ಕರ್ನಾಟಕದ ಚರ್ಮಕಾರರಿಗೆ ಭರ್ಜರಿ ಆದಾಯ? ಕೊಲ್ಹಾಪುರಿ ಚಪ್ಪಲಿಗಾಗಿ ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ ಪ್ರದಾ ಡೀಲ್

Italy fashion brand Prada signs MoU for Kolhapuri chappals: ಚರ್ಮಕಾರರ ಸಂಘಟನೆಗಳಾದ ಲಿಡ್ಕಾಮ್ ಮತ್ತು ಲಿಡ್ಕರ್ ನಿಗಮಗಳ ಜೊತೆ ಇಟಲಿಯ ಪ್ರದಾ ಸಂಸ್ಥೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ. ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ ಆಗಿರುವ ಪ್ರದಾ ಇದೀಗ ಕೊಲ್ಹಾಪುರಿ ಚಪ್ಪಲಿಗಳನ್ನು ಹೊರಜಗತ್ತಿಗೆ ಪರಿಚಯಿಸಲಿದೆ. ಪ್ರದಾ ತಿಳಿಸಿದ ವಿನ್ಯಾಸದಲ್ಲಿ ಚಪ್ಪಲಿಗಳನ್ನು ಚರ್ಮಕಾರರು ಕೊಲ್ಹಾಪುರಿ ಚಪ್ಪಲಿಗಳನ್ನು ತಯಾರಿಸಿಕೊಡಲಿದ್ದಾರೆ.

ಕರ್ನಾಟಕದ ಚರ್ಮಕಾರರಿಗೆ ಭರ್ಜರಿ ಆದಾಯ? ಕೊಲ್ಹಾಪುರಿ ಚಪ್ಪಲಿಗಾಗಿ ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ ಪ್ರದಾ ಡೀಲ್
ಕೊಲ್ಹಾಪುರಿ ಶೈಲಿಯ ಚಪ್ಪಲಿ

Updated on: Dec 12, 2025 | 3:47 PM

ನವದೆಹಲಿ, ಡಿಸೆಂಬರ್ 12: ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಸಾಂಪ್ರದಾಯಿಕವಾಗಿ ಬೆಳೆದುಬಂದಿರುವ ಕೊಲ್ಹಾಪುರಿ ಶೈಲಿಯ ಚಪ್ಪಲಿಗಳಿಗೆ ಅಂತಾರಾಷ್ಟ್ರೀಯ ಬೇಡಿಕೆ ಬಂದಿದೆ. ಇಟಲಿ ಮೂಲದ, ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ ಎನಿಸಿರುವ ಪ್ರದಾ (Prada) ಇದೀಗ ಕೊಲ್ಹಾಪುರಿ ಚಪ್ಪಲಿ (Kolhapuri Chappals) ಖರೀದಿಸಲು ಭಾರತೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸುದ್ದಿ ಕೇಳಿ ಬಂದಿದೆ.

ಲೆದರ್ ಉದ್ಯಮದ ಪ್ರೋತ್ಸಾಹಕ್ಕೆಂದು ಇರುವ ಸರ್ಕಾರಿ ಸ್ವಾಮ್ಯದ ಲಿಡ್ಕಾಮ್ ಮತ್ತು ಲಿಡ್ಕರ್ ನಿಗಮ ಸಂಸ್ಥೆಗಳ ಜೊತೆ ಪ್ರದಾ ಎಂಒಯು ಒಪ್ಪಂದ ಮಾಡಿಕೊಂಡಿದೆ. ಮುಂಬೈನಲ್ಲಿರುವ ಇಟಲಿ ರಾಯಭಾರ ಕಚೇರಿಯಲ್ಲಿ ನಡೆದ ಇಟಲಿ-ಭಾರತ ಬ್ಯುಸಿನೆಸ್ ಫೋರಂ ಸಂದರ್ಭದಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಸಿಇಒಗೆ ಕ್ರಿಕೆಟ್, ಕೋಡ್ ಕ್ರೇಜ್; ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಅನಾಲಿಸಿಸ್ ಆ್ಯಪ್ ಕಟ್ಟುತ್ತಿರುವ ಸತ್ಯ ನಾದೆಲ್ಲ

ಕೆಲ ತಿಂಗಳ ಹಿಂದೆ ನಡೆದ ಪ್ರದಾ ಫ್ಯಾಷನ್ ಶೋ ಸಂದರ್ಭದಲ್ಲಿ ಕೆಲ ಮಾಡಲ್​ಗಳು ಕೊಲ್ಹಾಪುರಿ ಶೈಲಿಯ ಚಪ್ಪಲಿ ಧರಿಸಿ ರಾಂಪ್​ವಾಕ್ ಮಾಡುತ್ತಿದ್ದದರ ದೃಶ್ಯ ವೈರಲ್ ಆಗಿತ್ತು. ಕೃಪೆಗಾಗಿಯೂ ಭಾರತ ಅಥವಾ ಕೊಲ್ಹಾಪುರದ ಹೆಸರು ನಮೂದಾಗದೇ ಹೋಗಿದ್ದು ಸಾಕಷ್ಟು ಟೀಕೆಗಳಿಗೂ ಕಾರಣವಾಗಿತ್ತು. ಅದರ ಬೆನ್ನಲ್ಲೇ ಪ್ರದಾ ಬಹಿರಂಗವಾಗಿಯೇ ಕೊಲ್ಹಾಪುರಿ ಚಪ್ಪಲಿಗೆ ಡೀಲ್ ಮಾಡಿಕೊಳ್ಳುತ್ತಿದೆ.

ಕೊಲ್ಹಾಪುರಿ ಶೈಲಿಯ ಚಪ್ಪಲಿಗಳು ಮಹಾರಾಷ್ಟ್ರದ ಕೊಲ್ಹಾಪುರಿಯಲ್ಲಿ ಮಾರಾಟವಾಗುತ್ತವೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಈ ಶೈಲಿಯ ಚಪ್ಪಲಿಗಳನ್ನು ತಯಾರಿಸುವ ಚರ್ಮಕಾರರು ಇದ್ದಾರೆ. ಪ್ರದಾ ಕಂಪನಿಯ ವಿನ್ಯಾಸ ಮತ್ತು ಸಾಮಗ್ರಿಗಳನ್ನು ಬಳಸಿ ಈ ಚರ್ಮಕಾರರು ತಮ್ಮ ಸಾಂಪ್ರದಾಯಿಕ ವಿಧಾನಗಳಿಂದ ಚಪ್ಪಲಿಗೆ ತಯಾರಿಸಿಕೊಡುವುದು ಈ ಡೀಲ್​ನ ಮುಖ್ಯಾಂಶವಾಗಿದೆ.

ಒಂದು ಬಿಲಿಯನ್ ಡಾಲರ್ ರಫ್ತು ನಿರೀಕ್ಷಿಸುತ್ತಿರುವ ಸಚಿವ ಗೋಯಲ್

ಪ್ರದಾ ಕಂಪನಿ ಕೊಲ್ಹಾಪುರಿ ಚಪ್ಪಲಿಗಾಗಿ ಭಾರತದ ಚರ್ಮಕಾರರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬೆಳವಣಿಗೆಯನ್ನು ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣಕ್ಕೆ ಮೈಕ್ರೋಸಾಫ್ಟ್​ನಿಂದ 1.50 ಲಕ್ಷ ಕೋಟಿ ರೂ ಹೂಡಿಕೆ

‘ಕೊಲ್ಹಾಪುರಿ ಬ್ರ್ಯಾಂಡ್ ಮತ್ತು ಕೊಲ್ಹಾಪುರಿ ವಿನ್ಯಾಸಗಳನ್ನು ಈ ಜಗತ್ತಿಗೆ ತೋರಿಸಲು ಸಾಧ್ಯವಾಗುತ್ತಿದೆ ಎಂದು ಸಂತೋಷವಾಗುತ್ತಿದೆ. ಭಾರತದಿಂದ ಒಂದು ಬಿಲಿಯನ್ ಡಾಲರ್ ಮೊತ್ತದಷ್ಟು ಕೊಲ್ಹಾಪುರಿ ಚಪ್ಪಲಿಗಳನ್ನು ರಫ್ತು ಮಾಡಲು ಸಾಧ್ಯ ಎಂಬುದು ನನ್ನ ಭಾವನೆ. ಯಾಕೆಂದರೆ, ಈ ಚಪ್ಪಲಿಯನ್ನು ಒಮ್ಮೆ ಧರಿಸಿದವರು ಬೇರೆ ಯಾವ ಚಪ್ಪಲಿಯನ್ನೂ ಧರಿಸಲು ಇಚ್ಛಿಸುವುದಿಲ್ಲ’ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ