ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸಲು ಪಳಗಿರುವ ರಾಮದೇವ್ ಅಗರ್ವಾಲ್ ಅವರ ಟ್ರಿಕ್ಸ್ಗಳಿವು…
Investor Raamdeo Agrawal tips on selecting stocks for investment: ಭಾರತದ ಅತಿದೊಡ್ಡ ಹಾಗೂ ಅತ್ಯಂತ ಯಶಸ್ವಿ ಹೂಡಿಕೆದಾರರಲ್ಲಿ ರಾಮದೇವ್ ಅಗರ್ವಾಲ್ ಒಬ್ಬರು. ಇವರು ಹೂಡಿಕೆ ಮಾಡಿರುವ ಅನೇಕ ಷೇರುಗಳು ಮಲ್ಟಿಬ್ಯಾಗರ್ ಆಗಿ ಓಡಿವೆ. ಮಲ್ಟಿಬ್ಯಾಗರ್ ಆಗಬಲ್ಲ ಷೇರನ್ನು ಮೊದಲೇ ಗುರುತಿಸುವುದು ಹೇಗೆ, ಯಾವ ರೀತಿಯ ಷೇರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಟಿಪ್ಸ್ ನೀಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ (Stock Market) ಹೂಡಿಕೆ ಮಾಡುವುದು ಕೆಲವರಿಗೆ ಜೂಜು, ಕೆಲವರಿಗೆ ತಂತ್ರಗಾರಿಕೆ. ಒಂದು ಕಂಪನಿಯ ಷೇರು ಒಂದು ಹಂತದಲ್ಲಿ 10 ರೂಪಾಯಿ ಇದ್ದದ್ದು ಒಂದಷ್ಟು ವರ್ಷಗಳ ನಂತರ 300 ರೂಪಾಯಿ ಆದ ರೀತಿಯ ನಿದರ್ಶನಗಳನ್ನು ನಾವು ನೀವು ನೋಡಿರುತ್ತೇವೆ. ಕ್ಷಿಪ್ರ ವೇಗದಲ್ಲಿ ಷೇರುಬೆಲೆ ಮುಗಿಲು ಮುಟ್ಟಿದಂತಹ ಷೇರುಗಳನ್ನು ಮಲ್ಟಿಬ್ಯಾಗರ್ ಷೇರು ಎಂದು ಕರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಒಂದು ಷೇರು ಮಲ್ಟಿಬ್ಯಾಗರ್ ಆಗಬಲ್ಲುದು ಎಂದು ಆರಂಭಿಕ ಹಂತದಲ್ಲೇ ಗುರುತಿಸುವ ಜಾಣ್ಮೆ ಮತ್ತು ಕೌಶಲ ಕೆಲವರಿಗಷ್ಟೇ ಸಿದ್ಧಿಸಿರುವುದು. ಅಂಥ ನೈಪುಣ್ಯತೆ ಹೊಂದಿರುವ ಹೂಡಿಕೆದಾರರಲ್ಲಿ ರಾಮದೇವ್ ಅಗರವಾಲ್ ಅವರೂ ಒಬ್ಬರು.
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಛೇರ್ಮನ್ ಆಗಿರುವ ರಾಮದೇವ್ ಅಗರ್ವಾಲ್ ಹಲವು ಮಲ್ಟಿಬ್ಯಾಗರ್ಗಳನ್ನು ಚಿಗುರಿನಲ್ಲೇ ಗುರುತಿಸಿ, ಹೂಡಿಕೆ ಮಾಡಿ, ಸಮಯ ಬಂದಾಗ ಮಾರಿ ಭಾರೀ ಲಾಭ ಕಂಡಿದ್ದಾರೆ. ಅವರಿಗೆ ಒಂದು ಷೇರಿಗೆ ಯಾವ ಎಂಟ್ರಿ ಆಗಬೇಕು, ಯಾವಾಗ ಎಕ್ಸಿಟ್ ಆಗಬೇಕು ಎಂಬ ಅತ್ಯಗತ್ಯ ಕಲೆ ಗೊತ್ತಿದೆ. ಅವರು ಹೇಗೆ ಯೋಚಿಸುತ್ತಾರೆ, ಯಾವೆಲ್ಲಾ ಅಂಶಗಳನ್ನು ಪರಿಗಣಿಸುತ್ತಾರೆ, ಈ ರಹಸ್ಯವನ್ನು ಅವರೇ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸಖತ್ತಾಗಿ ಲಾಭ ತಂದ ಫಂಡ್; 2,000 ರೂ ಎಸ್ಐಪಿ; 5 ಕೋಟಿ ರೂ ಲಾಭ
ಮಾರುಕಟ್ಟೆ ಕಣ್ಣು ಬೀಳುವ ಮುಂಚೆಯೇ ರಾಮದೇವ್ ಚಿತ್ತ
ಸಣ್ಣದಾಗಿರುವ ಆದರೆ ಒಳ್ಳೆಯ ಗುಣಮಟ್ಟದಲ್ಲಿರುವ, ಮತ್ತು ಮಾರುಕಟ್ಟೆಯಲ್ಲಿ ಇನ್ನೂ ಎಲೆಮರೆಯಲ್ಲೇ ಇರುವಂತಹ, ಹಾಗೂ ಭವಿಷ್ಯದಲ್ಲಿ ಸಖತ್ ಬೆಳೆಯಬಲ್ಲ ಶಕ್ತಿ ಇರುವ ಒಂದು ಬ್ಯುಸಿನೆಸ್ ಅನ್ನು ರಾಮದೇವ್ ಗಮನಿಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಬಾಲಕೃಷ್ಣ ಇಂಡಸ್ಟ್ರೀಸ್. ಅದು 100 ಕೋಟಿ ರೂ ಇದ್ದಾಗ ಹೂಡಿಕೆ ಮಾಡಿದ್ದರು. ಪಿಇ ರೇಶಿಯೋ ಕೇವಲ 1 ಇತ್ತು. ಯಾರೂ ಕೇಳೋರೇ ಇರಲಿಲ್ಲ. ರಾಮದೇವ್ ಅವರು ಕಂಪನಿ ಬಳಿಯೇ ಹೋಗಿ ಅವರ ಬ್ಯುಸಿನೆಸ್ ಕಥೆ ತಿಳಿದುಕೊಂಡರು. ನಂತರ, 100 ರೂ ಇದ್ದ ಅದರ ಷೇರು ಎರಡು ವರ್ಷದಲ್ಲಿ 1,200 ರೂ ಆಯಿತು.
ಪೆಗ್ ರೇಶಿಯೋ ಗಮನಿಸಿ…
ಯಾವ ಬೆಲೆಗೆ ಒಂದು ಷೇರು ಖರೀದಿಸಬೇಕು ಎನ್ನುವ ಗೊಂದಲ ಎಲ್ಲಾ ಹೂಡಿಕೆದಾರರಿಗೆ ಇರುವಂತೆ ರಾಮದೇವ್ ಅವರಿಗೂ ಇರುತ್ತದೆ. ಆದರೆ, ಈ ಸಮಸ್ಯೆಗೆ ಪರಿಹಾರವಾಗಿ ಅವರು ಪಿಇಜಿ ರೇಶಿಯೋ (PEG) ಬಳಸುತ್ತಾರೆ. ಪಿಇಜಿ ಎಂದರೆ ಪ್ರೈಸ್ ಅಂಡ್ ಅರ್ನಿಂಗ್ಸ್ ಟು ಗ್ರೋತ್. ಈ ಪೆಗ್ ಅನುಪಾತ ಒಂದಕ್ಕಿಂತ ಕಡಿಮೆ ಇದ್ದರೆ ಉತ್ತಮ.
ಆರ್ಒಇ ಓಕೆ, ಆದರೆ, ಬಂಡವಾಳ ಇದೆಯಾ ನೋಡಿ…
ಒಂದು ಕಂಪನಿಯ ಆರ್ಒಇ ಅಥವಾ ರಿಟರ್ನ್ ಆನ್ ಈಕ್ವಿಟಿ ಕನಿಷ್ಠ ಶೇ. 25ರಷ್ಟಿರಬೇಕು. ಆದರೆ, ಉತ್ತಮ ಆರ್ಒಇ ಇದ್ದರೂ ಒಂದು ಕಂಪನಿಗೆ ವರ್ಕಿಂಗ್ ಕ್ಯಾಪಿಟಲ್ ಕಡಿಮೆ ಇದ್ದರೆ ಏನೂ ಉಪಯೋಗ ಇಲ್ಲ. ಈ ಎರಡೂ ಅಂಶಗಳು ಸರಿಯಾಗಿ ಇದ್ದ ಕಂಪನಿಗಳನ್ನು ಆಯ್ದುಕೊಳ್ಳಬೇಕು ಎನ್ನುತ್ತಾರೆ ಅಗರ್ವಾಲ್
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್
ಬ್ಯುಸಿನೆಸ್ ಮಾಲೀಕರ ಜೊತೆಗೆಯೇ ಮಾತನಾಡುವ ರಾಮದೇವ್
ಒಂದು ಕಂಪನಿಯನ್ನು ಅದರ ಟೆಕ್ನಿಕಲ್ ಪ್ಯಾರಾಮೀಟರ್ಗಳಿಂದೇ ಅಳೆಯುವುದಕ್ಕಿಂತ, ಆ ಬ್ಯುಸಿನೆಸ್ ಅನ್ನೇ ನಡೆಸುತ್ತಿರುವವರ ಜೊತೆ ಕುಳಿತು ತಮಗೆ ಬೇಕಾದ್ದನ್ನು ಫಸ್ಟ್ ಹ್ಯಾಂಡ್ ಆಗಿ ತಿಳಿಯುತ್ತಾರೆ ರಾಮದೇವ್ ಅಗರ್ವಾಲ್. ಅವರ ಬ್ಯುಸಿನೆಸ್ನ ವಿತರಣೆ, ಉತ್ಪನ್ನದ ಗುಣಮಟ್ಟ, ಮ್ಯಾನೇಜ್ಮೆಂಟ್ ಪ್ರವೃತ್ತಿ ಇವೆಲ್ಲವನ್ನೂ ಅವರು ಗಮನಿಸುತ್ತಾರೆ. ಒಂದು ಕಂಪನಿ ನೆಲಕಚ್ಚಲು ಅಥವಾ ಫೀನಿಕ್ಸ್ನಂತೆ ಮೇಲೇರಲು ಸಾಧ್ಯವಿರುವುದು ಮ್ಯಾನೇಜ್ಮೆಂಟ್ ಕೈಯಲ್ಲೇ. ಇದನ್ನು ಪ್ರತ್ಯಕ್ಷ ನೋಡಿಯೇ ತಿಳಿಯಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




