ಚಿಕ್ಕ ವಯಸ್ಸಿನಲ್ಲಿ ಕೋಟ್ಯಧಿಪತಿಗಳಾದ (Millionaires) ಹಲವರ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಮಾರ್ಕ್ ಝುಕರ್ಬರ್ಗ್ ಮೊದಲಾದವರೆಲ್ಲಾ ಕಾಲೇಜು ಓದುತ್ತಿರುವಾಗಲೇ ವ್ಯವಹಾರ ನಡೆಸಿ ಈಗ ಶತಕೋಟ್ಯಧಿಪತಿಗಳಾಗಿದ್ದಾರೆ. ಅಂತೆಯೇ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ವಾರಸುದಾರರಾಗಿ ಕೋಟ್ಯಧಿಪತಿಗಳಾದ ಹಲವು ಎಳೆಯರೂ ಇದ್ದಾರೆ. ಇವರ ಮಧ್ಯೆ ಆಸ್ಟ್ರೇಲಿಯಾದ 11 ವರ್ಷದ ಬಾಲಕಿ ಪಿಕ್ಸೀ ಕರ್ಟಿಸ್ (Pixie Curtis) ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಈ ವಯಸ್ಸಿನಲ್ಲಿ ಈಕೆ ಒಂದು ಕಂಪನಿಯ ಸಿಇಒ. ದಿನಕ್ಕೆ 1 ಕೋಟಿ ರುಪಾಯಿಗೂ ಹೆಚ್ಚು ಸಂಪಾದನೆ ಮಾಡುತ್ತಾಳೆ. ಇನ್ಸ್ಟಾಗ್ರಾಮ್ನಲ್ಲಿ ಈಕೆಯನ್ನು ಫಾಲೋ ಮಾಡುತ್ತಿರುವವರಿಗೆ ಪಿಕ್ಸೀ ಕರ್ಟಿಸ್ ಏನು, ಎತ್ತ ಎಂದು ಚಿರಪರಿಚಿತ. ಈ ಹುಡುಗಿ ಕೆಲವೇ ದಿನಗಳಲ್ಲಿ ತನ್ನ 12ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾಳೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಕುತೂಹಲ ಹುಟ್ಟಿಸುವುದರ ಜೊತೆಗೆ ಚರ್ಚೆಯನ್ನೂ ಹುಟ್ಟುಹಾಕಿದೆ.
11 ವರ್ಷದ ಪಿಕ್ಸೀ ಕರ್ಟಿಸ್ ಅವರು ತನ್ನ 12ನೇ ವರ್ಷದ ಜನ್ಮದಿನಾಚರಣೆಗೆ ಸಖತ್ ಸಿದ್ಧತೆ ಮಾಡಿಕೊಂಡಿದ್ದಾಳೆ. ಸಮಾರಂಭಕ್ಕೆ ಬರುವ ಪ್ರತಿಯೊಬ್ಬ ಅತಿಥಿಗೂ ಗುಡೀ ಬ್ಯಾಗ್ ಕೊಡಲಿದ್ದಾಳೆ. ಒಂದೊಂದು ಗುಡೀ ಬ್ಯಾಗ್ನಲ್ಲೂ 50 ಡಾಲರ್ಗಿಂತ ಹೆಚ್ಚು ಮೌಲ್ಯದ ವಿವಿಧ ಸೌಂದರ್ಯವರ್ಧಕಗಳು ಇವೆ. ನಾಲ್ಕು ಸಾವಿರ ರೂಗೂ ಹೆಚ್ಚು ಮೌಲ್ಯದ ಈ ಗುಡೀ ಬ್ಯಾಗ್ಗಳನ್ನು ಮೆಕೋಬ್ಯೂಟಿ ಎಂಬ ಅಸ್ಟ್ರೇಲಿಯಾದ ಲಕ್ಷುರಿ ಬ್ರ್ಯಾಂಡ್ ಸ್ಪಾನ್ಸರ್ ಮಾಡುತ್ತಿದೆ.
ಇದನ್ನೂ ಓದಿ: Viral Video: ಟ್ವಿಟರ್ ಪ್ರಧಾನ ಕಚೇರಿಯ ಮೇಲೆ ಎಕ್ಸ್ ಲೋಗೋ; ಭವಿಷ್ಯ ಉಜ್ವಲವಾಗಿದೆ ಎಂದ ನೆಟ್ಟಿಗರು
ಈ ಜನ್ಮದಿನಾಚರಣೆಯಂದೇ ಕರ್ಟಿಸ್ ಅವರು ಬ್ಯುಸಿನೆಸ್ಗೆ ವಿದಾಯ ಕೂಡ ಹೇಳುತ್ತಿದ್ದಾರೆ. ಕೇವಲ 2 ವರ್ಷದಲ್ಲಿ ಕೋಟಿಕೋಟಿ ಹಣ ಮಾಡುವ ಉದ್ಯಮ ಸ್ಥಾಪಿಸಿದ ಈ 11 ವರ್ಷದ ಪೋರಿ, ಇನ್ಮುಂದೆ ಶಾಲೆಯತ್ತ ಗಮನ ಕೊಡಲು ನಿರ್ಧರಿಸಿದ್ದಾಳೆ. ಓದು ಮುಗಿದ ಬಳಿಕ ತನ್ನ ಹಣಬೇಟೆಯನ್ನು ಇನ್ನಷ್ಟು ಶಕ್ತಿಯುತವಾಗಿ ಮುಂದುವರಿಸುವ ಇರಾದೆ ಇರಬಹುದು.
ಪಿಕ್ಸೀ ಕರ್ಟಿಸ್ 10ನೇ ವಯಸ್ಸಿನಲ್ಲಿ, ಅಂದರೆ 2021ರಲ್ಲಿ ಮೊದಲು ವ್ಯವಹಾರ ಶುರು ಮಾಡಿದ್ದು. ಆಗ ಕೋವಿಡ್ ಸಾಂಕ್ರಾಮಿಕ ಕಾಲಘಟ್ಟ. ಮಕ್ಕಳ ಆಟಿಕೆಗಳಿಗೆ ಬಹಳ ಬೇಡಿಕೆ ಇದ್ದ ಸಂದರ್ಭ. ಪಿಕ್ಸೀ ಕರ್ಟಿಸ್ ಮತ್ತು ಆಕೆಯ ತಾಯಿ ರಾಕ್ಸಿ ಜೆಸೆಂಕೋ ಸೇರಿ ಪಿಕ್ಸೀಸ್ ಎಂಬ ಟಾಯ್ ಕಂಪನಿ ಸ್ಥಾಪಿಸಿದರು. ಮೊದಲಿಗೆ ಪಿಕ್ಸೀಸ್ ಬೌವ್ಸ್ ಎಂಬ ಕಂಪನಿ ಸ್ಥಾಪಿಸಿದರು. ಬಳಿಕ ಪಿಕ್ಸೀಸ್ ಫಿಡ್ಜೆಟ್ಸ್ ಕಂಪನಿ ಸ್ಥಾಪಿಸಿದರು. ಇದರಲ್ಲಿ ಫಿಡ್ಜೆಟ್ ಸ್ಪಿನ್ನರ್ ಆಟಿಕೆ ಬಹಳ ಹಿಟ್ ಆಯಿತು. ಆನ್ಲೈನ್ನಲ್ಲಿ ಈಕೆಯ ಆಟಿಕೆಗಳು ಒಳ್ಳೆಯ ಮಾರಾಟ ಕಂಡವು. ಈ 11 ವರ್ಷದ ಹುಡುಗಿ ಸದ್ಯ ತಿಂಗಳಿಗೆ 1,33,000 ಡಾಲರ್ ಹಣ ಸಂಪಾದಿಸುತ್ತಾಳೆ. ಅಂದರೆ ತಿಂಗಳಿಗೆ 1 ಕೋಟಿ ರೂನಷ್ಟು ಆದಾಯ ಈಕೆಗೆ ಇದೆ.
ಈಗ ಈ ಎಲ್ಲವನ್ನೂ ಬದಿಗಿಟ್ಟು ಈಕೆ ಓದಿನತ್ತ ಮುಖ ಮಾಡಲಿದ್ದಾಳೆ. ಪಿಕ್ಸೀಸ್ ಕಂಪನಿಯ ನಿರ್ವಹಣೆಯನ್ನು ಈಕೆಯ ತಾಯಿ ಮುಂದುವರಿಸಿಕೊಂಡು ಹೋಗಬಹುದು.
ಇದನ್ನೂ ಓದಿ: Alexandr Wang: ವಿಶ್ವದ ಕಿರಿಯ ಬಿಲಿಯನೇರ್, 26 ವರ್ಷದ ಅಲೆಕ್ಸಾಂಡರ್ ವ್ಯಾಂಗ್; ಸ್ಕೇಲ್ ಎಐ ಮಾಲೀಕ
ಪಿಕ್ಸೀ ಕರ್ಟಿಸ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಇವರ ಇನ್ಸ್ಟಾಗ್ರಾಮ್ ಅಕೌಂಟ್ಗೆ 1 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಇದ್ದಾರೆ. ಇದರಲ್ಲಿ ಈಕೆ ಹಾಕುವ ಪೋಸ್ಟ್ಗಳು ಬಹಳ ಮಂದಿಯ ಗಮನ ಸೆಳೆಯುತ್ತವೆ. ತನ್ನ ಬರ್ತ್ಡೇ ಪಾರ್ಟಿ ತಯಾರಿ ಬಗ್ಗೆ, ಹಾಗು ಅತಿಥಿಗಳಗೆ ತಾನು ಕೊಡಲಿರುವ ಸೌಂದರ್ಯವರ್ಧಕಗಳ ಗಿಫ್ಟ್ ಬಗ್ಗೆ ಈಚೆಗೆ ಈಕೆ ಹಾಕಿರುವ ಪೋಸ್ಟ್ಗಳು ಒಂದಷ್ಟು ಚರ್ಚೆಗೆ ಕಾರಣವಾಗಿವೆ.
ಓದುವ ವಯಸ್ಸಿನಲ್ಲಿ ಈಕೆ ಬ್ಯೂಟಿ ಪ್ರಾಡಕ್ಟ್ಗಳನ್ನು ಬಳಸುವುದು, ಪ್ರಚಾರ ಮಾಡುವುದು ಎಷ್ಟು ಸರಿ ಎಂದು ಕೆಲವರು ಕಾಮೆಂಟಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ