ಬಹಳ ಸುರಕ್ಷಿತವಾದ ಹಾಗೂ ನಂಬಬಹುದಾದ ಹೂಡಿಕೆ ಅಂತ ಯಾರದಾದರೂ ಮನಸಿನಲ್ಲಿ ಮೊದಲಿಗೆ ಬರುವುದಾದರೆ ಅದು ಫಿಕ್ಸೆಡ್ ಡೆಪಾಸಿಟ್ ಅಥವಾ ಬ್ಯಾಂಕ್ನಲ್ಲಿನ ಉಳಿತಾಯ ಖಾತೆ ಆಗಿರುತ್ತದೆ. ಆದರೆ ಅದರಷ್ಟೇ ಪರಿಣಾಮಕಾರಿಯಾದ ಪರ್ಯಾಯಗಳೂ ಸಹ ಇರುತ್ತವೆ. ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಮೂಲಕ ಹಣವನ್ನು ಉಳಿತಾಯ ಮಾಡಬಹುದು ಅಥವಾ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಎಂಬುದನ್ನು ಸಹ ಪರಿಗಣಿಸಬಹುದು. ಈ ವಿಧಾನದ ಮೂಲಕ ಹಣ ಮತ್ತು ಬಡ್ಡಿಗೆ ಸುರಕ್ಷತೆಯೂ ಹಾಗೂ ಭದ್ರತೆಯೂ ದೊರೆಯುತ್ತದೆ. ಇದರಲ್ಲಿ ಅಪಾಯವೂ ಕಡಿಮೆ ಹಾಗೂ ಉತ್ತಮ ರಿಟರ್ನ್ಸ್ ಸಹ ಸಿಗುತ್ತದೆ. ಆದ್ದರಿಂದ ಈ ಸ್ಕೀಮ್ ಬಗ್ಗೆ ಮಾಹಿತಿ ಇಲ್ಲಿದೆ.
ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಖಾತೆ
ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಖಾತೆಗೆ ಸರ್ಕಾರದ ಖಾತ್ರಿ ಇರುತ್ತದೆ. ಸಣ್ಣ ಮೊತ್ತದ ಕಂತುಗಳಲ್ಲಿ ಹಣವನ್ನು ಠೇವಣಿ ಮಾಡಲಾಗುತ್ತದೆ. ಈ ಹಣಕ್ಕೆ ಉತ್ತಮ ಬಡ್ಡಿ ದರ ಸಿಗುತ್ತದೆ. ಈ ಯೋಜನೆಗೆ ಕನಿಷ್ಠ 100 ರೂಪಾಯಿಯಿಂದ ಹೂಡಿಕೆ ಶುರು ಮಾಡಬಹುದು. ಇದರಲ್ಲಿ ಗರಿಷ್ಠ ಮಿತಿ ಅಂತೇನೂ ಇಲ್ಲ. ಅದರಲ್ಲಿ ಹೂಡಿಕೆಗೆ ಗರಿಷ್ಠ ಮಿತಿ ಇಲ್ಲ. ಎಷ್ಟು ಬೇಕಾದರೂ ಠೇವಣಿ ಮಾಡಬಹುದು. ಉಳಿತಾಯ ಖಾತೆ ಅಥವಾ ಫಿಕ್ಸೆಡ್ ಡೆಪಾಸಿಟ್ ಖಾತೆಯನ್ನು ಬ್ಯಾಂಕ್ನಲ್ಲಿ ತೆರೆಯುವಾಗ ವಿವಿಧ ಅವಧಿಯ ಅವಕಾಶ ಸಿಗುತ್ತದೆ. ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಖಾತೆಯನ್ನು ನಿರ್ದಿಷ್ಟ 5 ವರ್ಷಗಳ ಅವಧಿಗೆ ತೆರೆಯಬೇಕು.
ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಬಡ್ಡಿ ದರ
ಈ ಸ್ಕೀಮ್ನಲ್ಲಿ ವಾರ್ಷಿಕ ಬಡ್ಡಿ ದರ ಶೇ 5.8ರಷ್ಟು ದೊರೆಯುತ್ತದೆ. ಈ ಬಡ್ಡಿ ದರವನ್ನು ಏಪ್ರಿಲ್ 1, 2020ರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಪ್ರತಿ 3 ತಿಂಗಳಿಗೊಮ್ಮೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ನಿರ್ಧರಿಸುತ್ತದೆ. ಕಾಂಪೌಂಡ್ ಬಡ್ಡಿ ದರವನ್ನು ಪ್ರತಿಉ 3 ತಿಂಗಳಿಗೊಮ್ಮೆ ಲೆಕ್ಕ ಹಾಕಲಾಗುತ್ತದೆ. ಈ ಮೂಲಕ ಹೂಡಿಕೆದಾರರಿಗೆ ಪರಿಣಾಮಕಾರಿಯಾದ ಬಡ್ಡಿ ದರ ದೊರೆಯುವುದಕ್ಕೆ ಅನುಕೂಲ ಆಗುತ್ತದೆ.
ಒಂದು ವೇಳೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೂ ಅಂತಿಟ್ಟುಕೊಳ್ಳಿ. ಬಡ್ಡಿ ದರ ಶೇ 5.8 ಇದೆ ಅಂತಲೇ ಅಂದುಕೊಂಡು, 10 ವರ್ಷಗಳ ಅವಧಿಗೆ ಹೂಡಿಕೆ ಮಾಡಿದಲ್ಲಿ 16 ಲಕ್ಷ ರೂಪಾಯಿಯಷ್ಟು ರಿಟರ್ನ್ಸ್ ಸಿಗುತ್ತದೆ.
ಕೆಲವು ಹೂಡಿಕೆ ಹೇಗಿರುತ್ತದೆ ಅಂದರೆ, ಕೇಳುವುದಕ್ಕೆ ಅತ್ಯಾಕರ್ಷಕವಾಗಿ ಇರುತ್ತದೆ. ಆದರೆ ಈ ಸ್ಕೀಮ್ನಲ್ಲಿ ವಾಸ್ತವವೂ ಅದೇ ಆಗುತ್ತದೆ. ಉಳಿತಾಯದ ಗುರಿ ಏನು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ತಿಂಗಳು ತಿಂಗಳು ಸರಿಯಾಗಿ ಹಣ ಕಟ್ಟಬೇಕು. ಒಂದು ವೇಳೆ ಯಾವುದಾದರೂ ತಿಂಗಳು ತಪ್ಪಿಸಿದಲ್ಲಿ ಅಥವಾ ತಡವಾಗಿ ಪಾವತಿಸಿದಲ್ಲಿ ಅದಕ್ಕೆ ಪ್ರತಿ ತಿಂಗಳು ಶೇ 1ರಷ್ಟು ದಂಡ ಪಾವತಿಸಬೇಕಾಗುತ್ತದೆ. ಸತತವಾಗಿ ನಾಲ್ಕು ತಿಂಗಳು ಕಂತು ಕಟ್ಟದಿದ್ದಲ್ಲಿ ಖಾತೆಯು ತಾನಾಗಿಯೇ ಕ್ಲೋಸ್ ಆಗಿಬಿಡುತ್ತದೆ. ಆದರೆ ಹಾಗೆ ಹಣ ಪಾವತಿಸದ ಎರಡು ತಿಂಗಳ ಒಳಗಾಗಿ ಮತ್ತೆ ಖಾತೆಯನ್ನು ಸಕ್ರಿಯಗೊಳಿಸಬಹುದು. ಒಂದು ವೇಳೆ ಆ ಅವಕಾಶವನ್ನೂ ಕಳೆದುಕೊಂಡರೆ ಶಾಶ್ವತವಾಗಿ ಇದು ಮುಚ್ಚಿಹೋಗುತ್ತದೆ.
ಇಲ್ಲಿ ಪ್ರಸ್ತಾವ ಮಾಡಬೇಕಾದ ಮತ್ತೊಂದು ಅಂಶ ಇದೆ. ಖಾತೆಯನ್ನು ತೆರೆದ ಒಂದು ವರ್ಷ ಪೂರ್ತಿ ಆದ ಮೇಲೆ ಠೇವಣಿಯ ಶೇ 50ರ ವರೆಗೆ ವಿಥ್ಡ್ರಾ ಮಾಡುವ ಅವಕಾಶ ಇರುತ್ತದೆ. ವಯಕ್ತಿಕವಾಗಿ ರಿಬೇಟ್ ವ್ಯವಸ್ಥೆಯನ್ನು ಆರಿಸಿಕೊಳ್ಳಬಹುದು, ಆರು ಕಂತುಗಳು ಮಾತ್ರ ಇರುವಂತೆ ಮಿತಿ ಇರುತ್ತದೆ. ಖಾತೆದಾರರು ಒಂದು ವೇಳೆ ಮೃತಪಟ್ಟಲ್ಲಿ ಆ ಮೊತ್ತ ಯಾರಿಗೆ ಹೋಗಬೇಕು ಎಂಬುದನ್ನು ನಾಮಿನಿಯನ್ನು ಹೆಸರಿಸಬಹುದು. ಇದನ್ನು ಯಾವ ಸಂದರ್ಭದಲ್ಲಾದರೂ ಮಾಡಬಹುದು.
(Post Office Recurring Deposit Scheme Here Is The Must Know Details By Investors)