೀಕ್ಷಿಸಿದ್ದರು. ಇಂತಿಪ್ಪ ಜಪಾನ್ ಮೊದಲು ಚೀನಾಗೆ ದಾರಿ ಬಿಟ್ಟುಕೊಟ್ಟಿತು. ಈಗ ಜರ್ಮನಿಯೂ ಜಪಾನ್ ಅನ್ನು ಓವರ್​ಟೇಕ್ ಮಾಡಿದೆ. ಜಪಾನ್ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ 3ನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಜರ್ಮನಿಯ ಜಿಡಿಪಿ 4.5 ಟ್ರಿಲಿಯನ್ ಡಾಲರ್ ಇದ್ದರೆ, ಜಪಾನ್​ನದ್ದು 4.2 ಟ್ರಿಲಿಯನ್ ಡಾಲರ್ ಆಗಿದೆ. ಇದು ಅಲ್ಲಿನ ಸರ್ಕಾರಗಳು ಕಳೆದ ತಿಂಗಳು ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಜಪಾನ್ ಕೆಳಗಿಳಿಯಲು ಏನು ಕಾರಣ?

ಜಪಾನ್​ನ ನೈಜ ಜಿಡಿಪಿ ಕಳೆದ ನಾಲ್ಕೈದು ವರ್ಷಗಳಿಂದ ಜರ್ಮನಿಗಿಂತ ಉತ್ತಮ ಬೆಳವಣಿಗೆ ಸಾಧಿಸಿದೆ. ಆದರೆ, ಜಪಾನ್​ಗೆ ಹಿನ್ನಡೆ ತಂದಿರುವುದು ಅದರ ಕರೆನ್ಸಿ ಮೌಲ್ಯ ಕುಸಿತ. ಡಾಲರ್ ಎದುರು ಯೆನ್ ಕರೆನ್ಸಿ ಮೌಲ್ಯ ಕಡಿಮೆ ಆಗಿದೆ. ಇದು ಜಪಾನ್​ನ ಪ್ರಮುಖ ರಫ್ತುದಾರರಿಗೆ ಅನುಕೂಲವಾಗಿದೆಯಾದರೂ ಅದರ ಒಟ್ಟಾರೆ ಜಿಡಿಪಿ ನಕಾರಾತ್ಮಕ ಬೆಳವಣಿಗೆಗೆ ದೂಡಿದೆ. ಕಳೆದ ವರ್ಷ ಜುಲೈನಿಂದ ಸತತ ಎರಡು ಕ್ವಾರ್ಟರ್​ನಲ್ಲಿ ಜಪಾನ್ ಜಿಡಿಪಿ ಬೆಳವಣಿಗೆ ದರ ಮೈನಸ್​ನಲ್ಲಿದೆ. ಬ್ರಿಟನ್ ರೀತಿಯಲ್ಲಿ ಜಪಾನ್ ಕೂಡ ತಾಂತ್ರಿಕವಾಗಿ ಆರ್ಥಿಕ ಹಿಂಜರಿತದ ಸ್ಥಿತಿಗೆ ದೂಡಲ್ಪಟ್ಟಿದೆ.

ಇದನ್ನೂ ಓದಿ: ಕೇಂದ್ರದ 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಎಷ್ಟು ವೆಚ್ಚ? ಇಲ್ಲಿದೆ ಡೀಟೇಲ್ಸ್

ಜಪಾನ್ ಮತ್ತು ಜರ್ಮನಿ ಎರಡೂ ಕೂಡ ನಾನಾ ಸಮಸ್ಯೆಗಳಿಂದ ಬಳಲುತ್ತಿವೆ. ಜನಸಂಪನ್ಮೂಲ ಕೊರತೆ ಕಾಡುತ್ತಿದೆ. ಜನನ ಪ್ರಮಾಣ, ಜನಸಂಖ್ಯೆ, ಕೆಲಸ ಮಾಡುವ ವರ್ಗದ ಸಂಖ್ಯೆ ಹೀಗೆ ಎಲ್ಲವೂ ಕಡಿಮೆ ಆಗಿದೆ. ಇದು ಈ ಎರಡು ದೇಶಗಳ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಿವೆ.

ಆದರೆ, ಜರ್ಮನಿ ದೇಶ ಒಂದೆರಡು ದಶಕಗಳಿಂದ ತನ್ನ ಆರ್ಥಿಕತೆಯನ್ನು ಹೆಚ್ಚು ಮುಕ್ತವಾಗಿ ತೆರೆದಿದೆ. ಸಾಕಷ್ಟು ಹೂಡಿಕೆಗಳು ಮತ್ತು ಕಾರ್ಮಿಕರು ಆ ದೇಶಕ್ಕೆ ಬರುವಂತಾಗಲು ಇದು ಸಹಾಯಕವಾಗಿದೆ. ಇದರಿಂದ ಜರ್ಮನಿಯ ಆರ್ಥಿಕತೆ ಇವತ್ತು ಹೆಚ್ಚು ದೀರ್ಘವಾಗಿ ಉಸಿರಾಡಲು ಸಾಧ್ಯವಾಗಿದೆ. ಜಪಾನ್​ಗೆ ಈ ಭಾಗ್ಯವೂ ಇಲ್ಲವಾಗಿದೆ.

ಭಾರತವೂ ಓವರ್​ಟೇಕ್ ಮಾಡಲು ಸಿದ್ಧ…

ಆರ್ಥಿಕತೆಯಲ್ಲಿ ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕುವ ಸನ್ನಾಹದಲ್ಲಿ ಭಾರತ ಇದೆ. ಭಾರತದ ಜಿಡಿಪಿ ಸದ್ಯ 3.7 ಟ್ರಿಲಿಯನ್ ಡಾಲರ್ ಇದೆ. ಜರ್ಮನಿಯದ್ದು 4.5 ಟ್ರಿಲಿಯನ್ ಡಾಲರ್ ಆದರೆ ಜಪಾನ್​ನದ್ದು 4.2 ಟ್ರಿಲಿಯನ್ ಡಾಲರ್. ಆದರೆ, ಭಾರತದ ಆರ್ಥಿಕತೆ ಶೇ. 7ರ ಆಸುಪಾಸಿನ ದರದಲ್ಲಿ ಬೆಳೆಯುತ್ತಿದೆ. ಇದೇ ರೀತಿ ಮುಂದುವರಿದರೆ 2 ಅಥವಾ 3 ವರ್ಷದಲ್ಲಿ ಜರ್ಮನಿ ಮತ್ತು ಜಪಾನ್ ಎರಡನ್ನೂ ಭಾರತ ಹಿಂದಿಕ್ಕಿ 3ನೇ ಸ್ಥಾನಕ್ಕೇರಬಹುದು.

ಇದನ್ನೂ ಓದಿ: ಜೀವನದಲ್ಲಿ ಸಾಧನೆ ಮಾಡಬೇಕೆ? ಬುದ್ಧಿಯಲ್ಲ, ಮನಸಿನ ಮಾತಿಗೆ ಕಿವಿಗೊಡಿ: ಗೂಗಲ್ ಸಿಇಒ ಸುಂದರ್ ಪಿಚೈ

ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳು (ಟಾಪ್ 10)

  1. ಅಮೆರಿಕ: 27 ಟ್ರಿಲಿಯನ್ ಡಾಲರ್
  2. ಚೀನಾ: 18 ಟ್ರಿಲಿಯನ್ ಡಾಲರ್
  3. ಜರ್ಮನಿ: 4.5 ಟ್ರಿಲಿಯನ್ ಡಾಲರ್
  4. ಜಪಾನ್: 4.2 ಟ್ರಿಲಿಯನ್ ಡಾಲರ್
  5. ಭಾರತ: 3.7 ಟ್ರಿಲಿಯನ್ ಡಾಲರ್
  6. ಬ್ರಿಟನ್: 3.3 ಟ್ರಿಲಿಯನ್ ಡಾಲರ್
  7. ಫ್ರಾನ್ಸ್: 3 ಟ್ರಿಲಿಯನ್ ಡಾಲರ್
  8. ಇಟಲಿ: 2.1 ಟ್ರಿಲಿಯನ್ ಡಾಲರ್
  9. ಬ್ರೆಜಿಲ್: 2.1 ಟ್ರಿಲಿಯನ್ ಡಾಲರ್
  10. ಕೆನಡಾ: 2.1 ಟ್ರಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ